Thursday, July 29, 2010

ಹಗರಟಗಿಯ ಅಪೂರ್ವ ದೇವಾಲಯಗಳು




ಹಗರಟಗಿಯು ತಾಲೂಕು ಕೇಂದ್ರವಾದ ಸುರಪುರದಿಂದ ನೈ‌ಋತ್ಯಕ್ಕೆ ೪೮ ಕಿ.ಮೀ.ದೂರದಲ್ಲಿ ದೋಣಿಯ ಎಡ ದಂಡೆಯ ಮೇಲಿರುವ ಚಾರಿತ್ರಿಕ ಮಹತ್ವದ ಪ್ರಾಚೀನ ಕೇಂದ್ರ. ಬೃಹತ್ ಶಿಲಾಯುಗ ಸಂಸ್ಕೃತಿಯ ನೆಲೆಯೂ ಆಗಿದ್ದು ಇದು ಶಾತವಾಹನರ ಕಾಲದ ಅವಶೇಷಗ ಳನ್ನು ಹೊಂದಿದ್ದರೂ ಐತಿಹಾಸಿಕ ದಾಖಲೆಗಳಲ್ಲಿ ನಿಖರವಾಗಿ ಗೋಚರಿಸಲಾರಂಭಿಸುವುದು ಹನ್ನೊಂದನೆಯ ಶತಮಾನದಿಂದೀಚೆಗೆ. ಸುಮಾರು ೧೧- ೧೨ ನೇ ಶತಮಾನದ ಹತ್ತಾರು ಶಿಲಾಶಸನಗಳಲ್ಲಿ ‘ಪಗಲಟ್ ೩೦೦’, ‘ಪಗರಿಟೆಗಾಡು’, ‘ಹಗರಟ್ಟಿಗೆ -೩೦೦’ ಎಂದೇ ಉಲ್ಲೇಖಿತಗೊಂಡು ೩೦೦ ಹಳ್ಳಿಗಳ ಆಡಳಿತ ಕೇಂದ್ರವಾಗಿ , ಧಾರ್ಮಿಕ ಕೇಂದ್ರವಾಗಿ ಮತ್ತು ಶೈಕ್ಷಣಿಕ ಕೇಂದ್ರವಾಗಿ ಮೆರೆದಿರುವ ಈ ಊರಿನಿಂದ ಈವರೆಗೆ೧೨ ಶಾಸನಗಳು ವರದಿಯಾಗಿವೆ. ಇವುಗಳಲ್ಲಿ ೬ ಕಲ್ಯಾಣ ಚಾಲುಕ್ಯರಿಗೂ, ಒಂದು ಕಳಚೂರ್ಯರಿಗೂ ಸೇರಿದ್ದು ಉಳಿದವು ದೇವಗಿರಿಯ ಯಾದವರ ಕಾಲದ್ದಾಗಿವೆ.



ಈ ಮೇಲಿನ ಆಧಾರಗಳಿಂದ ಹಗರಟಗಿಯು ಹಿಂದೆ ಸಾಮರಸ್ಯದ ಉತ್ತಮ ಅಗ್ರಹಾರವಾಗಿದ್ದು ೫೦೦ ಮಹಾಜನರನ್ನು ಹೊಂದಿದ್ದು, ಪಾಂಡವ ದತ್ತಿ ಊರೆಂದು ಪ್ರಸಿದ್ಧವಾಗಿತ್ತೆಂದು ತಿಳಿದುಬರುತ್ತದೆ. ಇವುಗಳಲ್ಲಿ ೬ನೇ ವಿಕ್ರಮಾದಿತ್ಯನ ಆಳ್ವಿಕೆಗೆ ಸೇರಿದ ೧೦೯೨ ರ ಶಾಸನವೇ‌ಅತ್ಯಂತ ಪ್ರಾಚೀನ ಶಾಸನವಾಗಿದ್ದು ಮಹಾಪ್ರಧಾನ ದಂಡನಾಯಕ ಅಹಮಲ್ಲರಸನ ಹಗರಟ್ಟಿಗೆಯ ನಖರೇಶ್ವರ ದೇವರಿಗೆ ೩೦೦ ಮತ್ತರು ಭೂಮಿಯನ್ನು ದಾನಮಾಡಿದ ಅಂಶವನ್ನು ಅರುಹಿದರೆ, ಕರ್ಣನ ಗುಡಿಯ ಮುಂದಿರುವ ೧೧೨೩ ರ ತೃಟಿತ ಶಾಸನ ಅದೇ ನಖರೇಶ್ವರ ದೇವರಿಗೆ ಅಲ್ಲಿನ ಮಾಹಾಜನಗಳೂ ಸೇರಿದಮ್ತೆ ಇತರರು ನೀಡಿದ ವಿವಿಧ ದಾನಗಳ ಬಗ್ಗೆ ಹೇಳುತ್ತದೆ. ಊರ ಪಶ್ಚಿಮದಲ್ಲಿರುವ ಕಳ್ಳರ ಗುಡಿ ಮುಂದಿರುವ ೧೧೨೯ ರ ಭಾಗಶಃ ಹಾಳಾಗಿರುವ ಶಾಸನವು ಮಲ್ಲಿಕಾರ್ಜುನ ಗುಡಿಯ ನಿರ್ಮಾಣದ ಬಗ್ಗೆ ಪ್ರಾಸ್ತಾಪಿಸುತ್ತ ಸಾಂದರ್ಭಿಕವಾಗಿ ಲಕ್ಕಣೇಶ್ವರ ದೇವಾಲಯದ ಬಗೆಗೂ ಹೇಳುತ್ತದೆ.



ಆರನೇ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದ ಹಗರಟಗಿಯ ಮತ್ತೊಂದು ಶಾಸನ ಭೋಗಾರ ನಖರ ಸಂಘದ ೧೨೦ ಒಕ್ಕಲುಗಳು ಕೂಡಿ ಶಿವಾಲಯವನ್ನು ನಿರ್ಮಿಸಿ, ಅನೇಕ ದಾನಗಳನ್ನು ನೀಡಿದ ಅಂಶವನ್ನು ಹೇಳುತ್ತದೆ. ಊರ ಹೊರಗಿರುವ ಬಸವಣ್ಣನ ಗುಡಿಯಲ್ಲಿ ೩ ಶಾಸನಗಳಿದ್ದು ಇವುಗಳಲ್ಲಿ ಇಮ್ಮಡಿ ಜಗದೇಕಮಲ್ಲನ ಕಾಲಕ್ಕೆ ಸೇರಿದ ೧೧೪೪ ರ ಶಾಸನ ಹಗರಟಗಿಯ ಮಹಾಜನರು ಹಾಗೂ ಐಹೊಳೆ- ೫೦೦ ಶ್ರೇಣಿಯು ಸೇರಿದಂತೆ ವಿವಿಧ ವರ್ಗದವರು ತಾವೇ ನಿರ್ಮಿಸಿದ ಗವರೇಶ್ವರ ದೇವರ ಅಂಗಭೋಗಕ್ಕೆಂದು ಮಾಣಿಕೇಶ್ವರದ ಕೋಲಲ್ಲಿ ೫ ಮತ್ತರು ಭೂಮಿಯೂ ಸೇರಿದಂತೆ ವಿವಿಧ ಸುಂಕಗಳನ್ನು ದಾನಬಿಟ್ಟ ವಿಷಯವನ್ನು ತಿಳಿಸುತ್ತದೆ. ಮತ್ತೊಂದು ಶಾಸನ ಕೊಳಗದ ಮಲ್ಲಿಮಯ್ಯ ತಾನು ಮಾಡಿಸಿದ ಮಲ್ಲಿಕಾರ್ಜುನ ದೇವರಿಗೆಂದು ಭೂಮಿಯನ್ನು ಕೊಂಡು ಗವರೇಶ್ವರ ದೇವಾಲಯದ ಆಚಾರ್ಯ ಸೂರ್ಯರಾಶಿ ಪಂಡಿತರಿಗೆ ಧಾರೆಯೆರೆದ ಅಂಶವನ್ನು ಹೇಳುತ್ತದೆ. ಇದೇ ಗುಡಿಯಲ್ಲಿರುವ ೧೧೬೬ ರ ಮೂರನೇ ಶಾಸನ ಕಳಚೂರ್ಯ ಸುಂಕಮದೇವನಾಗಿದ್ದು ,ಅಲ್ಲಿನ ವರ್ತಕರು ಗವರೇಶ್ವರ ಪೂಜೆ ಪುನಸ್ಕಾರಕ್ಕೆಂದು ಭೂಮಿಯನ್ನು ಖರೀದಿಸಿ ದಾನಬಿಟ್ಟ ವಿಷಯವನ್ನು ಹೇಳುತ್ತದೆ. ಅವರು ಖರೀದಿಸಿದ ಭೂಮಿ ಸತ್ರದ ತ್ರೀಕೂಟೇಶ್ವರ ದೇವಾಲಯಕ್ಕೆ ಸೇರಿದ್ದೆಂಬ ಮಹತ್ವದ ವಿಷಯವನ್ನು ತಿಳಿಸುತ್ತದೆ. ಜೊತೆಗೆ ಅಲ್ಲಿಯ ಭೈರವ ದೇವರಿಗೆಂದು ಪ್ರತ್ಯೇಕ ಭೂದಾನ ಬಿಟ್ಟ ಅಂಶವನ್ನು ತಿಳಿಸುತ್ತದೆ.



ಭೀಮನ ಗುಡಿಮುಂದೆ ಬಿದ್ದಿರುವ ಶಿಲಾಶಾಸನವು ಯಾದವ ಇಮ್ಮಡಿ ಸಿಂಘನದೇವ ಆಳ್ವಿಕೆಗೆ ಸೇರಿದ್ದು ೧೨೧೮ ರ ಹಗರಟಗಿಯ ಮಹಾಜನರು ಸೆಟೆಗುತ್ತ,ರಾಮಿಸೆಟ್ಟಿ,ಮಮ್ಮರಿದಂಡರು ಹಾಗೂ ಬಿಲ್ಲ ಮುನ್ನೂರ್ವರು ಮಹಾಸಭೆಯಾಗಿ ನೆರೆದು ಅಲ್ಲಿಯ ಸ್ವಯಂಭು ಭೀಮೇಶ್ವರ ದೇವರ ಸ್ಥಾನಾಚಾರ್ಯ ಬ್ರಹ್ಮರಾಶಿ ಪಂಡಿತರಿಗೆ ದಾನಕೊಟ್ಟ ವಿಷಯ ತಿಳಿಸುತ್ತದೆ.



ತ್ರಿಕೂಟೇಶ್ವರ ,ಸಿಡಿಲಭಾವಿ,ರಾಮನಥಸಿದ್ಧ ಪಂಚಸ್ಥಾನ, ನಖರೇಶ್ವರ, ಗವರೇಶ್ವರ ಹಾಗೂ ಭೈರವನ ದೇವಾಲಯ :


ಈ ಎಲ್ಲ ದೇವಾಲಯಗಳನ್ನು ಇಂದು ಹಗರಟಗಿಯಲ್ಲಿ ಗುರುತಿಸಬಹುದಾಗಿದೆ. ಹಗರಟಗಿಯು ಕೋಟೆಯಿಂದಾವೃತವಾಗಿದ್ದು , ನಾಲ್ಕೂ ದಿಕ್ಕಿನಲ್ಲೂ ಅಗಸೆಗಳನ್ನು ಹೊಂದಿದೆ. ಹಿಂದೆ ರಾಜಕೀಯ ಪ್ರಾಮುಖಪಡೆದ ಈ ಊರು ಇಂದು ಹಾಳಾಗಿದೆ. ಶಾಸನೋಕ್ತ ದೇವಾಲಯಗಳು ಊರಹೊರಗೆ ಶಿಥಿಲಾವಸ್ಥೆಯಲ್ಲಿ ನಿಂತಿವೆ.



ಊರ ಆಗ್ನೇಯಕ್ಕೆ ಬೂದಿಹಾಲ ರಸ್ತೆಯಲ್ಲಿ ನೀಲಕಂಠಗೌಡರ ಹೊಲದಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಸನಸ್ಥ ನಖರೇಶ್ವರ ಗುಡಿಯನ್ನು ಇಂದು ಸ್ಥಳಿಕರು ‘ಕರ್ಣನ ಗುಡಿ’ ಯೆಂದು ಕರೆಯುತ್ತಾರೆ. ಪೂರ್ವಾಭಿಮುಖವಾಗಿರುವ ಈ ಗುಡಿಯು ಗರ್ಭಗೃಹ ,ಅಂತರಾಳ,ನವರಂಗಗಲನ್ನು ಹೊಂದಿದೆ. ನಿರಾಡಂಬರವಾಗಿರುವ ಈ ಗುಡಿಯ ಗರ್ಭಗುಡಿಯು ಬರಿದಾಗಿದ್ದು ,ಇದರ ಬಾಗಲವಾಡವು ಸರಳವಾದ ಮೂರು ಶಾಖೆಗಳನ್ನು ಹೊಂದಿದೆ. ಲಲಾಟದಲ್ಲಿ ಗಜಲಕ್ಷ್ಮಿ ಇದೆ. ನವರಂಗದಲ್ಲಿ ಎರಡು ದೇವ ಕೋಷ್ಟಕಗಳಿದ್ದು ಒಂದರಲ್ಲಿ ನಾಗಶಿಲ್ಪವಿದೆ. ಕದಂಬ ನಾಗರ ಶಿಖರವುಳ್ಳ ಈ ಗುಡಿಯ ಮುಂದಿರುವ ತ್ರುಟಿತ ಶಾಸನ ಉಲ್ಲೇಖಿಸುವ ನಖರೇಶ್ವರ ಗುಡಿ ಇದಾಗಿದ್ದು ಹಿಂದೆ ವರ್ತಕರ ಆರಾದ್ಯ ದ್ವೆವವಾಗಿತ್ತು.

ಬೂದಿಹಾಳ ರಸ್ತೆಯಯಲ್ಲಿ ಸ್ವಲ್ಪ ಎಡಕ್ಕೆ ಇರುವ “ಮೂರು ಕಳಸದ ಗುಡಿ” ಕೂಡಾ ಪೂರ್ವಕವಾಗಿದ್ದು,ಪಶ್ಚಿಮ,ಉತ್ತರ ಹಾಗೂ ದಕ್ಷಿಣದಲ್ಲಿ ಪ್ರತ್ಯೇಕ ಗರ್ಭಗೃಹ ಹಾಗೂ ಅರ್ದ ಮಂಟಪಗಳನ್ನು ಹೊಂದ್ದಿದ್ದು ಇವುಗಳಿಗೆ ಒಂದೇ ನವರಂಗವಿದೆ. ಗರ್ಭಗುಡಿಯ ಬಾಗಿಲವಾಡವು ಸರಳವಾಗಿದ್ದು, ಇಕ್ಕೆಲದಲ್ಲಿ ಪೂರ್ಣ ಕಳಸಗಳಿದ್ದು, ಲಲಾಟವು ನಿರಡಂಬರವಾಗಿದೆ. ಈ ತ್ರಿಕೂಟ ದೇವಾಲಯದ ದಕ್ಷಿಣ ಭಾಗವು ಪೂರ್ಣ ಶಿಥಿಲವಾಗಿದ್ದು, ಕದಂಬ ನಾಗರ ಶೈಲಿಯ ಶಿಖರಗಳು ಉಳಿದೆರಡು ಗರ್ಭಗೃಹಗಳನ್ನು ಅಲಂಕರಿಸಿವೆ.


ಹರಿಜನ ಇರುವ ಕೇರಿಯ “ವೆಕಂಬರಮಣ ಗುಡಿಯ” ಬಳಿ ಇರುವ ಶಾಸನವು ಯಾದವ ಇಮ್ಮಡಿ ಸಿಂಘಣನ ಆಳ್ವಿಕೆಗೆ ಸೇರಿದ್ದು, ೧೨೨೦ ರಲ್ಲಿ ಸಮುಖದಲ್ಲಿ ತ್ರಿಪುರಾಂತಕದೇವ, ದೇವ, ಉಮಾಭವ ಹಾಗೂ ಕೇರವ ದೇವರ ಸೆವೆಗೆಂದು ಚಂದ್ರಶಿವ ಪಂಡಿತರಿಗೆ ನಾಲ್ಕು ಮತ್ತ್ರುರು ಭೂಮಿಯನ್ನು ದಾನ ಬಿಟ್ಟ್ ವಿಷಯನ್ನು ತಿಳಿಸುತ್ತದೆ. ಊರ ಅಗಸಿ ಬಾಗಿಲ ಗೋಡೇಯಲ್ಲಿ ಸೇರಿರುವ ೧೨೨೪ರ ನಿಶಿದ ಶಾಸಾನವು ಜೈನ ಧರ್ಮಕ್ಕೆ ಸೇರಿದ್ದು, ಇಂಗಳೇಶ್ವರಕ್ಕೆ ಅಧಿನವಾಗಿದ್ದ ಮೂಲ ಮೂಲಸಂಘ ಪುಸ್ತಕ ಗಚ್ಚ, ದೇಶಿಯ ಗಣದ ಕೊಂಡಕುಂದ್ರಯಾದ್ರಿಯ ದೇವಚಂದ್ರ ಮುನಿಗಳು ಸಲ್ಲೇಖನ ವೃತವನ್ನು ಆಚರಿಸಿ ನಿರ್ವಾಣ ಹೊಂದಿದ ವಿಚಾರವನ್ನು ತಿಳಿಸುತ್ತದೆ. ಈ ನಿಷಿದೆಗೆಯನ್ನು ಒಬ್ಬರ ಕಾಳಿಸೆಟ್ಟಿ ಮೂಡಿಸಿದನೆಂದು ಹೇಳುತ್ತದೆ. ಇದರಿಂದ ಹಗರಟಗಿಯು ಹಿಂದೆ ಜೈನರ ನೆಲೆಯಾಗಿತ್ತೆಂದು ತಿಳಿದು ಬರುತ್ತದೆ.



ಊರ ಹನುಮಂತನ ಗುಡಿಯಲ್ಲಿ ಇರುವ ೧೨೨೯ರ ಶಾಸನವು ಯಾದವ ಇಮ್ಮಡಿ ಸಿಂಘಣನ ಕಾಲದ್ದಾಗಿದೆ. ಹಗರಟಗಿಯ ಕೇತಗಾವುಂಡನ ಇಬ್ಬರು ಮಕ್ಕಳಾದ ರಾಮಗಾವುಂಡ ಹಾಗೂ ಸಿಂಘಗಾವುಂಡ , ತಾವು ಪ್ರತಿಷ್ಠೆ ಮಾಡಿದ ಸಿಡಿಲ ಬಾವಿ ರಾಮನಾಥ, ಐನೂರೇಶ್ವರ, ಬಾಚೇಶ್ವರ,ಕೇತೇಶ್ವರ ಹಾಗೂ ಚೌಡೇಶ್ವರ ದೇವರುಗಳಿದ್ದ ಪಂಚ ಸ್ಥಾನದ ಎಲ್ಲ ದೇವರುಗಳಿಗೆಂದು ಭೂದಾನಮಾಡಿದ ಸಂದರ್ಭದಲ್ಲಿ ಅಲ್ಲಿಯ ತೊಂಭತ್ತೆರಡು ಜೇಡ ಪಟ್ಟೇಗಾರರು ಆದೇವರಿಗೆ ಚೈತ್ರ-ಪವಿತ್ರಕ್ಕೆಂದು ಒಕ್ಕಲಿಗೆ ಒಂದೊಂದರಂತೆ ಹಾಗೂ ದಾನಕೊಟ್ಟ ಅಂಶವನ್ನು ತಿಳಿಸುತ್ತದೆ. ಭೀಮನಗುಡಿ ಮುಂದೆ ನಾಲ್ಕಾರು ವೀರಗಲ್ಲುಗಳಿದ್ದು ಅವುಗಳಲ್ಲೊಂದರ ಮೇಲಿನ ಶಾಸನವು ತುರುಕಾಳಗದಲ್ಲಿ ಮಡಿದ ತನ್ನಣ್ಣನಿಗಾಗಿ ಈ ಕಲ್ಲನ್ನು ರೇವಣ್ಣ ನಿಲ್ಲಿಸಿದರೆಂದು ಹೇಳುತ್ತದೆ. ಹಗರಟಗಿಯ ಸಾಂಸ್ಕ್ರತಿಕ ಇತಿಹಾಸವನ್ನು ಸ್ವಯಂಭರಿ ಭಿಮೇಶ್ವರ ಲಕ್ಷ್ಮೇನೆಶವರ, ಮಲ್ಲಿಕಾರ್ಜುನ, ತ್ರಿಪುರಾಂತರ, ಇದು ತ್ರಿಕೂಟವಾಗಿದ್ದು, ಹಿಂದೆ ಇಲ್ಲಿ ಶಿಕ್ಷಣ ವ್ಯವಸ್ಥೆ ಇರುತ್ತಿತ್ತು.


ಸಂಗನಗೌಡ ಪೋಲಿಸ ಪಾಟೀಲರ ಹೊಲದಲ್ಲಿರುವ ‘ನಾರಾಯಣ ಗುಡಿ’ ( ಕಳ್ಳರ ಗುಡಿ)ಯು ಗರ್ಭಗ್ರುಹ ತೆರೆದ ಅಂತರಾಳ ಹಾಗೂ ನವರಂಗಗಳನ್ನು ಹೊಂದಿದೆ. ಪೂರ್ವಾಭಿಮುಖವಾಗಿದ್ದು ಶಿಖರವೂ ಸೇರಿದಂತೆ ಹಲವಾರು ಭಾಗಗಳು ಕಣ್ಮರೆಯಾಗಿವೆ. ಶಿಥಿಲಾವಸ್ಥೆಯಲ್ಲಿರುವ ಕಂಬಗಳು ಆಕರ್ಷಕವಾಗಿವೆ. ನವರಂಗದಲ್ಲಿ ದೇವ ಕೋಷ್ಟಗಳಿದ್ದು ಬರಿದಾಗಿವೆ. ಈ ದೇವಾಲಯದ ಮುಂಭಾಗದಲ್ಲಿ ಹೊಂಡವಿದೆ. ಶಾಸನೋಕ್ತ ‘ಮಲ್ಲಿಕಾರ್ಜುನ ಗುಡಿ ‘ ಇದೇ ಆ‌ಅಗಿರಬಹುದು. ಈ ಗುಡಿಯ ಸಮೀಪದಲ್ಲಿಯೆ ಪೂರ್ವಾಭಿಮುಖವಾಗಿ ಗಂಗಾಧರೇಶ್ವರ ಗುದಿ ಇದೆ. ಗರ್ಭಗೃಹ ,ತೆರೆದ ಅಂತರಾಳ, ನವರಂಗ ಹಾಗೂ ನಂದಿ ಮಂತಪಗಳನ್ನುಳ್ಳ ಇದರ ಗರ್ಭಗೃಹದ ಬಾಗಿಲವಾಡವು ನಾಲ್ಕು ಶಾಖೆಗಳನ್ನು ಹೊಂದಿದ್ದು ,ಲಲಾಟದಲ್ಲಿ ಗಜಲಕ್ಷ್ಮಿ ಇದೆ. ಈ ಗುಡಿಗೆ ಪಾರ್ಶ್ವದಿಂದ ಪ್ರವೇಶವಿದೆ. ಜೀರ್ಣಾವಸ್ಥೆಯಲ್ಲಿರುವ ಈ ಗುಡಿಗೆ ಕದಂಬನಾಗರ ಶಿಖರವಿದ್ದು , ಶಾಸನೋಕ್ತಲಕ್ಷ್ಮಣೇಶ್ವರ ಗುಡಿ ಇದೇ ಆಗಿರಬಹುದೆನಿಸುತ್ತದೆ. ಈ ಗುಡಿಯ ಎಡಬದಿಯಲ್ಲಿ ಪುಷ್ಕರಣಿ ಇದೆ.


ಇಲ್ಲಿಯ ಮತ್ತೊಂದು ದೇವಾಲಯವಾದ ಧರ್ಮಲಿಂಗೇಶ್ವರ ಗುಡಿಯು ಪೂರ್ಣ ಜೀರ್ಣೋದ್ಧಾರಗೊಂಡಿದ್ದರೂ ಬೃಹತ್ತಾದ ಬಲಹರಿ ಲಿಂಗವನ್ನು ಒಳಗೊಂಡಿದೆ. ಆಕರ್ಷಕವಾದ ಬಾಗಿಲವಾಡ, ಚಂದ್ರಶಿಲೆ, ಮಕರತೋರಣ,ಭೈರವ, ನಾಗಶಿಲ್ಪ.ಉಮಾಮಹೇಶ್ವರರ ಬಿಡಿ ಶಿಲ್ಪಗಳು ಮುಂ.ಶಿಲ್ಪಾವಶೇಷಗಳನ್ನು ಕಾಣಬಹುದಾಗಿದೆ. ಇಲ್ಲಿಯ ಬಾಗಿಲವಾಡವು ಸುಮಾರು ೧೫ ಅಡಿ ಎತ್ತರವಿದ್ದು, ಸಪ್ತ ಶಾಖೆಗಳನ್ನು ಹೊಂದಿದ್ದು , ಉತ್ತರಾಂಗದಲ್ಲಿ ಕ್ರಮವಾಗಿ ಆದಿತ್ಯ, ಗಣಪ, ಬ್ರಹ್ಮ,ವಿಷ್ಣು, ಶಿವ, ಕಾರ್ತಿಕೇಯ ಹಾಗೂ ಸೂರ್ಯನ ಕಿರು ಶಿಲ್ಪಗಳುಳ್ಳ ಏಳು ಕಿರು ಮಂಟಪಗಳಿದ್ದು ಅವುಗಳ ಶಿಖರಗಳು ವೈವಿಧ್ಯಮಯವಾಗಿವೆ.



ಊರ ಉತ್ತರಕ್ಕಿರುವ ಹನಮಂತನ ಗುಡಿಯು ಕಲ್ಯಾಣದ ಚಾಲುಕ್ಯರ ಕಾಲದ ಕಂಬಗಳನ್ನು ಬಳಸಿ ಅನಂತರದಲ್ಲಿ ನಿಲ್ಲಿಸಿರುವ ದೇವಾಲಯವಾಗಿದೆ. ಈ ಗುಡಿಯಲ್ಲಿರುವ ಶಾಸನ ಉಲ್ಲೇಖಿಸುವ ಸಿಡಿಲಬಾವಿ ‘ಋಷಿಗುಂಡ’ ಎಂದು ಕರೆಯಲ್ಪಡುತ್ತದೆ. ಊರ ಪೂರ್ವಕ್ಕೆ ಸುಮಾರು ಒಂದೂವರೆ ಕಿ.ಮೀ.ದೂರದಲ್ಲಿ ನೀರ್ಚಿಲುಮೆಯೊಂದ ಬಳಿಯಿದ್ದು ಪೂರ್ಣ ಶಿಥಿಲವಾಗಿದೆ.


ಊರ ಉತ್ತರಕ್ಕೆ ಇರುವ ಬಸವಣ್ಣನ ಗುಡಿಯೇ ಶಾಸನೋಕ್ತ ಗವರೇಶ್ವರ ದೇವಾಲಯವಾಗಿದ್ದು , ಗರ್ಭಗೃಹ,ತೆರೆದ ಆಂತರಾಳ ಹಾಗೂ ನವರಂಗಗಳನ್ನು ಹೊಂದಿ ಪೂರ್ವಾಭಿಮುಖವಾಗಿದೆ.

ಚಿದಾನಂದ ಹಿಕ್ಕಲಗುತ್ತಿ ಬಿ.ಎ. ೨


No comments:

Post a Comment