Friday, July 23, 2010

ತಾಳಿಕೋಟಿಯಲ್ಲಿ ಶಿವಸಂಚಾರ ನಾಟಕಗಳು

ಶಿವಸಂಚಾರ - ೦೯
ಸಾಣೇಹಳ್ಳಿಯ ಶಿವಸಂಚಾರಕ್ಕೆ ತನ್ನದೇ ಆದ ಇತಿಹಾಸವಿದೆ.ಕರ್ನಾಟಕದಲ್ಲಿ ಮಠದ ಸ್ವಾಮೀಜಿಯೊಬ್ಬರು ನಾಟಕ ರೆಪರ್ಟರಿ ನಡೆಸುತ್ತಿರುವುದು ಅಪೂರ್ವ ಸಂಗತಿ.ಪ್ರತಿವರ್ಷ   ಮೂರು ನಾಟಕಗಳನ್ನು   ನಾಡಿನುದ್ದಕ್ಕೂ ಸಂಚರಿಸಿ ಪ್ರದರ್ಶಿಸುವುದು ಸಣ್ಣ ಮಾತಲ್ಲ.


 ತಾಳಿಕೋಟಿಯ ನಾಡು ನುಡಿ ಬಳಗದವರು ಶಿವಸಂಚಾರದ ನಾಟಕಗಳ ಪ್ರದರ್ಶನವನ್ನು ೦೯-೧೦-೨೦೧೦ ರಂದು ಏರ್ಪಡಿಸಿದ್ದರು.
೧. ಯಹೂದಿ ಹುಡುಗಿ
೨. ಹೇಮರಡ್ಡಿ ಮಲ್ಲಮ್ಮ
೩. ಕೊಡಲ್ಲ ಕೊಡಕ್ಕಿರಲ್ಲ




ಯಹೂದಿ ಹುಡುಗಿ :


ಇಂದಿನ ಸಂದರ್ಭದಲ್ಲಿ ಜಾತಿ ಜಾತಿಗಳ ಮಧ್ಯ ಗೋಡೆ ಗೋಡೆಗಳೆದ್ದಿವೆ. ಆ ಗೋಡೆಗಳನ್ನು ಒಡೆದು ಮನುಷ್ಯ ಮನುಷ್ಯರಲ್ಲಿ ಬಂಧುತ್ವವನ್ನು ಉದ್ದೀಪಿಸುವುದು- ಈ ನಾಟಕ.
ನಾಟಕ ರಚನೆ : ಆಗಾ ಹಸ್ರ ಕಸ್ಮೀರಿ, ಕನ್ನಡ ಅನುವಾದ ಇಟಗಿ ಈರಣ್ಣ. 
ರೋಮನ್ ಹಾಗೂ ಯಹೂದಿಗಳ ಧರ್ಮ ಸಂಘರ್ಷ ಅತಿರೇಕದ್ದು. ರೋಮನ್ ಯುವರಾಜ ಮಾರ್ಕಸ್ ಮತ್ತು ಯಹೂದಿ ಹುಡುಗಿ ರಾಹೀಲ್ ಳ ನಡುವೆ ಹುಟ್ಟಿದ ಪ್ರೀತಿ ಜಗತ್ತಿಗೆ ಹೊಸ ಸಂದೇಶ ಸಾರುತ್ತದೆ.




ಒಂದು ಕಡೆ ಧರ್ಮ ಇನ್ನೊಂದು ಕಡೆ ಪ್ರೀತಿ ಮುಖಾಮುಖಿಯಾದಾಗ  ಪ್ರೀತಿಗೆ ಜಯ ದೊರೆಯುತ್ತದೆ. ಆದರೆ ಈ ಸಂಗತಿಯನ್ನು ಕಲಾತ್ಮಕವಾಗಿ ಹೆಣೆದ ರೀತಿ ಅದ್ಭುತವಾಗಿದೆ. ಶ್ವೇತ ಎಚ್. ಕೆ, ರಾಹೀಲ್ ಪಾತ್ರಕ್ಕೆ ಜೀವ ತುಂಬಿದರು. ಅದೇ ರೀತಿ ಅಜರಾ ಪಾತ್ರದಲ್ಲಿ ಅರುಣ್ ಚಿಕ್ಕಾನಂಗಲ್ ಗಮನಸೆಳೆದರು..


ಶರಣ ಮುತ್ಯಾನ ಗುಡಿ ಬಯಲಿನಲ್ಲಿ ಮೊದಲ ದಿನ ನಡೆದ ಈ ನಾಟಕ ಗಾಢ ಪರಿಣಾಮ ಬೀರಿತು. ಶಿವಸಂಚಾರ ಅನಂತರದ ನಾಟಕಗಳಿಗೆ ಹೆಚ್ಚಿನ ಜನರನ್ನು ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿತು.


ಹೇಮರಡ್ಡಿ ಮಲ್ಲಮ್ಮ:


ನಲವಡಿ ಶ್ರೀಕಂಠ ಶಾಸ್ತ್ರಿಗಳು ರಚಿಸಿದ ಈ ಪೌರಾಣಿಕ ನಾಟಕ ಅತ್ಯಂತ ಜನಪ್ರಿಯವಾದದ್ದು. ಹೇಮರಡ್ದಿ ಮಲ್ಲಮ್ಮ ತನ್ನ ಪೆದ್ದ ಗಂಡನನ್ನು ಚೆನ್ನಮಲ್ಲಿಕಾರ್ಜುನನೆಂದೇ ಭಾವಿಸಿ ಆದರ್ಶ ಗೃಹಿಣಿ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟಿದ್ದಾಳೆ.ಅಲ್ಲದೆ ಅವಿಭಕ್ತ ಕುಟುಂಬಗಳು ಒಡೆದು ಛಿದ್ರವಾಗುತ್ತಿರುವ ಇಂದಿನ ಸಂದರ್ಭಕ್ಕೆ ಸೂಕ್ತ ಸಂದೇಶ ನೀಡುತ್ತದೆ.ಜೀವದಾಯಕ ಔಷಧವಾಗಿದೆ.ಜನಸಾಮಾನ್ಯ  ಮತ್ತು ಪ್ರಬುದ್ಧ ಪ್ರೇಕ್ಷಕರನ್ನು ಏಕಕಾಲಕ್ಕೆ ರಂಜಿಸುತ್ತದೆ.
ಮಲ್ಲಮ್ಮನ ಮೈದುನ ವೇಮನ ವಿಷಯಾಸಕ್ತ ಸ್ಥಿತಿಯಿಂದ ಆಧ್ಯಾತ್ಮದ ಹಂತಕ್ಕೇರುವ ಸನ್ನಿವೇಶವಂತೂ ನಾಟಕದ ಶಿಖರವಾಗಿದೆ.




ತರಬೇತಿ ಪಡೆದುಕೊಂಡ ಕಲಾವಿದರು ಉತ್ತಮವಾಗಿ  ಅಭಿನಯಿಸಿ  ಪ್ರೇಕ್ಷಕರಲ್ಲಿ ನಾಟಕ ಅಭಿರುಚಿಯನ್ನು  ಹೆಚ್ಚಿಸಿದರು.
ಲಕ್ಷ್ಮೀ ವಿ. ಮಲ್ಲಮ್ಮನಾಗಿ ಗಿರೀಶ ಈಚನಾಳ ಭರಮರಡ್ಡಿಯಾಗಿ ಗಮನಸೆಳೆದರು.ಜೀವನ್ ನೀನಾಸಂ ವೇಮಣ್ಣನಾಗಿ ಅದ್ಭುತ ಅಭಿನಯ ನೀಡಿದರು.


ಕೊಡಲ್ಲ ಕೊಡಕ್ಕಿರಲ್ಲ



ಇಟಲಿಯ ನಾಟಕಕಾರ ನೋಬೆಲ್ ಪ್ರಶಸ್ತಿ ಪುರಸ್ಕೃತ ದಾರಿಯೋ ಪೋ ಅವರ Wont pay,Cant pay- ಕನ್ನಡ ರೂಪಾಂತರವೇ ಕೊಡಲ್ಲ ಕೊಡಕ್ಕಿರಲ್ಲ.


ಹಸಿದ ಹೊಟ್ಟೆಗೆ ಯಾವ ಆದರ್ಶವೂ ಹಿಡಿಸುವುದಿಲ್ಲ.ಬದುಕು ಮುಖ್ಯ ಎನ್ನುವ ವಾಸ್ತವವನ್ನು ಬಿಂಬಿಸುತ್ತದೆ. ಜಾಗತೀಕರಣದ ಆಗಮನದಿಂದಾಗಿ ರೈತರು ದಿಕ್ಕೆಟ್ಟಿದ್ದಾರೆ. ಕಾರ್ಮಿಕರು ಬಸವಳಿದಿದ್ದಾರೆ. ಜನರ ಬದುಕು ಚಿಂತಾಜನಕವಾಗಿದೆ. ಯಂತ್ರದ ಆಗಮನದಿಂದ ಸಣ್ಣಪುಟ್ಟ ವೃತ್ತಿಗಳು ನಾಶವಾಗುತ್ತಲಿವೆ.


ಪ್ರಸ್ತುತ ಸಂದರ್ಭದಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಹೊಟ್ಟೆ. ನಾಟಕದ ಪಾತ್ರಧಾರಿಗಳು ಕಾನೂನು ಮುರಿದು ಹೊಟ್ಟೆಗಾಗಿ ಹೋರಾಟ ನಡೆಸುತ್ತಾರೆ. ಮೇಲ್ನೋಟಕ್ಕೆ ಇದೊಂದು ಪ್ರಹಸನವಾಗಿ ಕಂಡರೂ ನಮ್ಮ ರೈತರ,ಕಾರ್ಮಿಕರ ದಯನೀಯ ಸ್ಥಿತಿಯನ್ನು ಬಿಂಬಿಸುತ್ತದೆ.


ಬಹುಮಾಧ್ಯಮದ ಹಾವಳಿಯಲ್ಲಿ ಸಿಕ್ಕು ನಲುಗುತ್ತಿರುವ ಮಧ್ಯಮ ವರ್ಗದ ಜನರ ಮನಸ್ಸನ್ನು ತಿದ್ದಿ ತೀಡಿ, ಅವರಲ್ಲಿಯ ಕಲಾಭಿರುಚಿಯನ್ನು ಹೆಚ್ಚಿಸುವಲ್ಲಿ ಈ ನಾಟಕಗಳು ಯಶಸ್ವಿಯಾದವು.
 ಸೋಮಶೇಖರ ಕೋಟಿಖಾನಿ ಬಿ.ಎ.೨ 

No comments:

Post a Comment