Wednesday, July 21, 2010

ಎಲ್ಲಮ್ಮನ ಆಟ (ಜನಪದ ಬಯಲಾಟ)

ಜಾನಪದ ನಮ್ಮ ಸಂಪತ್ತು. ನಮ್ಮ ಪರಂಪರೆಯ ಅತ್ಯಂತ ಪಳೆಯುಳಿಕೆ. ಹೆಸರಿಲ್ಲದೆ ಉಸಿರಾಗಿ ಹರಿದು ಬಂದ ವಾಚಿಕ ಪರಂಪರೆ. ಇಂತಹ ಜಾನಪದದಲ್ಲಿ ಸಾಹಿತ್ಯವೂ ಒಂದು.ಸಾಹಿತ್ಯದಲ್ಲಿ ಅತ್ಯಂತ ಆಕರ್ಷಕವಾದುದು ಬಯಲಾಟ.


ವೈವಿಧ್ಯಮಯವಾದ ಬಯಲಾಟವನ್ನು ಅಭ್ಯಾಸದ ಅನುಕೂಲಕ್ಕೆ ನಾಲ್ಕು ರೀತಿಯಲ್ಲಿ ವಿಭಾಗಿಸಲಾಗುತ್ತದೆ.


ದೊಡ್ಡಾಟ, ಯಕ್ಷಗಾನ,ಸಣ್ಣಾಟ ಮತ್ತು ಕೃಷ್ಣ ಪಾರಿಜಾತ.



ಎಲ್ಲಮ್ಮನ ಆಟ ಸಣ್ಣಾಟ ಪ್ರಕಾರಕ್ಕೆ ಸೇರುತ್ತದೆ.ಪೌರಾಣಿಕ ಆಶಯಗಳನ್ನು ಹೊಂದಿದ್ದರೂ ಇದು ಜನಪದ ಪ್ರಜ್ಞೆಯನ್ನು ಬಿಂಬಿಸುವ ಸುಂದರ ಆಟವಾಗಿದೆ. ಎಲ್ಲಮ್ಮ ಭಕ್ತಿಯನ್ನು ಬಿಚ್ಚಿಡುವ ಈ ಆಟದಲ್ಲಿ ಗತಕಾಲದ ಅನೇಕ ಪಳೆಯುಳಿಕೆಗಳಿವೆ.


ಉತ್ತರ ಕರ್ನಾಟಕದ ವಿಜಾಪುರ , ಕಲಬುರ್ಗಿ,ಬೆಳಗಾವಿ ಮತ್ತು ಮಹಾರಾಷ್ಟ್ರದ ಅಕ್ಕಲಕೋಟ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಆಟವನ್ನು ರಚಿಸಿದವನು – ವಿಜಾಪುರ ಜಿಲ್ಲೆಯ ಬಸವರಾಜ ಸಾಗಾವಿ. ಎಲ್ಲಮ್ಮನ ಭಕ್ತನೂ ಗಂಡುಜೋಗಪ್ಪನೂ ಆದ ಬಸವರಾಜ ಒಬ್ಬ ಶ್ರೇಷ್ಥ ನಾಟಕಕಾರ, ಅಭಿನಯಿಸುವ ಕಲಾವಿದ.


ತಾಳಿಕೋಟಿ ಶರಣ ಮುತ್ತ್ಯಾ (ಸಾಂಬ ಪ್ರಭು )ನ ಜಾತ್ರೆಯಲ್ಲಿ ನಾನು ನೋಡಿದ ಬಯಲಾಟವನ್ನು ಆಡಿದವರು ವಿಜಾಪುರ ಜಿಲ್ಲೆ ಗುಣಕಿ ಬೊಮ್ಮನಳ್ಳಿಯ ಮೇಳದವರು.



ಹೂಣಾವತಿ ಪಟ್ಟಣದ ರೇಣುಕರಾಜನ ಮಗಳಾಗಿ ಹುಟ್ಟಿದ ಎಲ್ಲಮ್ಮ ಜಮದಗ್ನಿ
ಯನ್ನು ಮದುವೆಯಾಗುವಳು. ಪತಿ ಪೂಜೆಗೆ ಸೀತಾಳ ನೀರು ಪತ್ರಿ ಹೂ ತರಲು ಹೋದಾಗ ಜೋಡಿ ಮೀನುಗಳ ಆಟ ನೋಡಿ ಮೈಮರೆಯುತ್ತಾಳೆ, ಚಿತ್ತ ಚಾಂಚ
ಲ್ಯಕ್ಕೆ ಒಳಗಾಗುತ್ತಾಳೆ.. ಪತಿಜಮದಗ್ನಿಯ ಶಾಪಕ್ಕೆ ತುತ್ತಾಗುತ್ತಾಳೆ. ಕುಷ್ಥರೋಗ ಪೀಡಿತಳಾಗುತ್ತಾಳೆ.
ಎಲ್ಲಮ್ಮ ಎಕ್ಕಯ್ಯ- ಜೋಗಯ್ಯ ಅವರ ಸೇವೆ ಮಾಡಿ ರೋಗ ವಾಸಿಮಾಡಿಕೊಂಡು ಬದುಕುತ್ತಿರುವಾಗ ಜನರಿಂದ ಗೊಡ್ಡಿ ಬಂಜೆ ಎಂಬ ನಿಂದೆಗೆ ಒಳಗಾಗುತ್ತಾಳೆ. ಶಿವ
ನಲ್ಲಿಗೆ ಹೋಗಿ ಕಾಡಿಬೇಡಿ ವರ ಪಡೆದು ಮಗನನ್ನು ಪಡೆಯುತ್ತಾಳೆ.



ಚಂಡಾಟವಾಡುವಾಗ ನಾರಿಯರ ಕೊಡ ಒಡೆದ ಪರಶುರಾಮ “ ತಂದೆಯಿಲ್ಲದ ಮೂಳ ”ಎಂಬ ನಿಂದೆಗೆ ಒಳಗಾಗುತ್ತಾನೆ. ತಾಯಿ ಹತ್ತಿರ ಬಂದು ನನ್ನ ತಂದೆಯನ್ನು ತೋರಿಸು ಎಂದು ಹಂಗಾಗಿ ಕಾಡುತ್ತಾನೆ. ತನ್ನ ತಂದೆಯನ್ನು ಕೊಂದವ ಕಾರ್ತವೀರಾರ್ಜುನ ಎಂಬ ಸಂಗತಿಯನ್ನು ತಿಳಿದು ಅವನನ್ನು ಸಂಹರಿಸಿ ತಂದೆಯನ್ನು ಬದುಕಿಸುತ್ತಾನೆ.
ನಿನ್ನ ತಾಯಿ ಚಾರಿತ್ರ್ಯಹೀನಳು, ಅವಳನ್ನು ಕೊಲ್ಲು- ಎಂದು ಜಮದಗ್ನಿ ಆಜ್ಞಾಪಿಸಿದಾಗ ತಂದೆಯ ಮಾತನ್ನು ಪಾಲಿಸುವದಕ್ಕಾಗಿ ಮಾತಂಗಿ ಮನೆಯಲ್ಲಿ ಅಡಗಿ ಕುಳಿತ ಹಡೆದ ತಾಯಿಯನ್ನೇ ಕೊಲ್ಲುತ್ತಾನೆ. ಮರಳಿ ವರ ಪಡೆದು ತಾಯಿಯನ್ನು ಬದುಕಿಸಿಕೊಳ್ಳುತ್ತಾನೆ,
ಮುಗ್ದ ಜನಪದರು ಎಲ್ಲಮ್ಮನನ್ನು ಆರಾಧಿಸುತ್ತಾರೆ. ಪೂಜಿಸುತ್ತಾರೆ. ಎಲ್ಲಮ್ಮ ನಿನ್ನ ಹಾಲಕ ಉಧೋ ಉಧೋ ಎಂದು ಉದ್ಘೋಷಿಸುತ್ತಾರೆ.ವರ್ಷಪೂರ್ತಿ ಅವಳ ಜಾತ್ರೆ ಮಾಡುತ್ತಾರೆ.
ಮೂವತ್ತು ವರ್ಷದ ಹಿಂದೆ ಹುಟ್ಟಿದ ಈ ಆಟ ಇಂದಿಗೂ ಜನಪ್ರಿಯತೆ ಪಡೆದು ಜಾತ್ರೆಗಳಲ್ಲಿ ಪ್ರದರ್ಶನಗೊಳ್ಳುತ್ತಲಿದೆ.ಇಂತಹ ಸುಂದರ ಬಯಲಾಟವನ್ನು ಪ್ರೊ. ಚಂದ್ರಗೌಡ ಕುಲಕರ್ಣಿ ಅವರು ೧೯೯೨ ರಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ.


ಶಿವು ಮಾಗಣಗೇರಿ ಬಿ.ಎ.೨

No comments:

Post a Comment