Thursday, July 29, 2010

ಬದುಕು- ಅವಲೋಕನ

ಬದುಕು


ಅಪ್ಪಟ ಗ್ರಾಮೀಣ ಭಾಷೆಯ ಸೊಗಡಿನಲ್ಲಿ ಉತ್ತರ ಕರ್ನಾಟಕದ ಅದರಲ್ಲು ಹೈದರಾಬಾದ ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಮೊಗಲಾಯಿ ಭಾಷೆಯನ್ನು ಖಡಕ್ಕಾಗಿ ಬಳಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಈ ನಮ್ಮ ಕಲ್ಬುರ್ಗಿ ಜಿಲ್ಲೆಯ ಭಾಷೆ
ಯನ್ನು ಕೊಂಡೊಯ್ದ ಕೀರ್ತಿ ಗೀತಾ ನಾಗಭೂಷಣ ಅವರಿಗೆ ಸಲ್ಲುತ್ತದೆ. ಹಿಂದುಳಿದ ಜಿಲ್ಲೆ ಎಂದು ಕರೆಯಿಸಿಕೊಳ್ಳುವ
ಕಲ್ಬುರ್ಗಿ ತನ್ನದೆ ಆದ ವಿಶಿಷ್ಟ ಭಾಷಾಸೊಬಗನ್ನು ಹೊಂದಿದೆ. ಇಂತಹ ಒಂದು ಮೊಗಲಾಯಿ ಭಾಷೆ ಕನ್ನಡ ಸಾಹಿತ್ಯ ಚರಿ
ತ್ರೆಯಲ್ಲಿ ಕಥೆ ಕಾದಂಬರಿಗಳಲ್ಲಿ ಬಳಕೆಯಾದದ್ದು ಬಹುಶ: ಗೀತಾ ನಾಗಭೂಷಣರವರಿಂದಲೆ ಇರಬೇಕು. ತಮ್ಮ ಕಥೆ ಕಾದಂಬರಿ ಲೇಖನಗಳ ಮೂಲಕ ಸಾಹಿತ್ಯದಲ್ಲಿ ವಿಶಿಷ್ಟವಾದ ತಳಹದಿಯ ಮೇಲೆ ತಮ್ಮದೆ ಆದ ಛಾಪವನ್ನು ಮೂಡಿಸಿದವರು.


ಗೀತಾ ನಾಗಭೂಷಣರ ಕಾದಂಬರಿಗಳಲ್ಲಿ ಸ್ತ್ರೀ ಪರ ನಿಲುವು, ಸಮಾನತೆ, ಜಾತಿ ಮೌಢ್ಯತೆ, ಮೇಲ್ವರ್ಗ, ಕೇಳ ವರ್ಗಗಳ ರೀತಿ-ರಿವಾಜು, ಆಚಾರ-ವಿಚಾರ, ಪ್ರಕೃತಿ ವರ್ಣನೆಗಳ ರಚನೆಗಳು ಅತ್ಯಂತ ವಿಶಿಷ್ಟ ರೀತಿಯಲ್ಲಿ ಚಿತ್ರಿತವಾಗಿದೆ.


“ಹಾಡ್ರೆ ದುರ್ಗಿ ಅಂದ್ರ ಏಟಕಿ ನಖರಾ


ಮಾಡ್ತಿರಲ್ರೆ ಹೊಯ್ಮಲ್ಲೇರೇ...


ಮ್ಯಾಲ ನೋಡಿದರ ಮುಗಲ ತುಂಬ


ಚುಕ್ಕಿಗೊಳ ನೆರೆದಾವ


ತೆಳಗ ನೋಡಿದರ ಬಯಲು ತುಂಬಾ


ಸಿಂದಿ ಬುರುಗಿನಂತ ಬೆಳ್ಳನ ಬೆಳದಿಂಗಳ ಬಿದ್ದಾದ


ನಿಮ್ಮುಂದ ತುಂಬಿದ ಸಿಂದಿ ಮಗಿಗೊಳು


ಎಲ್ಲೋರ ತಲ್ಯಾಗ ನಿಶಾ ಏರಾದ ... ಹಾಡ್ರಿ ಚೌಡಕಿ


ಬಾರಸ್ಗೋತ ಒಂದೆಡ್ಡು ಹಾಡ ಹಾಡ್ರಿ ನಿಮ್ಮದನಿ ಕೇಳಿ


ಬಾಳದಿನ ಆಯ್ತು”


ಇಂತಹ ಜವಾರಿ ಶೈಲಿಯ ಭಾಷೆ ಮತ್ತು ಕೆಳಮಂದಿಯ ಖುಲ್ಲಂ-ಖುಲ್ಲಾ ಬದುಕಿನ ಚಿತ್ರಣಗಳು ಗೀತಾರವರ ಕಾದಂಬರಿಗಳಲ್ಲಿ ಎದ್ದುಕಾಣುತ್ತದೆ.


ಪ್ರಾದೇಶಿಕ ತಳಿಯ ಬದುಕು ಮೊಘಲಾಯಿ ಏರಿಯಾದ ಟಿಪಿಕಲ್ ಭಾಷೆಯಿಂದಾಗಿಯೇ ಗೀತಾ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಲೇಖಕಿಯರ ಸಾಲಿನಲ್ಲಿ ವಿಶಿಷ್ಟರೆನಿಸಿದ್ದಾರೆ. ನವೋದಯ, ಪ್ರಗತಿಶೀಲ, ನವ್ಯ ಸಾಹಿತ್ಯ ಘಟ್ಟಗಳ ಸೆರಗಿಡಿದೇ ಬಂದ ಬಂಡಾಯ-ದಲಿತ ಸಾಹಿತ್ಯ ಚಳುವಳಿಯು ಈ ತೆರನಾದ ಸಂವೇದನೆಗಳಿಂದಾಗಿಯೇ ಗಮನ ಸೆಳೆದವು.


ಉತ್ತರ ಕರ್ನಾಟಕದ ಖಡಕ್ಕ ಭಾಷೆ ಕಲ್ಬುರ್ಗಿಯ ಮೊಗ ಲಾಯಿ ಭಾಷೆಯನ್ನು ತನ್ನ ಕಾದಂಬರಿ ‘ಬದುಕು’ವಿನಲ್ಲಿ ಅತ್ಯಂ ತ ಮಹತ್ವದ ರೀತಿಯಲ್ಲಿ ಬಳಸಿದ್ದಾರೆ. ಇಂಥ ಕಾಲ ಘಟ್ಟದಲ್ಲಿ ಪ್ರಥಮ ಬಾರಿಗೆಯೆಂಬಂತೆ ದಲಿತ ಹಿಂದುಳಿದ ಮತ್ತು ಶೋಷಿ ತ  ಸಮುದಾಯಗಳ ಅದರಲ್ಲಿಯೂ ಮಹಿಳೆಯರು ತಮ್ಮ ಬದು ಕು ಬವಣೆಯನ್ನು ಕುರಿತು ಈ ಕಾದಂಬರಿಯಲ್ಲಿ ಅತ್ಯಂತ ವಿಶಿ ಷ್ಟ ರೀತಿಯಲ್ಲಿ ತಮ್ಮ ನೋವಿನಂತೆಯೇ ಅದರಲ್ಲಿ ನಲಿವು ಕಂ ಡು ಕೊಂಡ ಅನೇಕ ಪಾತ್ರಗಳು ಬರುತ್ತವೆ. ಗೀತಾ ಕಥೆಯನ್ನು ಹೇಳುತ್ತಾರೆ ಆದರೆ ಕಥೆಕಟ್ಟುವದಿಲ್ಲ ಎಂಬ ಹೇಳಿಕೆ ವಿಮರ್ಶ ಕರ ಶಾಸ್ತ್ರಿಯ ಮಾನದಂಡಗಳ ಬಗೆಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ತಮ್ಮ ಪಾಡಿಗೆ ತಾವು ಬರವಣಿಯಲ್ಲಿ ತೊಡಗಿದರು.


ಕೇವಲ ತಳವಾರ ಜಾತಿ ಹುಡುಗಿಯೊಬ್ಬಳು ತಾನು ಓದಬೇಕು ಪದವಿ ಪಡೆಯಬೇಕು ಎಂಬ ಮಹಾದಾಸೆಯೊಂದಿಗೆ ತನ್ನೂ ರಿನಿಂದ ಕಲ್ಬುರ್ಗಿಯಂತಹ ಪಟ್ಟಣಕ್ಕೆ ಬಂದು ಬಿ.ಎ ಬಿ.ಎಡ್, ಎಂ,ಎ ಪದವಿ ಪಡೆದು ಸಾಹಿತ್ಯದಲ್ಲಿ ಕೃಷಿ ಮಾಡಿದವರು. ಬಡ ವರ ಶೋಷಿತರ ನಿರಾಶ್ರಿತರ ಕೆಳವರ್ಗದವರ ಪರ ನ್ಯಾಯ ದೊ ರಕಿಸಲು ಹೋರಾಡದೆ ತಮ್ಮಲೇಖನಿಯ ಲೇಖನಗಳ ಮೂಲಕ ಉತ್ತರಿಸಿದರು. ಕೆಳವರ್ಗದ ಮಂದಿಯ ನೋವು-ನಲಿವುಗಳು ದೇವದಾಸಿಯರ [ಜೋಗಣಿಯರ] ಪಟ್ಟಕ್ಕೆ ಹಾಕಿ ಮುತ್ತುಕಟ್ಟುವ ಆ ಅನಿಷ್ಟ ಪದ್ಧತಿಯ ಬೇರು ಸಹಿತ ಬುಡ ಮೇ ಲು ಮಾಡಲು ‘ಬದುಕು’ ಕಾದಂಬರಿ ಮೂಲಕ ತಿಳಿಸಿದ್ದಾರೆ.


ಬದುಕು ಕಾದಂಬರಿಯಲ್ಲಿ ವಿಭಿನ್ನ ರೀತಿಯಲ್ಲಿ ಚಿತ್ರಿತವಾಗಿ ರುವದು. ಕೆಳವರ್ಗದ ನಿರ್ಗತಿಕರ ಬಗೆಗಿನ ಕಥೆಯಾದರು ಇದು  ಮೆಲ್ನೋಟಕ್ಕೆ ಶಿವಳ್ಳಿಯ ಜಮಾದಾರ ಮಲ್ಲಪ್ಪನ ಮನೆ ಕಥೆಯಂತೆ ಕಂಡುಬರುತ್ತದೆ. ಆದರೆ ಇದೊಂದು ಕೆಳವರ್ಗದ ಶೋಷಿತರ ನಿರಾಶ್ರಿತರು ಹಿಂದುಳಿದವರು ದೇವದಾಸಿಯವ ರಂತಹ ದಾರುಣ ಜೀವನ ನಡೆಸುವವರತ್ತ ಈ ಕಥೆ ಹೆಣೆದು
ಕೊಳ್ಳಲಾಗಿದೆ.


ಇಲ್ಲಿ ಕೆಳವರ್ಗದ ರೀತಿ ರಿವಾಜು, ಆಚಾರ-ವಿಚಾರ , ಪ್ರೀತಿ-ಪ್ರೇಮ, ಪ್ರಣಯ, ಕಾಮ,ಹಾದರ, ನಗು-ಅಳು, ಕಳುವು, ಹಸಿ ವು ,ಮುಂತಾದವುಗಳೇಲ್ಲ ಕಣ್ಣಿಗೆ ಕಟ್ಟಿದ ಹಾಗೆ ಚಿತ್ರಣವಾಗಿವೆ.


೨೦೦೧ರಲ್ಲಿ ಪ್ರಕಟವಾದ ಈ ಬದುಕು ಕಾದಂಬರಿ ಇಲ್ಲಿಯ ವರೆಗು ಅಂದರೆ ೨೦೧೦ರ ವೇಳೆಗೆ ಮೂರು ಸಲ ಮರು ಮುದ್ರ ಣ ಕಂಡಿದೆ. ೨೦೦೧ ನಂತರ ೨೦೦೫,೨೦೦೭,೨೦೧೦. ೨೦೧೦ ರಲ್ಲಿ ನಡೆದ ೭೬ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸ ಮ್ಮೇಳನದಲ್ಲಿ ಗೀತಕ್ಕನವರ ಬಹುತೇಕ ಎಲ್ಲಾ ಕಥೆ ಕಾದಂಬ ರಿಗಳು ಗದಗನ ಕನ್ನಡ ಜಾತ್ರೆಯಲ್ಲಿ ಒಂದೂ ಬಿಡದೆ ಮಾರಾ
ವಾಗಿದ್ದವು. ೭೬ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಗೀತಾನಾಗಭೂಷಣ ಅವರೆ ಆಗಿದ್ದರು.


ಬದುಕು ಕಾದಂಬರಿ ಕೆಳವರ್ಗದ ಖುಲ್ಲಂ ಖುಲ್ಲಾ ಭಾಷೆ ಬಳಸಿ
ರುವದರಿಂದ ಇದು ಯಲ್ಲಿಯೂ ಅಶ್ಲೀಲವೆಂಬಂತೆ ಭಾಸವಾ
ಗುವುದಿಲ್ಲ. ಈ ಕಾದಂಬರಿ ಪ್ರಕಟವಾದ ನಂತರ ಅನೇಕ ಕವಿ
ಗಳು ಲೇಖಕರು,ವಿಮರ್ಶಕರು ತಮ್ಮ ಅಭಿಪ್ರಾಯಗಳನ್ನು ಕಾದಂಬರಿ ಓದಿದ ನಂತರ ತಿಳಿಸಿದ್ದಾರೆ. ೪೯೧ ಪುಟಗಳ ಈ ಕಾದಂಬರಿ ಅತ್ಯಂತ ಮಹತ್ವದ ರೀತಿಯಲ್ಲಿ ಬರೆದಿದ್ದಾರೆ. ಗೀತಾರವರು ಇಂತಹ ಒಂದು ವಿಶಿಷ್ಟವಾದ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕೆಡಮಿ ಪ್ರಶಸ್ತಿ ಬಂದಿರುವುದು ನಿಜಕ್ಕೂ ಹೆಮ್ಮೆಯ ವಿಷಯ.


ಪಾತ್ರಗಳು:


ಮಲ್ಲಪ್ಪ - ಶಿವಳ್ಳಿಯ ಜಮಾದಾರ ಕೆಳಮಂದಿಯ ಪ್ರಭಾವಿ ವ್ಯಕ್ತಿ .


ಮಲ್ಲಮ್ಮ - ಮಲ್ಲಪ್ಪ ಜಮಾದರನ ಹೆಂಡತಿ.


ಶಾಣಮ್ಮ - ಮಲ್ಲಪ್ಪ ಜಮಾದರನ ಮೊದಲ ಮಗಳು ಬಟ್ಟಿ ಗಿರಣಿ ಕೆಲಸದಲ್ಲಿ ಇರುವ ಹಾಲಪ್ಪನ ಹೆಂಡತಿ ಶಾಣಮ್ಮನ ಮಕ್ಕಳು ಬೆಳ್ಳಿ ಮತ್ತು ಶಿವು


ಕೌಶಮ್ಮ - ಮಲ್ಲಪ್ಪ ಜಮಾದರನ ಎರಡನೇ ಮಗಳು ಸೊಲ್ಲಾಪುರದ ಮಾರ್ತಾಂಡನ ಹೆಂಡತಿ ಸಾಹುಕಾರ ಲಿಂಗರಾಜನ ಪ್ರೇಯಸಿ


ಕಲ್ಯಾಣಿ - ಜಮಾದಾರ ಮಲ್ಲಪ್ಪನ ಕೊನೆ ಮಗ. ಶಾಣಮ್ಮನ ಮಗಳು ಬೆಳ್ಳಿಯ ಗಂಡ


ಪತರು ನಜಮಾ - ಮಲ್ಲಪ್ಪ ಜಮಾದಾರನ ಸಾಕು ಮಗ ಮುಸ್ಲೀಂ ಆದರು ಸ್ವಂತ ಮಗನಂತೆ ಬೆಳೆಸಿದ. ಪತರನ ಹೆಂಡತಿ ನಜಮಾ


ಈ ಪ್ರಮುಖ ಪಾತ್ರಗಳಲ್ಲದೆ ಇನ್ನೂ ಅನೇಕ ಪಾತ್ರಗಳು ಬರು
ತ್ತವೆ. ಕಲ್ಯಾಣಿ ಬೆಳ್ಳಿಯರ ಮಗ ಸಣ್ಣ ಮಲ್ಲು. ಮಲ್ಲಪ್ಪನ ನೆರೆ
ಮನೆಯ ನಾಗವ್ವ ಆಯಿ ಹಾಲಪ್ಪ ಮತ್ತು ಮಾರ್ತಾಂಡನ ಸಂ
ಬಂಧಿಕರು. ಕಾಶಮ್ಮಳ ಗೆಳತಿಯರು ಮಲ್ಲಪ್ಪ ಜಮಾದಾರನ ಗೆಳೆಯರು ಮುಂತಾದ ಚಿಕ್ಕ ಚಿಕ್ಕ ಪಾತ್ರಗಳು ಬರುತ್ತವೆ. ಈ ಚಿಕ್ಕ ಪಾತ್ರಗಳು ಆಯಾ ಸನಿವೇಶದ ರೂಪುಗಳಿಗೆ ನಿದರ್ಶನ
ವಾಗಿವೆ.


ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ಸನ್ನಿವೇಶಗಳು ಕೇ
ವಲ ಕಾಲ್ಪನಿಕವಾದರು ಅದರಲ್ಲಿ ಬರುವ ಪಾತ್ರಗಳು ಸನ್ನಿ
ವೇಶಗಳು ಜೀವಂತಿಕೆಯನ್ನು ತಳೆದು ನಿಂತಿದೆ. ಅಲ್ಲಿ ಇಲ್ಲಿ ನೋಡಿ ಬಂದದ್ದು ಹೇಳದೆ ಕಣ್ಣಿಗೆ ಕಟ್ಟಿದ ಹಾಗೆ ಬರೆದಿರುವ ಈ ಕಾದಂಬರಿಯಲ್ಲಿ ಹಬ್ಬ-ಹರಿದಿನಗಳು, ದೇವರು-ದಿಂಡರು, ಊರು ಕೇರಿ, ಜಾತಿ-ಮತ, ಆಹಾರ-ವಿಹಾರ, ಮತ್ತು ಬಟ್ಟೆ-ಬರೆಗಳನ್ನು ಅತ್ಯುತ್ಯಮವಾಗಿ ಇಲ್ಲಿ ವಿವರಿಸಿದ್ದಾರೆ. ಪ್ರಕೃತಿಯ ವರ್ಣನೆಯಂತು ಅಸಾಧ್ಯವಾಗಿ ಈ ಕಾದಂಬರಿ ವರ್ಣಿಸಿದ್ದಾರೆ.


ಊರು-ಕೇರಿ :


ಈ ಬದುಕು ಕಾದಂಬರಿಯಲ್ಲಿ ಮುಖ್ಯವಾಗಿ ಬರುವ ಹಳ್ಳಿ
ಯಂದರೆ ಶಿವಳ್ಳಿ, ಶಿವಳ್ಳಿಯಲ್ಲಿ ಮೂರು ಕೇರಿಗಳಿದ್ದವು ಮ್ಯಾ
ಗೇರಿ, ಕೆಳಗೇರಿ, ಮತ್ತು ಹೋಲಗೇರಿ.


ಈ ರೀತಿಯಾಗಿ ಮೂರು ಕೇರಿಗಳಲ್ಲಿ ಜನರು ವಾಸಿಸುತ್ತಿದ್ದರು. ಅವರಲ್ಲಿ ಗೌಡ, ಕುಲಕರ್ಣಿ, ಜಮಾದಾರ, ರೆಡ್ಡಿ, ಸುಬೇದಾರ, ನಾಯಕ, ಸಾವುಕಾರ ಇಂಥವರು ತಮ್ಮ ತಮ್ಮ ಕೇರಿಗಳ ನಾಯಕರಾಗಿದ್ದರು.


ಕೇರಿಗಳಲ್ಲಿ ತಮ್ಮ ತಮ್ಮ ಇಷ್ಟಾನುಸಾರ ಶಕ್ಯಾನುಸಾರ ಮನೆ
ಗಳನ್ನು ನಿರ್ಮಿಸಿಕೊಂಡಿದ್ದರು. ಅವು ಕೆಲವು ಗಚ್ಚಿನ ಮನೆ, ಹೆಂಡಿಮನೆ, ಅರಜಪ್ಪನಮನೆ, ಮಣ್ಣಿನಮನೆ, ಝೋಪಡಿಮನೆ, ಮತ್ತು ಸಿಂದಿ ಪೊರಕೆ ಮನೆಗಳು ಅದ್ದವು.


ಜಾತಿ-ಮತ:


ಊರು ಎಂದ ಮೇಲೆ ಅಲ್ಲಿ ಜಾತಿ ಮತ ಇದ್ದೇ ಇರುತ್ತೆ ಅಂದ ಹಾಗೆ ಈ ಕಾದಂಬರಿಯಲ್ಲಿ ಅನೇಕ ಜಾತಿಯ ಜನ ಇದ್ದರು. ಅವರು ಲಿಂಗಾಯತರು, ಕುಲಕರ್ಣಿಯರು, ಮ್ಯಾಗೇರಿ
ಯಲ್ಲಿದ್ದರೆ, ಕಬ್ಬಲಗೇರು, ಕುರುಬರು, ಗೊಲ್ಲರು, ಪಿಂಜಾರರು, ಬುಡಬುಡಿಕೆಯವರು, ಬ್ಯಾಡರು, ಮುಂತಾದವರು ಕೆಳಗೇರಿ
ಯಲ್ಲಿ ವಾಸಿಸುತ್ತಿದ್ದರು.


ಬಟ್ಟೆ-ಬರೆ:


ಊರು-ಕೇರಿ, ಜಾತಿ-ಮತಗಳ ನಡುವೆ ಬಟ್ಟೆ ಬರೆಗಳ ಉಲ್ಲೇ
ಖವಿದೆ. ನಾರಿಯರು ಉಟ್ಟುಕೊಳ್ಳುವ ಸೀರೆಗಳ ವಿಧಗಳ ವಿಧ
ಗಳು ಸೇರಿವೆ. ಇಂದಿನ ಈ ಪ್ಯಾಷ್ಯನ ಯುಗದಲ್ಲಿ ವಿವಿಧ ಜರ
ತಾರ ಸೀರೆಗಳ ನಡುವೆಯು ಅಂದಿನ ಸೀರೆಗಳ ಅಂದ ಚೆಂದ ಬಣ್ಣಿಸುತ್ತವೆ. ಕರಿ ಚಂದ್ರಕಾಳಿ ಸೀರೆ, ಇಲಕಲ್ಲ್ ಸೀರೆ, ಕೆಂಪು ಜರಿಯಂಚಿನ ಸೀರೆ, ಕಾದಿಗೆಗಪ್ಪಿನ ಸೀರೆ, ಜರದಮ ಸೀರೆ, ದಡಿ ಸೀರೆ, ಟೋಪ ಸೇರಗಿನ ಸೀರೆ, ರೆಸಮಿ ಸೀರೆ, ಶಾಂ
ಪೂರಿ ಸೀರೆ ಮತ್ತು ಕಾಟನ ಸೀರೆ ಇವುಗಳ ಜೊತೆಗೆ ಗುಳೇ
ದಗುಡ್ಡದ ಸೂರ್ಯನ ಮತ್ತು ಥೇರಿನ ಛಾಪಿರುವ ಕುಪ್ಪಸಗಳ ವರ್ಣನೆ ಇದೆ.


ಸೀರೆಗಳ ಜೊತೆಗೆ ಪುರುಷರ ದೋತುರ, ರುಮಾಲು, ಶಲ್ಯಗಳ ಸಹ ಈ ಕಾದಂಬರಿಯಲ್ಲಿ ಬಂದಿವೆ.


ಆಹಾರ-ವಿಹಾರ [ಸಸ್ಯಹಾರಿ] :


ಈ ಕಾದಂರಿಯಲ್ಲಿ ಅಪ್ಪಟ ಉತ್ತರ ಕರ್ನಾಟಕದ ಊಟದ ಬಗ್ಗೆ ಹೇಳಲಾಗಿದೆ. ಜಮಾದಾರ ಮಲ್ಲಪ್ಪನ ಮನೆಯಲ್ಲಿ ಮಾಡುವ ಆಹಾರ-ವಿಹಾರಗಳ ಬಗ್ಗೆ ತಿಳಿಸಲಾಗಿದೆ. ಪುಂಡಿಪಲ್ಯ, ಹುಣಚಿ
ಕಾಯಿ, ಕಾರ ಕೆನೆಮೊಸರು, ಜೋಳದರೊಟ್ಟಿ, ಹುಳಬಾನ, ಗೋಧಿ ಚಪಾತಿ ಗಟ್ಟಿಬ್ಯಾಳಿ, ತಾಳಸಿದ ಕಡ್ಲಿಪಲ್ಯ,ಅಕ್ಕಿಬಾನ, ಹೋಳಿಗೆ,ಸಜ್ಜಿ ರೊಟ್ಟಿ,ಸಜ್ಜಕ,ಉಪ್ಪಿಟ್ಟು,ಮಂಡಕ್ಕಿ,ಸಂಡಿಗೆಗಳ ಬಗ್ಗೆ ಹೇಳಲಾಗಿದೆ.


ಆಹಾರ ವಿಹಾರ ( ಮಾಂಸಾಹಾರ):


ಮಾಂಸಾಹಾರದಲ್ಲಿ ಕೋಳಿಪಲ್ಲ್ಯ,ಕುರಿಖಂಡದ ಪಲ್ಯ, ಮೀನು,
ಟಗರು,ಉಡ,ಮೊಲ,ಪಾರಿವಾಳಗಳಂತಹ ಪ್ರಾಣಿಗಳ ಊಟದ ರುಚಿಯನ್ನು ವರ್ಣಿಸಲಾಗಿದೆ. ಸಸ್ಯಾಹಾರಿ,ಮಾಂಸಾಹಾರಿಗಳೆನ್ನದೆ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವ ಪದ್ಧತಿ ಇತ್ತು. ಮತ್ತು ಸಿಂದಿ ಕುಡಿಯುವಾಗ ನೆಂಜಿಕೊಳ್ಳುವುದಕ್ಕೆ ಶೇಂಗಾ ಬೀಜಗಳನ್ನು ಎಣ್ಣೆಯಲ್ಲಿ ಉಪ್ಪು ಖಾರ ಹಾಕಿ ಹುರಿಯುತ್ತಿದ್ದರು.


ಹಬ್ಬ - ಹರಿದಿನ :


ಹೋಳಿಹುಣ್ಣಿಮೆ ,ಶಿವರಾತ್ರಿ, ಮೊಹರಂ, ಕಾರಹುಣ್ಣಿಮೆ,
ಯುಗಾದಿ ಎಳ್ಳಮವಾಸಿ, ನಾಗರಪಂಚಮಿ ಮತ್ತು ಕಾಮದಹನ ಮುಂ. ಹಬ್ಬ ಹರಿದಿನಗಳ ಬಣ್ಣನೆ ಇದೆ.


ದೇವರು-ದಿಂಡರು:


ಸೂರ್ಯ ಚಂದ್ರ, ಚುಕ್ಕಿ, ಹುಣ್ಣಿವೆ,ಅಮವಾಸಿಗಳ ವರ್ಣನೆಗಳ ಜೊತೆಗೆ ದೇವರಿಗೆ ನಡೆದುಕೊಳ್ಳುವ ಸಹ ಜನಗಳ ಭಕ್ತಿಯನ್ನು ಒರೆಗೆ ಹಚ್ಚುತ್ತಿದ್ದರು. ಕಲ್ಬುರ್ಗಿ ಶರಣಬಸವ, ಸಾವಳಗಿ ಶಿವ
ಲಿಂಗೇಶ್ವರ ಚುಂಚರ ಮಹಾಪುರ ತಾಯಿ ಖತಲ ಸಾಬಪೀಠ
 ಕೆಳಗೇರಿ ಮರಗಮ್ಮ ಹಣಮಪ್ಪ ಲಕ್ಷೀ ಗೋಳ್ಯಾದ ಲಕ್ಕವ ನಾಗವಿ ಎಲ್ಲಮ್ಮ ಗುಡ್ಡದ ಮಲ್ಲಯ್ಯ ಮತ್ತು ಖಾಜಾ ಬಂದೇ
ನವಾಜ ಮುಂತಾದ ದೇವರುಗಳ ಜೋತೆಗೆ ಜನರ ಭಕ್ತಿ ಕಾಣಸಿಗುತ್ತದೆ.


ಈ ಕಾದಂಬರಿ ಆರಭದಿಂದ ಅಂತ್ಯದವರೆಗೂ ಸಿಂದಿಗೊಬ್ಬಿಗಳ ಬಗ್ಗೆ ಬಹಳಷ್ಟು ಹೇಳಲಾಗಿದೆ. ಇಂದಿನ ರಮ್, ವಿಸ್ಕಿ, ಬ್ರಾಂಡಿ
ಗಳ ಮಧ್ಯದಲ್ಲಿಯು ಸಹ ಸಿಂದಿಗಳು ಬಹಳಷ್ಟು ಪ್ರಸಿದ್ಧವಾಗಿವೆ. ಸಿಂದಿಗಳ ಬರಿಯ ಬುರುಗಿನಂತೆ ಇದ್ದು ಇದರ ರುಚಿ ಹೇಗಿದೆ ಎಂಬುದನ್ನು ನೋಡಲು ಈಗ ಸಿಂದಿ ಸಿಗುವದಿಲ್ಲ ಸಿಗುವದಿಲ್ಲ ಸಿಂದಿ ಮಗಿಗಳು ಸಹ ಎಲ್ಲೂ ಕಾಣುವುದಿಲ್ಲ ಈಚಲು ಮರಗ
ಳಂತೂ ಈಗ ಬರಿ ಪುಸ್ತಕದ ಚಿತ್ರವಾಗಿದೆ.


ಆಮಾದಾರ ಮಲ್ಲಪ್ಪನ ಮನೆಯಲ್ಲಿ ಎಲ್ಲರೂ ದೊಡ್ಡವರ ಸಣ್ಣ
ವರೆಂಬುದು ಇಲ್ಲದೆ ಅಂಗಳದಲ್ಲಿ ಕುಳಿತು ಕುಡಿಯುತ್ತಿದ್ದರೆ. ಆದ
ರೆ ಈಗ ಜನ ಸಿಂದಿ ಬಗ್ಗೆ ಹೇಳಿದರೆ ಸಾಕು ಸಿಂದಿ ಅನ್ನುವ ಶಬ್ದದ ಪರಿಚಯವೆ ಇಲ್ಲವೆಂದು ತೋರುತ್ತದೆ.


ಶಿವಳ್ಳಿಯ ಜಮಾದಾರ ಮಲ್ಲಪ್ಪ ಅವನ ಹೆಂಡತಿ ಮಲ್ಲಮ್ಮನ ಶಿವಳ್ಳಿಯ ಕೆಳಗೇರಿ ಓಣಿಯಲ್ಲಿ ಇವದೊಂದು ಮನೆ ಇತ್ತು. ಒಂ
ದು ತೋಟವು ಸಹ ಇತ್ತು. ಸರ್ಕಾರ ಕೊಟ್ಟ ಜಮೀನು ಇತ್ತು. ಮಲ್ಲಪ್ಪ ಇವರು ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ. ಮೊದಲನೆ ಮಗಳು ಶಾಣಮ್ಮ ಈಕೆಯನ್ನು ಗುಲ್ಬರ್ಗಾ ಶಹ
ರದ ಬಟ್ಟಿ ಗಿರಣಿಯಲ್ಲಿ ಕೆಲಸ ಮಾಡುವ ಹಾಲಪ್ಪನೊಂದಿಗೆ ಮದುವೆ ಮಾಡಿಕೊಡಲಾಯಿತ್ತು. ಗಂಡ-ಹೆಂಡತಿ ಇಬ್ಬರು ಸಂತೋಷದಿಂದ ಇದ್ದರು. ಇವರಿಬ್ಬರ ಮಕ್ಕಳೆ ಬೆಳ್ಳಿ ಮತ್ತು ಶಿವು.


ಜಮಾದಾರ ಮಲ್ಲಪ್ಪ ಶಿವಳ್ಳಿಯಲ್ಲಿ ಕೆಳಗೇರಿಯಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದ. ಎಲ್ಲ ಧರ್ಮ ಕಾರ್ಯಗಳು ಜಾತ್ರೆ ಮುಂ
ತಾದ ಹಬ್ಬ ಹರಿದಿನಗಳನ್ನು ಸಂತೋಷದಿಂದ ಆಚರಿಸು
ತ್ತಿದ್ದನು. ಮಲ್ಲಪ್ಪನ ಸಹಾಯಕನಾಗಿ ಪತರು ಎಂಬ ಮುಸ್ಲಿಂ ಯುವಕನಿದ್ದನು. ಅವನ ತಂದೆಯಾಗಿ ಸ್ವಂತ ಮಗನಂತೆ ಬೆಳೆಸಿದ. ಮಲ್ಲಪ್ಪನ ಮನೆಯಲ್ಲಿ ಜಾತಿ ಭೇದ ಮಾಡದೆ ಎಲ್ಲರನ್ನು ಸಮಾನನಾಗಿ ನೋಡಿಕೊಂಡಿದ್ದ ಮನೆಯವರ ಎಲ್ಲರು ಚೆಂದದಿಂದ ಅಂಗಳದಿಂದಲ್ಲಿ ಕುಳಿತು ಊಟ ಮಾಡು
ತ್ತದ್ದರು ಈಚಲು ಮರದ ಸಿಂದಿಗಳನ್ನು ಕುಡಿಯುತ್ತಿದ್ದರು.


ಈ ಮಲ್ಲಪ್ಪನ ಎರಡನೆಯ ಮಗಳೆ ಕಾಶಮ್ಮ ಕಪ್ಪು ಮುಖದ ಚಲುವೆ. ಈಕೆ ಎಂದು ದಿನ ತೋಟದಿಂದ ಬರಬೇಕಾದರೆ ಆ ಶಿವಳ್ಳಿಯ ಸಾವುಕಾರನ ಮಗ ಲಿಂಗರಾಜ ಎದುರಾಗುತ್ತಾನೆ. ಆಕಸ್ಮಿಕ ಬೇಟಿಯ ಪ್ರೀತಿಗೆ ತಿರುಗಿ ಪ್ರಣಯಕ್ಕೆ ತಿರುಗಿತು ಇದರ ವಿಷಯ ತಿಳಿದ ಸಾವುಕಾರ ಲಿಂಗರಾಜಪ್ಪನ ಅಪ್ಪ ಮಲ್ಲ
ಪ್ಪನನ್ನು ಕರೆದು ಹಿಯಾಳಿಸಿ ಮಾತನಾಡಿ ಕಳುಹಿಸುತ್ತಾನೆ. ಇದರಿಂದ ಮನೆಯರೆಲ್ಲ ಮನನೊಂದ ದು:ಖಕ್ಕಿಡಾಗುತ್ತಾರೆ. ಹೇಗಾದರು ಮಾಡಿ ಕಾಶಮ್ಮಳನ್ನು ಬೇರೆ ಮದುವೆ ಮಾಡ
ಬೇಕು ಎಂದು ನಿಶ್ಚಯಿಸುತ್ತಾರೆ. ಆದರಿಂದ ಮಲ್ಲಪ್ಪನ ಮಗ ಕಲ್ಯಾಣಿ ಮತ್ತು ಪತರನ ಜೊತೆ ಕಲ್ಬುರ್ಗಿಯ ಹಾಲಪ್ಪನ ಮನೆಗೆ ಕಾಶಮ್ಮಳನ್ನು ಕಳುಹಿಸುತ್ತಾರೆ.


ಕಾಶಮ್ಮಳನ್ನು ಕಲ್ಬುರ್ಗಿಯಲ್ಲೆ ಯಾರಾದರು ವರ ನೋಡಿ ಕೊಡಬೇಕೆಂದು ನಿಶ್ಚಯಿಸುತ್ತಾರೆ. ಆದರೆ ಕಲ್ಬುರ್ಗಿಯಲ್ಲೆ ಬಿಟ್ಟು ಮಲ್ಲಪ್ಪ ಕಲ್ಯಾಣಿ ಪತರುನನ್ನು ಊರಿಗೆ ಕರೆದುಕೊಂಡು ಬರು
ತ್ತಾನೆ. ಮುಂದೆ ಕೆಲ ದಿನಗಳ ನಂತರ ಕಾಶಮ್ಮ ತನ್ನ ಹಳೆಯ ಸಂಪೂರ್ಣ ನೆನಪುಗಳನ್ನು ಮರೆತು ಹೊಗುತ್ತಾಳೆ. ಹಾಲಪ್ಪ ಸ್ನೇಹಿತ ಮಾರ್ತಾಂಡ ಸೋಲ್ಲಾಪುರದ ಬಟ್ಟೆಗಿರಣಿಯಲ್ಲಿ ಕೆಲ
ಸ ಮಾಡುತ್ತಿರುತ್ತಾನೆ. ಹುಡುಗನನ್ನು ನೋಡಿ ಕಾಶಮ್ಮ ಒಪ್ಪು
ತ್ತಾಳೆ. ಸಂತೋಷದಿಂದ ಎಲ್ಲರು ಕಾಶಮ್ಮ ಮಾರ್ತಾಂಡರ ವಿವಾಹ ಮಾಡಿ ಯುವ ಜೋಡಿಗಳನ್ನು ಸೋಲ್ಲಾಪುರಕ್ಕೆ ಕಳು
ಹಿಸುತ್ತಾರೆ. ಇಲ್ಲಿ ಎಲ್ಲರು ಸಂತೋಷದಿಂದ ಕಾಲ  ಕಳೆಯು
ತ್ತಾರೆ.


ಮಲ್ಲಪ್ಪನ ಮಗ ಕಲ್ಯಾಣಿ ತನ್ನ ಅಕ್ಕನ ಮಗಳಾದ ಬೆಳ್ಳಿಯನ್ನು ಪ್ರೀತಿಸುತ್ತಾನೆ. ಮತ್ತು ಮಲ್ಲಪ್ಪನ ಮಗಳಾದ ಶಾಣಮ್ಮಳು ಕೂಡಾ ಕಲ್ಯಾಣಿಗೆ ಬೆಳ್ಳಿಯನ್ನೇ ಕೊಟ್ಟು ತವರು ಮನೆ ಸಂ
ಬಂಧ ಗಟ್ಟಿ ಗೊಳಿಸಬೇಕೆಂದು ನಿರ್ಧರಿಸುತ್ತಾಳೆ. ಇದಕ್ಕೆ ಹಾಲ
ಪ್ಪನ ಸಮ್ಮತಿಯು ಸಹ ದೊರೆಯುತ್ತದೆ. ಆಗ ಎಲ್ಲರೂ ಸೇರಿ ಕಲ್ಯಾಣಿ ಮತ್ತು ಬೆಳ್ಳಿಯರ ಮದುವೆ ಮಾಡುತ್ತಾರೆ.


ಸೋಲ್ಲಾಪುರದಲ್ಲಿದ್ದ ಕಾಶಮ್ಮ ತನ್ನ ತವರು ಮನೆಯಾದ ಶಿವ
ಳ್ಳಿಗೆ ಯಾವ ಸಮಾರಂಭಕ್ಕೂ ಯಾವ ಕಾರ್ಯಕ್ಕೂ ಬಂದಿ
ರುವದಿಲ್ಲ ಈಗಲಾದರು ಕಾಶಮ್ಮನನ್ನು ಕರೆಯಲೇಬೆಕೆಂದು ನಿರ್ಧರಿಸುತ್ತಾನೆ. ಮಲ್ಲಪ್ಪ ಕಾರಹುಣ್ಣಿವೆ, ಮೊಹರಂ ಒಂದೇ ಸಾರಿ ಹಬ್ಬಗಳು ಬಂದಿರುವದರಿಂದ ಹಾಲಪ್ಪನನ್ನು ಮಲ್ಲಪ್ಪ ಕಾಶಮ್ಮನನ್ನು ಕರೆಯಲು ಸೋಲ್ಲಾಪುರಕ್ಕೆ ಕಳುಹಿಸುತ್ತಾನೆ. ಕಾಶಮ್ಮ ಮತ್ತು ಶಾಣಮ್ಮ ಇಬ್ಬರು ಹಬ್ಬಕ್ಕೆ ಬರುತ್ತಾರೆ.


ಹಬ್ಬದ ದಿನದಂದು ಅಲಯ ಪೀಠಗಳ ಮೆರವಣಿಗೆ ನಡೆ
ಯುವಾಗ ಕಾಶಮ್ಮ ಸಾವುಕಾರ ಲಿಂಗರಾಜನನ್ನು ನೋಡು
ತ್ತಾಳೆ. ನೋಡಿದ ಮರು ದಿನವೇ ಕಾಶಮ್ಮ ಲಿಂಗರಾಜನನ್ನು ಅವನ ತೋಟದ ಮನೆಯಲ್ಲಿ ಬೇಟಿಯಾಗಿ ಅವನನ್ನು ಬಿಗಿದಪ್ಪಿ ಅಳುತ್ತಾಳೆ. ಆದರೆ ಇವೆಲ್ಲ ಸನ್ನಿವೇಶ ಯಾರಿಗೂ ಗೊತ್ತಾ
ಗುವದಿಲ್ಲ. ಅದಾದ ಮರುದಿನವೇ ಕಾಶಮ್ಮ ಸೋಲ್ಲಾಪುರಕ್ಕೆ ಹೋಗುತ್ತಾಳೆ.


ಕಾಶಮ್ಮ ಸೋಲ್ಲಾಪುರಕ್ಕೆ ಹೋದನಂತರ ಕೆಲವು ವಾರಗಳ ನಂತರ ಲಿಂಗರಾಜು ಅಲ್ಲಿಗೆ ಬರುತ್ತಾನೆ. ಲಿಂಗರಾಜನಿಗೆ ಈ ಮೊದಲೆ ಬೇರೆ ಹುಡುಗಿಯೊಂದಿಗೆ ವಿವಾಹ ವಾಗಿರುತ್ತದೆ. ಆದರು ಕೂಡಾ ಕಾಶಮ್ಮಳೆ ಬೇಕೆಂದು ಮಾರ್ತಾಂಡನಲ್ಲಿ ಕೇಳಿಕೊಳ್ಳುತ್ತಾನೆ. ಆದರೆ ಏನು ಹೇಳದೆ ಅಸಹಾಯಕ ಸ್ಥಿತಿಯಲ್ಲಿರುವ ಮಾರ್ತಾಂಡನಿಗೆ ಹೇಳಿ ಕಾಶಮ್ಮ ಮತ್ತು ಲಿಂಗರಾಜ ಇಬ್ಬರು ಶಿವಳ್ಳಿಗೆ ಬರುತ್ತಾರೆ. ಲಿಂಗರಾಜ ಗುಟ್ಟಾಗಿ ಕಾಶಮ್ಮಳನ್ನು ಅವನ ತೋಟದ ಮನೆಯಲ್ಲಿಡುತ್ತಾನೆ. ಅಲ್ಲಿಯೆ ಅವಳೊಂದಿಗೆ ಸಂಸಾರ ನಡೆಸುತ್ತಾನೆ.


ಈ ಸುದ್ದಿ ಬರಸಿಡಿಲಿನಂತೆ ಮಲ್ಲಪ್ಪನ ಕುಟುಂಬಕ್ಕೆ ಬಂದೆರಗುತ್ತದೆ. ಸಿದ್ದಿ ಇಡಿ ಕುಟುಂಬವನ್ನೆ ತಲ್ಲಣ ಮಾಡುತ್ತದೆ. ಮನೆಯಲ್ಲಿ ದು:ಖದ ಕಟ್ಟೆಯೆ ಒಡೆದು ಹೋಗುತ್ತದೆ. ಮಲ್ಲಪ್ಪನಿಗಂತೂ ಎದೆ ಗುಂಡಿಗೆ ಒಡೆದು ಹೋಗುತ್ತದೆ. ಇದೇ ವಿಚಾರದಲ್ಲಿ ಮಲ್ಲಪ್ಪ ಚಿಂತೆಮಾಡುತ್ತಾ ತೋಟದಕಡೆ ತಿರುಗಾಡಿಕೊಂಡು ಬರಲು ಹೋಗಿ ಅಲ್ಲಿಯೇ ಕುಳಿತು ಸಿಂದಿಯನ್ನು ಕುಡಿಯುತ್ತಾನೆ. ಸಿಂದಿ ಕುಡಿದು ಮನೆಗೆ ಬರಲು ಸಿದ್ದನಾದಾಗ ತೆಲೆತಿರುಗಿದಂತಾಗುತ್ತದೆ. ಆಗೆಯೇ ಹಳ್ಳ ದಾಟುವಾಗ ಹಳ್ಳದ ರಭಸಕ್ಕೆ ಸಿಕ್ಕು ಮಲ್ಲಪ್ಪ ಅಸುನೀಗುತ್ತಾನೆ.


ಕಾಶಮ್ಮಳ ದು:ಖದಲ್ಲೆ ನೊಂದು ಬೆಂದಿರುವ ಮಲ್ಲಪ್ಪನ ಕುಟುಂಬಕ್ಕೆ ಮಲ್ಲಪ್ಪನ ಸಾವು ಈ ಕುಟುಂಬಕ್ಕೆ ದು:ಖ ತಡೆದುಕೊಳ್ಳುವ ಶಕ್ತಿ ಕೊಡಲಿಲ್ಲ. ಆ ದೇವರು ಕಲ್ಯಾಣಿ ಬೆಳ್ಳಿಯರ ಸುಖದ ಸಂಸಾರ ನೋಡವ ಮೊದಲೆ ಮಲ್ಲಪ್ಪನ ಸಾವು ಮನೆಯವರನ್ನು ಕಾದತೊಡಗಿತು. ಇದರ ನೆನಪಲ್ಲೆ ಮಲ್ಲವ್ವ ಹಾಸಿಗೆ ಹಿಡಿದು ದಿನಗಳನ್ನು ಎಣಿಸತೊಡಗಿದಳು. ದೆವ್ವ ಪಿಶಾಚಿಗಳು ಬಡಿವೆ ಎಂಬ ಭ್ರಾಂತಿಯಿಂದ ಮಲ್ಲವ್ವ ಚಿಂತೆ ಮಾಡತೊಡಗಿದಳು. ಮಲ್ಲವ್ವ ದಿನೆ ದಿನೆ ಕೃಶಳಾಗ ತೊಡಗಿದಳು. ಮೊದಲು ಸಂತೋಷ ಸಂಭ್ರಮದಿಂದ ತುಂಬಿ ತುಳುಕುತಿದ್ದ ಮನೆ ಬರಿದಾಯಿತು. ಬರಿ ನೋವು ದು:ಖ ತುಂಬಿದ ಮನೆ ಬಣಗುಡತೊಡಗಿತು.


ಕಲ್ಯಾಣಿ ತನ್ನ ಅಪ್ಪ ಮಲ್ಲಪ್ಪ ಸತ್ತ ನಂತರ ಜಮಾದಾರಕೆಯನ್ನು ಬಿಡಬೇಕೆಂದು ನಿರ್ಧರಿಸಿ ಆಫೀಸಿಗೆ ಹೋಗಿ ಜಮಾದಾರತನವನ್ನು ಬೇಡವೆಂದು ಸಹಿ ಮಾಡಿದ ಒಕ್ಕಲುತನ ಮಾಡಬೇಕೆಂದು ತಿರ್ಮಾನಿಸಿದ. ಸರಕಾರ ಉಂಬಳಿಯಾಗಿ ಕೊಟ್ಟ ಜಮೀನು ಮರಳಿ ಪಡೆದುಕೊಂಡಿತು. ಕಲ್ಯಾಣಿ ತೋಟದಲ್ಲೆ ದುಡಿಯುವೆನೆಂದು ತಿರ್ಮಾನಿಸಿದ ಪತರುನು ಸಹ ಮೊದಲೆ ಕೆಲೆಸ ಮಾಡಲು ತೋಟದ ಮನೆಯಲ್ಲಿಯೆ ಉಳಿದಳು.


ಕಲ್ಯಾಣಿ ಒಂದು ದಿನ ಸಿಂದಿ ಅಂಗಡಿ ಮುಂದೆ ಕುಂತು ಕುಡಿಯುತ್ತಿರುವಾಗ ಅಲ್ಲಿದ್ದ ಒಬ್ಬ ಕಾಶಮ್ಮಳ ಬಗ್ಗೆ ಅಸಡ್ಡೆಯಾಗಿ ಮಾತನಾಡುತ್ತಾನೆ. ಸಿಟ್ಟಿಗೆದ್ದ ಕಲ್ಯಾಣಿ ಜೋರಾಗಿ ಅವನಿಗೆ ಒದ್ದಾಗ ಬಿದ್ದು ತಲೆ ಕಲ್ಲಿಗೆ ಬಡಿದಾಗ ಅವನು ಅಸುನೀಗುತ್ತಾನೆ. ಪೋಲಿಸರು ಬಂದು ಕಲ್ಯಾಣಿಯನ್ನು ಜೈಲಿಗೆ ಹಾಕುತ್ತಾರೆ. ಕೋರ್ಟನಲ್ಲಿ ಕಲ್ಯಾಣಿಗೆ ೧೪ ವರ್ಷ ಜೈಲುವಾಸವಾಗುತ್ತದೆ. ಅದರ ನೋವಲ್ಲೆ ಮಲ್ಲವ್ವ ಹಾಸಿಗೆ ಹಿಡಿಯುತ್ತಾಳೆ. ಜೈಲು ವಾಸ ಕಡಿಮೆ ಮಾಡಲು ವಕೀಲನನ್ನು ನೆಮಿಸುತ್ತಾಳೆ. ದುಡ್ಡಿಗಾಗಿ ಒಂದು ಹೊಲವನ್ನು ಮಾರುತ್ತಾಳೆ. ಆದರು ಪ್ರಯೋಜವಾಗುವದಿಲ್ಲ. ನಂತರ ತೋಟವನ್ನು ಮಾರಬೇಕೆಂದು ಬೆಳ್ಳಿ ನಿರ್ಧರಿಸುತ್ತಾಳೆ. ಆಗ ಕಾಶಮ್ಮ ತೋಟ ಮಾರುವದು ಬೇಡ ನಾನು ದುಡ್ಡು ಕೊಡುತ್ತೆನೆ ಎಂದು ಹೇಳಿ ದುಡ್ಡು ಕೊಡುತ್ತಾಳೆ.


ಇಂಥ ದು:ಖದ ನಡುವೆ ಅಂದರೆ ಕಲ್ಯಾಣಿಯು ಜೈಲಿಗೆ ಹೋದ ನಂತರ ಬೆಳ್ಳಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಮಲ್ಲವ್ವ ಮೊಮ್ಮಗನೊಂದಿಗೆ ಸಂತೋಷವಾಗಿ ಇರುತ್ತಾಳೆ. ಆದರೆ ನಡುವೆ ಅನಾರೋಗ್ಯದ ಕಾರಣ ಅಸುನಿಗುತ್ತಾಳೆ.


ಇತ್ತ ಕಲ್ಯಾಣಿ ಜೈಲಿನಲ್ಲಿ ಹಳೆಯ ನೆನಪುಗಳನ್ನು ಕೆದಕಿ ದು:ಖದಿಂದ ಬಳಲುತ್ತಿರುತ್ತಾನೆ. ಅವನ ಪ್ರಾಮಾಣಿಕತೆ ಮತ್ತು ನಿಷ್ಟೆಗೆ ೮ ವರ್ಷಗಳ ನಂತರ ಅವನನ್ನು ೧೨ ವರ್ಷಕ್ಕೆ ಬಿಡುಗಡೆ ಮಾಡುವದೆಂದು ಜೈಲಿನ ಮುಖ್ಯ ಅಧಿಕಾರಿ ಹೇಳುತ್ತಾನೆ. ಇದರಿಂದ ಬೆಳ್ಳಿ ಅವರ ಅವ್ವ ಎಲ್ಲರಿಗೂ ಸ್ವಲ್ಪ ಸಮಾಧಾನವಾಗಿರುವಂತೆ ಸಂತೋಷವಾಗಿರುತ್ತಾರೆ.


ಬಹಳ ದಿನಗಳ ನಂತರ ಮಾರ್ತಾಂಡ ಶಿವಳ್ಳಿಗೆ ಬರುತ್ತಾನೆ. ಅವನು ಮೊದಲಿನಂತಿರದೆ ಗಿರಣಿ ಬಿಟ್ಟು ಸನ್ಯಾಸಿಯಾಗಿದ್ದ. ಖಾವಿ ಬಟ್ಟೆ ಉಟ್ಟು ಉದ್ದನೆಯ ಗಡ್ಡ ಬಿಟ್ಟು ಕಲ್ಯಾಣಿಯ ತೋಟಕ್ಕೆ ಬಂದ ಅಲ್ಲಿ ಪತರು ಕಾಶಮ್ಮಳನ್ನು ಕರೆಯಿಸಿದ. ಅಲ್ಲಿ ಅವರಿಬ್ಬರು ಕೆಲ ಹೊತ್ತು ಮಾತನಾಡಿದರು. ಕಾಶಮ್ಮಳನ್ನು ಮತ್ತೆ ಬಾ ಎಂದು ಕರೆಯುತ್ತಾನೆ ಆದರೆ ಅವಳು ಒಲ್ಲೆ ಎನ್ನುತ್ತಾಳೆ ಅಲ್ಲಿಂದ ಅವರು ಹೋಗುತ್ತಾರೆ ಆದರೆ ಮರುದಿನ ಮಾರ್ತಾಂಡ ಶವವಾಗಿ ಹಳ್ಳದ ದಂಡೆಯಲ್ಲಿ ಅವನು ಬಿದ್ದಿರುತ್ತಾನೆ.


ಈ ನಡುವೆ ಕಲ್ಯಾಣಿ ಜೈಲಿನಿಂದ ಬಿಡುಗಡೆಯಾಗಿ ಅವನು ಊರಿಗೆ ಬರುತ್ತಾನೆ. ಆದರೆ ಅವನ ಮಗ ಶಿವಮಲ್ಲು ಮಾತ್ರ ಅಪ್ಪನನ್ನು ಅಸಡ್ಡೆಯಿಂದ ನೋಡಿ ಕಲ್ಬುರ್ಗಿಯಲ್ಲೆ ಉಳಿದ ಕಲ್ಯಾಣಿಯು ಮನ ನೊಂದು ತಿರ್ಥಯಾತ್ರೆಗೆ ತೆರಳಲು ಬೆಳ್ಳಿ ಕಲ್ಯಾಣಿ ತಯಾರಾಗುತ್ತಾರೆ. ಎಲ್ಲರೂ ಬಿಳ್ಕೋಟ್ಟ ನಂತರ ಅವರು ತೆರಳುತ್ತಾರೆ. ಆದರೆ ಅವರು ತೀರ್ಥಯಾತ್ರೆ ಮುಗಿಸಿ ಬರುವಾಗ ಬಸ್ಸು ಅಪಘಾತಕ್ಕೀಡಾಗಿ ಬೆಳ್ಳಿ ಮತ್ತು ಕಲ್ಯಾಣಿ ಅವರು ಅಲ್ಲೆ ಅಸುನೀಗುತ್ತಾರೆ.
ಒಟ್ಟು ಈ ಕಾದಂಬರಿ ಕನ್ನಡದ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದೆ; ಕನ್ನಡಕ್ಕೆ ಗೀತಾ ನಾಗಭೂಷಣ ಅವರು ನೀಡಿದ ಅರ್ಥಪೂರ್ಣ ಕಾಣಿಕೆಯಾಗಿದೆ.
ಶರಣಬಸವ ಚಿಂಚೋಳಿ ಬಿ. ಎ. ೨

ಹಗರಟಗಿಯ ಅಪೂರ್ವ ದೇವಾಲಯಗಳು




ಹಗರಟಗಿಯು ತಾಲೂಕು ಕೇಂದ್ರವಾದ ಸುರಪುರದಿಂದ ನೈ‌ಋತ್ಯಕ್ಕೆ ೪೮ ಕಿ.ಮೀ.ದೂರದಲ್ಲಿ ದೋಣಿಯ ಎಡ ದಂಡೆಯ ಮೇಲಿರುವ ಚಾರಿತ್ರಿಕ ಮಹತ್ವದ ಪ್ರಾಚೀನ ಕೇಂದ್ರ. ಬೃಹತ್ ಶಿಲಾಯುಗ ಸಂಸ್ಕೃತಿಯ ನೆಲೆಯೂ ಆಗಿದ್ದು ಇದು ಶಾತವಾಹನರ ಕಾಲದ ಅವಶೇಷಗ ಳನ್ನು ಹೊಂದಿದ್ದರೂ ಐತಿಹಾಸಿಕ ದಾಖಲೆಗಳಲ್ಲಿ ನಿಖರವಾಗಿ ಗೋಚರಿಸಲಾರಂಭಿಸುವುದು ಹನ್ನೊಂದನೆಯ ಶತಮಾನದಿಂದೀಚೆಗೆ. ಸುಮಾರು ೧೧- ೧೨ ನೇ ಶತಮಾನದ ಹತ್ತಾರು ಶಿಲಾಶಸನಗಳಲ್ಲಿ ‘ಪಗಲಟ್ ೩೦೦’, ‘ಪಗರಿಟೆಗಾಡು’, ‘ಹಗರಟ್ಟಿಗೆ -೩೦೦’ ಎಂದೇ ಉಲ್ಲೇಖಿತಗೊಂಡು ೩೦೦ ಹಳ್ಳಿಗಳ ಆಡಳಿತ ಕೇಂದ್ರವಾಗಿ , ಧಾರ್ಮಿಕ ಕೇಂದ್ರವಾಗಿ ಮತ್ತು ಶೈಕ್ಷಣಿಕ ಕೇಂದ್ರವಾಗಿ ಮೆರೆದಿರುವ ಈ ಊರಿನಿಂದ ಈವರೆಗೆ೧೨ ಶಾಸನಗಳು ವರದಿಯಾಗಿವೆ. ಇವುಗಳಲ್ಲಿ ೬ ಕಲ್ಯಾಣ ಚಾಲುಕ್ಯರಿಗೂ, ಒಂದು ಕಳಚೂರ್ಯರಿಗೂ ಸೇರಿದ್ದು ಉಳಿದವು ದೇವಗಿರಿಯ ಯಾದವರ ಕಾಲದ್ದಾಗಿವೆ.



ಈ ಮೇಲಿನ ಆಧಾರಗಳಿಂದ ಹಗರಟಗಿಯು ಹಿಂದೆ ಸಾಮರಸ್ಯದ ಉತ್ತಮ ಅಗ್ರಹಾರವಾಗಿದ್ದು ೫೦೦ ಮಹಾಜನರನ್ನು ಹೊಂದಿದ್ದು, ಪಾಂಡವ ದತ್ತಿ ಊರೆಂದು ಪ್ರಸಿದ್ಧವಾಗಿತ್ತೆಂದು ತಿಳಿದುಬರುತ್ತದೆ. ಇವುಗಳಲ್ಲಿ ೬ನೇ ವಿಕ್ರಮಾದಿತ್ಯನ ಆಳ್ವಿಕೆಗೆ ಸೇರಿದ ೧೦೯೨ ರ ಶಾಸನವೇ‌ಅತ್ಯಂತ ಪ್ರಾಚೀನ ಶಾಸನವಾಗಿದ್ದು ಮಹಾಪ್ರಧಾನ ದಂಡನಾಯಕ ಅಹಮಲ್ಲರಸನ ಹಗರಟ್ಟಿಗೆಯ ನಖರೇಶ್ವರ ದೇವರಿಗೆ ೩೦೦ ಮತ್ತರು ಭೂಮಿಯನ್ನು ದಾನಮಾಡಿದ ಅಂಶವನ್ನು ಅರುಹಿದರೆ, ಕರ್ಣನ ಗುಡಿಯ ಮುಂದಿರುವ ೧೧೨೩ ರ ತೃಟಿತ ಶಾಸನ ಅದೇ ನಖರೇಶ್ವರ ದೇವರಿಗೆ ಅಲ್ಲಿನ ಮಾಹಾಜನಗಳೂ ಸೇರಿದಮ್ತೆ ಇತರರು ನೀಡಿದ ವಿವಿಧ ದಾನಗಳ ಬಗ್ಗೆ ಹೇಳುತ್ತದೆ. ಊರ ಪಶ್ಚಿಮದಲ್ಲಿರುವ ಕಳ್ಳರ ಗುಡಿ ಮುಂದಿರುವ ೧೧೨೯ ರ ಭಾಗಶಃ ಹಾಳಾಗಿರುವ ಶಾಸನವು ಮಲ್ಲಿಕಾರ್ಜುನ ಗುಡಿಯ ನಿರ್ಮಾಣದ ಬಗ್ಗೆ ಪ್ರಾಸ್ತಾಪಿಸುತ್ತ ಸಾಂದರ್ಭಿಕವಾಗಿ ಲಕ್ಕಣೇಶ್ವರ ದೇವಾಲಯದ ಬಗೆಗೂ ಹೇಳುತ್ತದೆ.



ಆರನೇ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದ ಹಗರಟಗಿಯ ಮತ್ತೊಂದು ಶಾಸನ ಭೋಗಾರ ನಖರ ಸಂಘದ ೧೨೦ ಒಕ್ಕಲುಗಳು ಕೂಡಿ ಶಿವಾಲಯವನ್ನು ನಿರ್ಮಿಸಿ, ಅನೇಕ ದಾನಗಳನ್ನು ನೀಡಿದ ಅಂಶವನ್ನು ಹೇಳುತ್ತದೆ. ಊರ ಹೊರಗಿರುವ ಬಸವಣ್ಣನ ಗುಡಿಯಲ್ಲಿ ೩ ಶಾಸನಗಳಿದ್ದು ಇವುಗಳಲ್ಲಿ ಇಮ್ಮಡಿ ಜಗದೇಕಮಲ್ಲನ ಕಾಲಕ್ಕೆ ಸೇರಿದ ೧೧೪೪ ರ ಶಾಸನ ಹಗರಟಗಿಯ ಮಹಾಜನರು ಹಾಗೂ ಐಹೊಳೆ- ೫೦೦ ಶ್ರೇಣಿಯು ಸೇರಿದಂತೆ ವಿವಿಧ ವರ್ಗದವರು ತಾವೇ ನಿರ್ಮಿಸಿದ ಗವರೇಶ್ವರ ದೇವರ ಅಂಗಭೋಗಕ್ಕೆಂದು ಮಾಣಿಕೇಶ್ವರದ ಕೋಲಲ್ಲಿ ೫ ಮತ್ತರು ಭೂಮಿಯೂ ಸೇರಿದಂತೆ ವಿವಿಧ ಸುಂಕಗಳನ್ನು ದಾನಬಿಟ್ಟ ವಿಷಯವನ್ನು ತಿಳಿಸುತ್ತದೆ. ಮತ್ತೊಂದು ಶಾಸನ ಕೊಳಗದ ಮಲ್ಲಿಮಯ್ಯ ತಾನು ಮಾಡಿಸಿದ ಮಲ್ಲಿಕಾರ್ಜುನ ದೇವರಿಗೆಂದು ಭೂಮಿಯನ್ನು ಕೊಂಡು ಗವರೇಶ್ವರ ದೇವಾಲಯದ ಆಚಾರ್ಯ ಸೂರ್ಯರಾಶಿ ಪಂಡಿತರಿಗೆ ಧಾರೆಯೆರೆದ ಅಂಶವನ್ನು ಹೇಳುತ್ತದೆ. ಇದೇ ಗುಡಿಯಲ್ಲಿರುವ ೧೧೬೬ ರ ಮೂರನೇ ಶಾಸನ ಕಳಚೂರ್ಯ ಸುಂಕಮದೇವನಾಗಿದ್ದು ,ಅಲ್ಲಿನ ವರ್ತಕರು ಗವರೇಶ್ವರ ಪೂಜೆ ಪುನಸ್ಕಾರಕ್ಕೆಂದು ಭೂಮಿಯನ್ನು ಖರೀದಿಸಿ ದಾನಬಿಟ್ಟ ವಿಷಯವನ್ನು ಹೇಳುತ್ತದೆ. ಅವರು ಖರೀದಿಸಿದ ಭೂಮಿ ಸತ್ರದ ತ್ರೀಕೂಟೇಶ್ವರ ದೇವಾಲಯಕ್ಕೆ ಸೇರಿದ್ದೆಂಬ ಮಹತ್ವದ ವಿಷಯವನ್ನು ತಿಳಿಸುತ್ತದೆ. ಜೊತೆಗೆ ಅಲ್ಲಿಯ ಭೈರವ ದೇವರಿಗೆಂದು ಪ್ರತ್ಯೇಕ ಭೂದಾನ ಬಿಟ್ಟ ಅಂಶವನ್ನು ತಿಳಿಸುತ್ತದೆ.



ಭೀಮನ ಗುಡಿಮುಂದೆ ಬಿದ್ದಿರುವ ಶಿಲಾಶಾಸನವು ಯಾದವ ಇಮ್ಮಡಿ ಸಿಂಘನದೇವ ಆಳ್ವಿಕೆಗೆ ಸೇರಿದ್ದು ೧೨೧೮ ರ ಹಗರಟಗಿಯ ಮಹಾಜನರು ಸೆಟೆಗುತ್ತ,ರಾಮಿಸೆಟ್ಟಿ,ಮಮ್ಮರಿದಂಡರು ಹಾಗೂ ಬಿಲ್ಲ ಮುನ್ನೂರ್ವರು ಮಹಾಸಭೆಯಾಗಿ ನೆರೆದು ಅಲ್ಲಿಯ ಸ್ವಯಂಭು ಭೀಮೇಶ್ವರ ದೇವರ ಸ್ಥಾನಾಚಾರ್ಯ ಬ್ರಹ್ಮರಾಶಿ ಪಂಡಿತರಿಗೆ ದಾನಕೊಟ್ಟ ವಿಷಯ ತಿಳಿಸುತ್ತದೆ.



ತ್ರಿಕೂಟೇಶ್ವರ ,ಸಿಡಿಲಭಾವಿ,ರಾಮನಥಸಿದ್ಧ ಪಂಚಸ್ಥಾನ, ನಖರೇಶ್ವರ, ಗವರೇಶ್ವರ ಹಾಗೂ ಭೈರವನ ದೇವಾಲಯ :


ಈ ಎಲ್ಲ ದೇವಾಲಯಗಳನ್ನು ಇಂದು ಹಗರಟಗಿಯಲ್ಲಿ ಗುರುತಿಸಬಹುದಾಗಿದೆ. ಹಗರಟಗಿಯು ಕೋಟೆಯಿಂದಾವೃತವಾಗಿದ್ದು , ನಾಲ್ಕೂ ದಿಕ್ಕಿನಲ್ಲೂ ಅಗಸೆಗಳನ್ನು ಹೊಂದಿದೆ. ಹಿಂದೆ ರಾಜಕೀಯ ಪ್ರಾಮುಖಪಡೆದ ಈ ಊರು ಇಂದು ಹಾಳಾಗಿದೆ. ಶಾಸನೋಕ್ತ ದೇವಾಲಯಗಳು ಊರಹೊರಗೆ ಶಿಥಿಲಾವಸ್ಥೆಯಲ್ಲಿ ನಿಂತಿವೆ.



ಊರ ಆಗ್ನೇಯಕ್ಕೆ ಬೂದಿಹಾಲ ರಸ್ತೆಯಲ್ಲಿ ನೀಲಕಂಠಗೌಡರ ಹೊಲದಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಸನಸ್ಥ ನಖರೇಶ್ವರ ಗುಡಿಯನ್ನು ಇಂದು ಸ್ಥಳಿಕರು ‘ಕರ್ಣನ ಗುಡಿ’ ಯೆಂದು ಕರೆಯುತ್ತಾರೆ. ಪೂರ್ವಾಭಿಮುಖವಾಗಿರುವ ಈ ಗುಡಿಯು ಗರ್ಭಗೃಹ ,ಅಂತರಾಳ,ನವರಂಗಗಲನ್ನು ಹೊಂದಿದೆ. ನಿರಾಡಂಬರವಾಗಿರುವ ಈ ಗುಡಿಯ ಗರ್ಭಗುಡಿಯು ಬರಿದಾಗಿದ್ದು ,ಇದರ ಬಾಗಲವಾಡವು ಸರಳವಾದ ಮೂರು ಶಾಖೆಗಳನ್ನು ಹೊಂದಿದೆ. ಲಲಾಟದಲ್ಲಿ ಗಜಲಕ್ಷ್ಮಿ ಇದೆ. ನವರಂಗದಲ್ಲಿ ಎರಡು ದೇವ ಕೋಷ್ಟಕಗಳಿದ್ದು ಒಂದರಲ್ಲಿ ನಾಗಶಿಲ್ಪವಿದೆ. ಕದಂಬ ನಾಗರ ಶಿಖರವುಳ್ಳ ಈ ಗುಡಿಯ ಮುಂದಿರುವ ತ್ರುಟಿತ ಶಾಸನ ಉಲ್ಲೇಖಿಸುವ ನಖರೇಶ್ವರ ಗುಡಿ ಇದಾಗಿದ್ದು ಹಿಂದೆ ವರ್ತಕರ ಆರಾದ್ಯ ದ್ವೆವವಾಗಿತ್ತು.

ಬೂದಿಹಾಳ ರಸ್ತೆಯಯಲ್ಲಿ ಸ್ವಲ್ಪ ಎಡಕ್ಕೆ ಇರುವ “ಮೂರು ಕಳಸದ ಗುಡಿ” ಕೂಡಾ ಪೂರ್ವಕವಾಗಿದ್ದು,ಪಶ್ಚಿಮ,ಉತ್ತರ ಹಾಗೂ ದಕ್ಷಿಣದಲ್ಲಿ ಪ್ರತ್ಯೇಕ ಗರ್ಭಗೃಹ ಹಾಗೂ ಅರ್ದ ಮಂಟಪಗಳನ್ನು ಹೊಂದ್ದಿದ್ದು ಇವುಗಳಿಗೆ ಒಂದೇ ನವರಂಗವಿದೆ. ಗರ್ಭಗುಡಿಯ ಬಾಗಿಲವಾಡವು ಸರಳವಾಗಿದ್ದು, ಇಕ್ಕೆಲದಲ್ಲಿ ಪೂರ್ಣ ಕಳಸಗಳಿದ್ದು, ಲಲಾಟವು ನಿರಡಂಬರವಾಗಿದೆ. ಈ ತ್ರಿಕೂಟ ದೇವಾಲಯದ ದಕ್ಷಿಣ ಭಾಗವು ಪೂರ್ಣ ಶಿಥಿಲವಾಗಿದ್ದು, ಕದಂಬ ನಾಗರ ಶೈಲಿಯ ಶಿಖರಗಳು ಉಳಿದೆರಡು ಗರ್ಭಗೃಹಗಳನ್ನು ಅಲಂಕರಿಸಿವೆ.


ಹರಿಜನ ಇರುವ ಕೇರಿಯ “ವೆಕಂಬರಮಣ ಗುಡಿಯ” ಬಳಿ ಇರುವ ಶಾಸನವು ಯಾದವ ಇಮ್ಮಡಿ ಸಿಂಘಣನ ಆಳ್ವಿಕೆಗೆ ಸೇರಿದ್ದು, ೧೨೨೦ ರಲ್ಲಿ ಸಮುಖದಲ್ಲಿ ತ್ರಿಪುರಾಂತಕದೇವ, ದೇವ, ಉಮಾಭವ ಹಾಗೂ ಕೇರವ ದೇವರ ಸೆವೆಗೆಂದು ಚಂದ್ರಶಿವ ಪಂಡಿತರಿಗೆ ನಾಲ್ಕು ಮತ್ತ್ರುರು ಭೂಮಿಯನ್ನು ದಾನ ಬಿಟ್ಟ್ ವಿಷಯನ್ನು ತಿಳಿಸುತ್ತದೆ. ಊರ ಅಗಸಿ ಬಾಗಿಲ ಗೋಡೇಯಲ್ಲಿ ಸೇರಿರುವ ೧೨೨೪ರ ನಿಶಿದ ಶಾಸಾನವು ಜೈನ ಧರ್ಮಕ್ಕೆ ಸೇರಿದ್ದು, ಇಂಗಳೇಶ್ವರಕ್ಕೆ ಅಧಿನವಾಗಿದ್ದ ಮೂಲ ಮೂಲಸಂಘ ಪುಸ್ತಕ ಗಚ್ಚ, ದೇಶಿಯ ಗಣದ ಕೊಂಡಕುಂದ್ರಯಾದ್ರಿಯ ದೇವಚಂದ್ರ ಮುನಿಗಳು ಸಲ್ಲೇಖನ ವೃತವನ್ನು ಆಚರಿಸಿ ನಿರ್ವಾಣ ಹೊಂದಿದ ವಿಚಾರವನ್ನು ತಿಳಿಸುತ್ತದೆ. ಈ ನಿಷಿದೆಗೆಯನ್ನು ಒಬ್ಬರ ಕಾಳಿಸೆಟ್ಟಿ ಮೂಡಿಸಿದನೆಂದು ಹೇಳುತ್ತದೆ. ಇದರಿಂದ ಹಗರಟಗಿಯು ಹಿಂದೆ ಜೈನರ ನೆಲೆಯಾಗಿತ್ತೆಂದು ತಿಳಿದು ಬರುತ್ತದೆ.



ಊರ ಹನುಮಂತನ ಗುಡಿಯಲ್ಲಿ ಇರುವ ೧೨೨೯ರ ಶಾಸನವು ಯಾದವ ಇಮ್ಮಡಿ ಸಿಂಘಣನ ಕಾಲದ್ದಾಗಿದೆ. ಹಗರಟಗಿಯ ಕೇತಗಾವುಂಡನ ಇಬ್ಬರು ಮಕ್ಕಳಾದ ರಾಮಗಾವುಂಡ ಹಾಗೂ ಸಿಂಘಗಾವುಂಡ , ತಾವು ಪ್ರತಿಷ್ಠೆ ಮಾಡಿದ ಸಿಡಿಲ ಬಾವಿ ರಾಮನಾಥ, ಐನೂರೇಶ್ವರ, ಬಾಚೇಶ್ವರ,ಕೇತೇಶ್ವರ ಹಾಗೂ ಚೌಡೇಶ್ವರ ದೇವರುಗಳಿದ್ದ ಪಂಚ ಸ್ಥಾನದ ಎಲ್ಲ ದೇವರುಗಳಿಗೆಂದು ಭೂದಾನಮಾಡಿದ ಸಂದರ್ಭದಲ್ಲಿ ಅಲ್ಲಿಯ ತೊಂಭತ್ತೆರಡು ಜೇಡ ಪಟ್ಟೇಗಾರರು ಆದೇವರಿಗೆ ಚೈತ್ರ-ಪವಿತ್ರಕ್ಕೆಂದು ಒಕ್ಕಲಿಗೆ ಒಂದೊಂದರಂತೆ ಹಾಗೂ ದಾನಕೊಟ್ಟ ಅಂಶವನ್ನು ತಿಳಿಸುತ್ತದೆ. ಭೀಮನಗುಡಿ ಮುಂದೆ ನಾಲ್ಕಾರು ವೀರಗಲ್ಲುಗಳಿದ್ದು ಅವುಗಳಲ್ಲೊಂದರ ಮೇಲಿನ ಶಾಸನವು ತುರುಕಾಳಗದಲ್ಲಿ ಮಡಿದ ತನ್ನಣ್ಣನಿಗಾಗಿ ಈ ಕಲ್ಲನ್ನು ರೇವಣ್ಣ ನಿಲ್ಲಿಸಿದರೆಂದು ಹೇಳುತ್ತದೆ. ಹಗರಟಗಿಯ ಸಾಂಸ್ಕ್ರತಿಕ ಇತಿಹಾಸವನ್ನು ಸ್ವಯಂಭರಿ ಭಿಮೇಶ್ವರ ಲಕ್ಷ್ಮೇನೆಶವರ, ಮಲ್ಲಿಕಾರ್ಜುನ, ತ್ರಿಪುರಾಂತರ, ಇದು ತ್ರಿಕೂಟವಾಗಿದ್ದು, ಹಿಂದೆ ಇಲ್ಲಿ ಶಿಕ್ಷಣ ವ್ಯವಸ್ಥೆ ಇರುತ್ತಿತ್ತು.


ಸಂಗನಗೌಡ ಪೋಲಿಸ ಪಾಟೀಲರ ಹೊಲದಲ್ಲಿರುವ ‘ನಾರಾಯಣ ಗುಡಿ’ ( ಕಳ್ಳರ ಗುಡಿ)ಯು ಗರ್ಭಗ್ರುಹ ತೆರೆದ ಅಂತರಾಳ ಹಾಗೂ ನವರಂಗಗಳನ್ನು ಹೊಂದಿದೆ. ಪೂರ್ವಾಭಿಮುಖವಾಗಿದ್ದು ಶಿಖರವೂ ಸೇರಿದಂತೆ ಹಲವಾರು ಭಾಗಗಳು ಕಣ್ಮರೆಯಾಗಿವೆ. ಶಿಥಿಲಾವಸ್ಥೆಯಲ್ಲಿರುವ ಕಂಬಗಳು ಆಕರ್ಷಕವಾಗಿವೆ. ನವರಂಗದಲ್ಲಿ ದೇವ ಕೋಷ್ಟಗಳಿದ್ದು ಬರಿದಾಗಿವೆ. ಈ ದೇವಾಲಯದ ಮುಂಭಾಗದಲ್ಲಿ ಹೊಂಡವಿದೆ. ಶಾಸನೋಕ್ತ ‘ಮಲ್ಲಿಕಾರ್ಜುನ ಗುಡಿ ‘ ಇದೇ ಆ‌ಅಗಿರಬಹುದು. ಈ ಗುಡಿಯ ಸಮೀಪದಲ್ಲಿಯೆ ಪೂರ್ವಾಭಿಮುಖವಾಗಿ ಗಂಗಾಧರೇಶ್ವರ ಗುದಿ ಇದೆ. ಗರ್ಭಗೃಹ ,ತೆರೆದ ಅಂತರಾಳ, ನವರಂಗ ಹಾಗೂ ನಂದಿ ಮಂತಪಗಳನ್ನುಳ್ಳ ಇದರ ಗರ್ಭಗೃಹದ ಬಾಗಿಲವಾಡವು ನಾಲ್ಕು ಶಾಖೆಗಳನ್ನು ಹೊಂದಿದ್ದು ,ಲಲಾಟದಲ್ಲಿ ಗಜಲಕ್ಷ್ಮಿ ಇದೆ. ಈ ಗುಡಿಗೆ ಪಾರ್ಶ್ವದಿಂದ ಪ್ರವೇಶವಿದೆ. ಜೀರ್ಣಾವಸ್ಥೆಯಲ್ಲಿರುವ ಈ ಗುಡಿಗೆ ಕದಂಬನಾಗರ ಶಿಖರವಿದ್ದು , ಶಾಸನೋಕ್ತಲಕ್ಷ್ಮಣೇಶ್ವರ ಗುಡಿ ಇದೇ ಆಗಿರಬಹುದೆನಿಸುತ್ತದೆ. ಈ ಗುಡಿಯ ಎಡಬದಿಯಲ್ಲಿ ಪುಷ್ಕರಣಿ ಇದೆ.


ಇಲ್ಲಿಯ ಮತ್ತೊಂದು ದೇವಾಲಯವಾದ ಧರ್ಮಲಿಂಗೇಶ್ವರ ಗುಡಿಯು ಪೂರ್ಣ ಜೀರ್ಣೋದ್ಧಾರಗೊಂಡಿದ್ದರೂ ಬೃಹತ್ತಾದ ಬಲಹರಿ ಲಿಂಗವನ್ನು ಒಳಗೊಂಡಿದೆ. ಆಕರ್ಷಕವಾದ ಬಾಗಿಲವಾಡ, ಚಂದ್ರಶಿಲೆ, ಮಕರತೋರಣ,ಭೈರವ, ನಾಗಶಿಲ್ಪ.ಉಮಾಮಹೇಶ್ವರರ ಬಿಡಿ ಶಿಲ್ಪಗಳು ಮುಂ.ಶಿಲ್ಪಾವಶೇಷಗಳನ್ನು ಕಾಣಬಹುದಾಗಿದೆ. ಇಲ್ಲಿಯ ಬಾಗಿಲವಾಡವು ಸುಮಾರು ೧೫ ಅಡಿ ಎತ್ತರವಿದ್ದು, ಸಪ್ತ ಶಾಖೆಗಳನ್ನು ಹೊಂದಿದ್ದು , ಉತ್ತರಾಂಗದಲ್ಲಿ ಕ್ರಮವಾಗಿ ಆದಿತ್ಯ, ಗಣಪ, ಬ್ರಹ್ಮ,ವಿಷ್ಣು, ಶಿವ, ಕಾರ್ತಿಕೇಯ ಹಾಗೂ ಸೂರ್ಯನ ಕಿರು ಶಿಲ್ಪಗಳುಳ್ಳ ಏಳು ಕಿರು ಮಂಟಪಗಳಿದ್ದು ಅವುಗಳ ಶಿಖರಗಳು ವೈವಿಧ್ಯಮಯವಾಗಿವೆ.



ಊರ ಉತ್ತರಕ್ಕಿರುವ ಹನಮಂತನ ಗುಡಿಯು ಕಲ್ಯಾಣದ ಚಾಲುಕ್ಯರ ಕಾಲದ ಕಂಬಗಳನ್ನು ಬಳಸಿ ಅನಂತರದಲ್ಲಿ ನಿಲ್ಲಿಸಿರುವ ದೇವಾಲಯವಾಗಿದೆ. ಈ ಗುಡಿಯಲ್ಲಿರುವ ಶಾಸನ ಉಲ್ಲೇಖಿಸುವ ಸಿಡಿಲಬಾವಿ ‘ಋಷಿಗುಂಡ’ ಎಂದು ಕರೆಯಲ್ಪಡುತ್ತದೆ. ಊರ ಪೂರ್ವಕ್ಕೆ ಸುಮಾರು ಒಂದೂವರೆ ಕಿ.ಮೀ.ದೂರದಲ್ಲಿ ನೀರ್ಚಿಲುಮೆಯೊಂದ ಬಳಿಯಿದ್ದು ಪೂರ್ಣ ಶಿಥಿಲವಾಗಿದೆ.


ಊರ ಉತ್ತರಕ್ಕೆ ಇರುವ ಬಸವಣ್ಣನ ಗುಡಿಯೇ ಶಾಸನೋಕ್ತ ಗವರೇಶ್ವರ ದೇವಾಲಯವಾಗಿದ್ದು , ಗರ್ಭಗೃಹ,ತೆರೆದ ಆಂತರಾಳ ಹಾಗೂ ನವರಂಗಗಳನ್ನು ಹೊಂದಿ ಪೂರ್ವಾಭಿಮುಖವಾಗಿದೆ.

ಚಿದಾನಂದ ಹಿಕ್ಕಲಗುತ್ತಿ ಬಿ.ಎ. ೨


Wednesday, July 28, 2010

ತಾಳೀಕೋಟಿ ಇತಿಹಾಸ ಪರಂಪರೆ

ತಾಳಿಕೋಟಿ ಪಟ್ಟಣವು ವಿಜಯನಗರ ಸಾಮ್ರಾಜ್ಯ ಪತನದಿಂದಾಗಿನಿಂದಲೂ ಐತಿಹಾಸಿಕ ಪ್ರಸಿದ್ಧಿ ಪಡೆದು ತನ್ನದೆ ಆದ ವಿಶಿಷ್ಟ  ಸಾಧನೆ ಅಲ್ಲದೆ ಅನೇಕ ಕುರುಹುಗಳನ್ನು ಹೊಂದಿದೆ.



ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಪ್ರಮುಖ ಪಟ್ಟಣ ತಾಳಿಕೋಟಿ  ಇದಾಗಿದ್ದು ಈಗ ಪ್ರಮುಖ ವ್ಯಾಪಾರಿ ಸ್ಥಳವಾಗಿದುದ್ದಲ್ಲದೆ ವಿವಿಧ ಕ್ಷೇತ್ರಗಳಲ್ಲಿ ತನ್ನದೆ ಆದ ಘನತೆ ಗೌರವದೊಂದಿಗೆ ಮುನ್ನಡೆದಿದೆ.


ತಾಳಿಕೋಟಿ ತಾಲೂಕ ಕೇಂದ್ರಕ್ಕೆ ಅರ್ಹತೆ ಪಡೆದ ಈ ತಾಳಿಕೋಟಿ ಪಟ್ಟಣದ ತಾಲೂಕಾ ವ್ಯಾಪ್ತಿಯಲ್ಲಿ ಮುಂಗಾರು ಕ್ಷೇತ್ರವಾಗಿ ೮೨.೮೬೮ ಹೆಕ್ಟರ ಪ್ರದೇಶ ಹಿಂಗಾರು ಪ್ರದೇಶ ಹಾಗೂ ೯೨೩೮ ಹೆಕ್ಟರ ಪ್ರದೇಶ, ಸಾಗುವಳಿ ಇಲ್ಲದ ಪ್ರದೇಶವಾಗಿದೆ. ಇದರಲ್ಲಿ ೧೦೧೬ ಹೆಕ್ಟರ ಗೋಮಾಳ ಪ್ರದೇಶವಿದೆ.
 ದ್ರೋಣಾ ನದಿ ದಡದಲ್ಲಿರುವ ಸಿದ್ಧಲಿಂಗೇಶ್ವರ ದೇವಾಲಯ


ತಾಲೂಕಿನ ರೇಖಾಂಶ ೭೫.೮೦ ಅಕ್ಷಾಂಶ ಇದ್ದು, ೧೫೨೦ ಮಧ್ಯದಲ್ಲಿ ವಿಸ್ತರಿಸಿದೆ. ಸಮುದ್ರ ಮಟ್ಟದಿಂದ ೧೬೫೦ ರಿಂದ ೧೮೦೦ ಅಡಿ ಎತ್ತರದಲಿದ್ದು ಈ ಪ್ರದೇಶದಲ್ಲಿ ಸಾಮಾನ್ಯ ಮಳೆ ೫೭೬.೫ ಇರುತ್ತದೆ.


ತಾಳಿಕೋಟಿಯ ಇತಿಹಾಸ


ಐತಿಹಾಸಿಕ ಹಿನ್ನಲೆ ಹೊಂದಿದ ತಾಳಿಕೋಟಿ ಪಟ್ಟಣ ಇದರ ಇತಿಹಾಸವು ಅಷ್ಟೆ ಆಸಕ್ತಿದಾಯಕವಾಗಿರುತ್ತದೆ. ನಂದ,ಮೌರ್ಯ, ಶಾತವಾಹನರ ಆಡಳಿತಕ್ಕೆ ಈ ಪ್ರದೇಶ ಒಳಪಟ್ಟಿತ್ತಾದರೂ ಯೂವುದೇ ಕುರುಹುಗಳು ಈ ಭಾಗದಲ್ಲಿ ಉಳಿದಿಲ್ಲ.
ಬಾದಾಮಿ ಚಾಲುಕ್ಯರು ರಾಷ್ಟ್ರಕೂಟರು ಹಾಗೂ ಕಲ್ಯಾಣ ಚಾಲುಕ್ಯರು ಇಲ್ಲಿ ಆಳಿ ಹೋದವರಾಗಿದ್ದು ಈ ತಾಳಿಕೋಟಿ ಪಟ್ಟಣ ಬ.ಬಾಗೇವಾಡಿಯ ಮಧ್ಯದಲ್ಲಿ ಸ್ಥಳವಾಗಿದ್ದರಿಂದ ಬಸವಾದಿ ಶರಣರ ಪ್ರಭಾವ ಈ ಭಾಗದ ಜನ ಜೀವನದ ಮೇಲೆ ಅಚ್ಚೊತ್ತಿದಂತಾಗಿದೆ.
ಸಿದ್ಧಲಿಂಗೇಶ್ವರ ದೇವಾಲಯದ ಬಾಗಿಲದಲ್ಲಿರುವ ಶಿಲ್ಪ ವಿನ್ಯಾಸ

ರಾಮಲಿಂಗೇಶ್ವರ ದೇವಾಲಯದ ಕಂಬದಲ್ಲಿರುವ ಶಾಸನ





೧೬೮೬ರಲ್ಲಿ ಈ ರಾಜ್ಯ ಮೊಗಲರ ಕೈಕೆಳಗಿನ ನಿಜಾಮರ ರಾಜ್ಯದ ಒಂದು ಭಾಗವಾಯಿತು ನಂತರ ೧೭೬೦ ರಲ್ಲಿ ನಿಜಾಮನು ವಿಜಾಪುರ ರಾಜ್ಯವನ್ನು ಬಾಲಾಜಿ ಪೇಶ್ವೆಗೆ ಬಿಟ್ಟುಕೊಟ್ಟನು. ೧೮೧೮ ರಲ್ಲಿ ಪೇಶ್ವೇಯವರ ಪತನವಾಯಿತು. ನಂತರ ವಿಜಾಪೂರ ಇದು ಬ್ರಿಟಿಷರ ಆಧೀನಕ್ಕೆ ಒಳಪಟ್ಟಿತು. ೧೮೨೦ ರಲ್ಲಿ ತಾಳಿಕೋಟಿ ಪಟ್ಟಣ್ಣಕ್ಕೆ ಸಂಬಂಧಿಸಿದಂತೆ ಮುದ್ದೇಬಿಹಾಳ ತಾಲೂಕ ಹಾಗೂ ಇಂಡಿ ಈ ತಾಲೂಕುಗಳ ೩೪೫ ಗ್ರಾಮಗಳನ್ನು ಬಾಗಲಕೋಟೆ ಸಬ್ ಕಲೆಕ್ಟೋರೆಟಗೆ ಒಳಪಡಿಸಿ ಧಾರವಾಡ ಜಿಲ್ಲೆಗೆ ಒಳಪಡಿಸಲಾಯಿತು.


೧೮೨೫ ರಲ್ಲಿ ಈ ಪ್ರದೇಶವನ್ನು ಪುಣೆ ಜಿಲ್ಲೆಗೆ ನಂತರ ಸೋಲ್ಲಾಪುರ ಜಿಲ್ಲೆಗೆ ವರ್ಗಾಯಿಸಲಾಯಿತು. ೧೮೬೪ ರಲ್ಲಿ ಕಲಾದಿಗಿ ಜಿಲ್ಲೆಗೆ ಸೇರಿಸಲಾಯಿತು.
ಮಹಾದೇವ ದೇವಸ್ಥಾನದಲ್ಲಿರುವ ಭೈರವನ ಶಿಲ್ಪ






ನಂತರ ೧೮೮೪ ರಲ್ಲಿ ನಮ್ಮ ತಾಳಿಕೋಟೆ ಪಟ್ಟಣ್ಣಕ್ಕೆ ಸಂಬಂಧಿಸಿದ ಮುದ್ದೇಬಿಹಾಳ ಪಟ್ಟಣ ವಿಜಾಪೂರ ಜಿಲ್ಲೆಯ ಕೇಂದ್ರ ಸ್ಥಳವಾಗಿ ತಾಲೂಕಾಗಿ ಮಾರ್ಪಟ್ಟಿತು.


ಇಂತಹ ತಾಲೂಕಿನ ಹೃದಯ ಭಾಗದಂತಿರುವ ತಾಳಿಕೋಟೆ ಪಟ್ಟಣ ರಕ್ಕಸಗಿ ತಂಗಡಗಿ ಕದನದ ಇತಿಹಾಸದಿಂದ ಅಜರಾಮರವಾಗಿ ಉಳಿದಿದೆ. ಇತಿಹಾಸವನ್ನು ಅವಲೋಕಿಸಿದಾಗ ಹಿಂದಿನ ರಾಜಮಹಾರಾಜರ ಕೋಟೆ ಕೊತ್ತಲಗಳು ತಾಳಿಕೋಟೆ ಪಟ್ಟಣ ಒಳಗೊಂಡು ಮುದ್ದೇಬಿಹಾಳ ತಾಲೂಕಿನ ಇನ್ನಿತರ ಗ್ರಾಮಗಳಲ್ಲಿ ಎದ್ದು ಕಾಣುತ್ತಿದೆ.


ತಾಳಿಕೋಟೆಯ ಪ್ರಮುಖ ಸ್ಥಳಗಳ ಪರಿಚಯ :


ಐತಿಹಾಸಿಕ ಹಿನ್ನಲೆ ಪಡೆದ ಈ ತಾಳಿಕೋಟೆ ಪಟ್ಟಣದಲ್ಲಿ ರಾಜವಾಡೆ, ಸಿದ್ಧಲಿಂಗೇಶ್ವರ ದೇವಸ್ಥಾನ, ಶ್ರೀರಾಮಮಂದಿರ, ಶ್ರೀಮಹಾದೇವ ಮಂದಿರ, ಶ್ರೀಖಾಸ್ಗತೇಶ್ವರ ಮಠ, ಶ್ರೀವಿಠ್ಠಲಮಂದಿರ, ಭೀಮನಭಾವಿ, ಪಂಚೇಸಾದರ್ಗಾ, ಶ್ರೀಗ್ರಾಮದೇವತೆ ದೇವಸ್ಥಾನ, ಗ್ರಾಮದೇವತೆಯ ಬೀಸುವಕಲ್ಲು, ಇನ್ನಿತರ ಇಂತಹ ಪ್ರಮುಖ ಐತಿಹಾಸಿಕ ದೇವಾಲಯಗಳನ್ನು ಹೊಂದಿದ್ದಲ್ಲದೆ ಇಡೀ ತಾಳಿಕೋಟಿ ಪಟ್ಟಣ ಸುತ್ತ ಸುತ್ತುವರೆದ ಕೋಟೆ ಗೋಡೆ ನೋಡುವರಿಗೆ ಇನ್ನೂ ತಾಳಿಕೋಟೆ ಪಟ್ಟಣವನ್ನು ರಕ್ಷಣೆ ಮಾಡುತ್ತದೆ ಎಂದೆನಿಸದೆ ಇರಲಾರದು.


ಇಂತಹ ತಪೋಭೂಮಿಯಾದ ತಾಳಿಕೋಟಿ ಪಟ್ಟಣದಲ್ಲಿಯ ಶ್ರೀ ಖಾಸ್ಗತೇಶ್ವರ ಮಠವು ಜನತೆಗೆ ಆಧ್ಯಾತ್ಮಕ ಜ್ಞಾನವನ್ನು ನೀಡುತ್ತಾ ಸಾಗಿದೆ.


ಅದರಂತೆ ತಾಳಿಕೋಟಿ ಸಮೀಪದ ಮೂಕಿಹಾಳದರ್ಗಾದ ಲಾಡ್ಲೆಮಶ್ಯಾಕದರ್ಗಾ  ಹಿಂದು ಮುಸ್ಲಿಂರ ಸಾಮರಸ್ಯದೊಂದಿಗೆ ಕೋಮು ಸೌಹಾರ್ದತೆಯೊಂದಿಗೆ ಜನತೆ ಉರುಸು ಜಾತ್ರೆ ಉತ್ಸವನ್ನು ಆಚರಿಸುತ್ತಾ ಸಾಗಿರುವದು ಅತೀವ ಮಹತ್ವ
ದ್ದಾಗಿದೆ.


ತಾಳಿಕೋಟೆ ಪಟ್ಟಣದಲ್ಲಿ ಸರ್ಕಾರಿ, ಪ್ರಾಥಮಿಕ, ಶಾಲೆಗಳು ಅನುದಾನ ಪಡೆದ ಪ್ರಾಥಮಿಕ, ಸರ್ಕಾರಿ ಪ್ರೌಢಶಾಲೆಗಳು, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ಕೈಗಾರಿಕಾ ಕಾಲೇಜು ಇವುಗಳಲ್ಲದೆ ವೃತ್ತಿಪರ ತರಬೇತಿ ಕೇಂದ್ರ, ಕಂಪ್ಯೂಟರ ತರಬೇತಿ ಕೇಂದ್ರಗಳು ಸಹ ಕಾರ್ಯ ನಿರ್ವಹಿಸುತ್ತಾ ಶಿಕ್ಷಣ ಕ್ಷೇತ್ರದಲ್ಲಿ ಮುನ್ನಡೆದಿದೆ.


ಪಂಚಷಾಯಿ ದರ್ಗಾ

ಇದು ಅಲ್ಲದೇ ತಾಳಿಕೋಟೆ ಪಟ್ಟಣದ ಮಗ್ಗಲು ಹರಿಯುತ್ತಿರುವ ದೋಣಿನದಿ ಮೈದುಂಬಿ ಹರಿದರೆ ಪಸಲು ಬೆಳೆಗಳೆಲ್ಲಾ ತುಂಬಿ ತುಳುಕುತ್ತವೆ ಎಂದು ಹಿರಿಯರು ಹೇಳಿದಂತೆ “ದೋಣಿ ಬೆಳೆದರೆ ಓಣೆಲ್ಲಾ ಜೋಳ” ಎಂಬಂತೆ ಈ ಭಾಗದಲ್ಲಿ ಮುಂಗಾರು ಬೆಳೆಯಾಗಿ ಜೋಳ, ಸಜ್ಜೆ, ಹೆಸರು, ಸೂರ್ಯಕಾಂತಿ ಬೆಳೆಯನ್ನು ಅದರಂತೆ ಹಿಂಗಾರು ಬೆಳೆಯಾಗಿ ಬಿಳಿಜೋಳ, ಹತ್ತಿ, ಕುಸುಬಿ, ಗೋದಿ ಬೆಳೆಯನ್ನು ಬೆಳೆಯಲಾಗುತ್ತದೆ.



ತಾಳಿಕೋಟೆಯ ಸರಪಳಿ ಕೊಂಡಿಯಂತಿರುವ ಮಿಣಜಗಿ ಗ್ರಾಮ ಹಾಗೂ ತಾಳಿಕೋಟಿ ಪಟ್ಟಣ ಕಲ್ಲುಗಳಿಂದ ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಪರಸಿ ಕಲ್ಲುಗಳಿಗೆ ನೆರೆರಾಜ್ಯಗಳಿಗೆ ಬೇಡಿಕೆ ಇದೆ. ಈ ಗಣಿಗಳಲ್ಲಿ ಉದ್ಯೋಗ ಸಾವಿರಾರು ಕಾರ್ಮಿಕರಿಗೆ ದೊರೆತ್ತಿದ್ದು ಈ ಭಾಗದಲ್ಲಿಯ ೨೫% ರಷ್ಟು ಜನತೆಯ ನಿರುದ್ಯೋಗ ಸಮಸ್ಯೆ ಇದರಿಂದ ನೀಗಿದಂತಾಗಿದೆ.


ಈ ರೀತಿ ತಾಳಿಕೋಟಿ ಪಟ್ಟಣ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿ ಎಲ್ಲ ಮತಬಾಂಧವರನ್ನು ತನ್ನ ಮಡಿಲಲ್ಲಿ ಶಾಂತಿ ಸಮಾಧಾನದಿಂದ ಸಲಹುತ್ತ ನಡೆದಿದೆ.


ತಾಳಿಕೋಟಿಯ ಅಗಸಿ ಬಾಗಿಲಲ್ಲಿ ಇರುವ ವೀರಗಲ್ಲು,ಸತಿ ಕಲ್ಲು, ಸಪ್ತಮಾತೃಕೆಯರ ಶಿಲ್ಪಗಳು ಸುಂದರವಾಗಿವೆ. ಆದರೆ ರಕ್ಷಣೆಯಿಲ್ಲದೆ ಹಾಳಾಗುತ್ತಲಿವೆ. ಭೀಮನ ಭಾವಿ, ಕೈಲಾಸ ಪೇಟೆ ದಾರಿಯಲ್ಲಿಯ ಕಟ್ಟೆ ಮೇಲೆ, ಮಲ್ಲಯ್ಯನ ಗುಡಿಯಲ್ಲಿಯ ಭೈರವನ ಶಿಲ್ಪಗಳು ಕಲಾ ಕೌಶಲ್ಯದ ಪ್ರತೀಕವಾಗಿವೆ.


ರಾಸ್ತೆ ವಾಡೆಯ ಅಗಸಿ ಪಕ್ಕದಲ್ಲಿರುವ ವೀರನ ಗುಡಿಯಲ್ಲಿ ಎರಡು ವೀರಗಲ್ಲುಗಳಿವೆ. ಇಲ್ಲಿಯೇ ದ್ಯಾಮವ್ವನ ಕಲ್ಲು ಇದೆ.


ಅವಸಾನದ ಅಂಚಿನಲ್ಲಿರುವ ಕೋಟೆ
ಶಾಸನಗಳು : ೧೯೨೯ ರಲ್ಲಿ ಒಟ್ತು ನಾಲ್ಕು ಶಾಸನಗಳು ಇರುವ ಬಗ್ಗೆ ತಿಳಿದು ಬಂದಿದೆ. ಎರಡು ಶಾಸನಗಳು ಡೋಣಿಯ ದಡದಲ್ಲಿರುವ ರಾಮಲಿಂಗನ ಗುಡಿಯ ಕಂಬದಲ್ಲಿವೆ. ಇನ್ನೊಂದು ಅಂಬಾಭವಾನಿಯ ಎದುರಿನಲ್ಲಿರುವ ಕಂಬದಲ್ಲಿದೆ. ಅದೆ ರಿ ರೀತಿಯಾಗಿ ಮತ್ತೊಂದು ಶಾಸನ ರಾಸ್ತೆ ವಾಡೆಯ ಮಸೀದಿಯ ಎದುರಿಗಿರುವ        ಕಟ್ಟಡವೊಂದರಲ್ಲಿ ಅರಾಬಿಕ್  ಭಾಷೆಯಲ್ಲಿದೆ.


ರಾಸ್ತೆವಾಡೆ:


ಕ್ರಿ.ಶ ೧೬೫೦ ರಲ್ಲಿ ಬಾಳಾಜಿ ಬಾಜಿರಾವ ಪ್ವೇಶೆಯು ತಾಳಿಕೋಟಿಯನ್ನು ತನ್ನ ಬೀಗನಾದ ಆನಂದರಾವ ರಾಸ್ತೆ ಎಂಬುವವನಿಗೆ ಸರಂಜಾಮಿಯಾಗಿ ಕೊಟ್ಟನು.  ಇಲ್ಲಿ ಆನಂದರಾವ ಪೇಟೆ, ಕೈಲಾಸ ಪೇಟೆ, ಮತ್ತು ರಾಸ್ತೆವಾಡೆ ಎಂಬ ವಾಡೆಯನ್ನು ಕಟ್ಟಿದನು.


೧೯೮೧ ರಲ್ಲಿ ಮಾಜಿ ಉಪರಾಷ್ಟ್ರಪತಿಗಳಾದ ಶ್ರೀ ಬಿ.ಡಿ.ಜತ್ತಿ ಯವರ ಘನ ಅಧ್ಯಕ್ಷತೆಯಲ್ಲಿ ಈ ಅರಮನೆಯಲ್ಲಿ ಅಂಬರ ಚರಕ ಖಾದಿ ಕೇಂದ್ರವನ್ನು ಸ್ಥಾಪಿಸಿದ್ದು ಈ ಭಾಗದಲ್ಲಿ ಹತ್ತಿ ಬೆಳೆಯುದರಿಂದ ಇಲ್ಲಿ ಪ್ರಾರಂಭಗೊಂಡಿತ್ತು. ಹತ್ತಿ ಬೆಳೆಯುವದು ಕಡಿಮೆಯಾದ ಪ್ರಯುಕ್ತ ಈಗ ಅದು ಸಹ ನಿಂತು ಹೋಗಿದೆ.


ಅರಮನೆಯ ಮುಂದಿನ ಭವಾನಿ ಮಂದಿರ ವರಾಂಡದಲ್ಲಿ ಇತ್ತೀಚಿಗಷ್ಟೆ ಕೆಂಪು ಮರಳುಗಲ್ಲಿನಲ್ಲಿ ತಯಾರಿಸಿದ ದೊಡ್ಡದಾದೊಂದು ಬೀಸುವಕಲ್ಲು ದೊರೆತಿದ್ದು ಇದನ್ನು ದ್ಯಾವವ್ವನ ಬೀಸುಕಲ್ಲು ಎಂದು ಕರೆಯಲಾಗುತ್ತದೆ.


ರಾಸ್ತೆವಾಡೆಯಲ್ಲಿ ಅನೇಕ ದೇವಾಲಯಗಳು ಇವೆ. ಈ ದೇಗುಲಗಳ ಗೋಡೆಗಳು ಕಮಾನಿನಾಕಾರದ್ದಲ್ಲಿವೆ. ದೇಗುಲದ ಕಂಬಗಳು ಪೂರ್ವ ಚಾಲುಕ್ಯರ ಕರಿಕಲ್ಲಿನ ವಿಶಿಷ್ಟ ಮಾದರಿಯಿಂದ ಕೂಡಿದ್ದರೆ, ಕಮಾನಿನಾಕಾರದಲ್ಲಿರುವ ದೇಗುಲದ ಭಾಗವು ಇತ್ತಿಚೀನ ಸೇದಿ ಕಲ್ಲಿನಿಂದ ನಿರ್ಮಾಣವಾಗಿರುವುದು ಇದರ ವೈಶಿಷ್ಟ್ಯವಾಗಿದೆ. ವಾಸ್ತುಶಿಲ್ಪ ಲಕ್ಷಣಗಳಿಂದ ಇನ್ನೊಂದು ಕಲ್ಯಾಣ ಚಾಲುಕ್ಯರ ಸುಂದರವಾದ ದೇಗುಲವಾಗಿದೆ.


ತಾಳಿಕೋಟೆಯ ಕೋಟೆ :    


೩ ಮೈಲುಗಳಷ್ಟು ವಿಸ್ತಾರವಾದ ವೃತ್ತಾಕಾರದ ಪ್ರದೇಶವನ್ನು ಈ ಕೋಟೆ ಹೊಂದಿದೆ. ಇದರಲ್ಲಿ ಅನೇಕ ಬೃಹತ್ತಾಕಾರದ ಕಾವಲು ಬುರುಜು ಗುಪ್ತಮಾರ್ಗ ಅನೇಕ ಸಿಹಿನೀರಿನ ಬಾವಿಗಳನ್ನು ಒಳಗೊಂಡಿದೆ.


ವಿಜಯನಗರದ ಅರಸರು ಹಾಗೂ ಷಾಹಿ ದೊರೆಗಳ ಮಧ್ಯ ನಡೆದ ೧೫೬೫ರ ಯುದ್ಧದಲ್ಲಿ ಈ ಕೋಟೆಯು ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ.


ಶ್ರೀ ಖಾಸ್ಗತೇಶ್ವರ ಮಠ :


ಪ್ರತಿ ವರ್ಷವು ಕಡ್ಲಿಗಾರ ಹುಣ್ಣಿಮೆಯ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಜಾತ್ರೆ ನಡೆಯುತ್ತದೆ. ಸುತ್ತಮುತ್ತಲಿನ ಹಳ್ಳಿಗಳಿಂದ ಬಂದ ಜನರು ತೇರನ್ನು ಎಳೆದು ಶ್ರೀ ಖಾಸ್ಗತೇಶ್ವರ ಕೃಪೆಗೆ ಪಾತ್ರರಾಗುತ್ತಾರೆ.


ಈ ದೇವಾಲಯದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ನಿಲಯ ನಡೆಯುತ್ತದೆ. ಮತ್ತು ಮಠದಲ್ಲಿ ಒಂದು ಸಂಗೀತ ಶಾಲೆಯಿದೆ. ಈ ಮಠವು ಅನ್ನದಾಸೋಹದೊಂದಿಗೆ ಜ್ಞಾನದಾಸೋಹಕ್ಕು ಹೆಸರುವಾಸಿಯಾಗಿದೆ.


ತಾಳಿಕೋಟೆ ದ್ಯಾಮವ್ವ :


ಆರಾರಾಯರು ಬಡವರಾದರು ಹೃದಯದಿಂದ ಶ್ರೀಮಂತರಾಗಿದ್ದರು. ಇವರಿಗೆ ದ್ಯಾಮವ್ವ ಎಂಬ ಮಗಳಿದ್ದಳು ಅವಳನ್ನು ಚಿಕ್ಕವಯಸ್ಸಿನಲ್ಲಿಯೇ ತಾಳಿಕೋಟೆ ಗ್ರಾಮಕ್ಕೆ ಮದುವೆಮಾಡಿ ಕೊಡಲಾಯಿತು.


ದ್ಯಾಮವ್ವ ಗಂಡನ ಮನೆಗೆ ಹೋದ ಹನ್ನೆರಡು ವರ್ಷಗಳ ನಂತರ ಆರಾ
ರಾಮನೆಗೆ ಮತ್ತೊಬ್ಬ ಮಗ ಹುಟ್ಟಿದ ಆತನ ಹೆಸರು ಸುಲಿಯಲ್ಲ.ಸುಲಿಯಲ್ಲ ಹಟವಾದಿ ಮತ್ತು ಕಿಡಿಗೇಡಿಯಾಗಿದ್ದ. ಸುಲಿಯಲ್ಲ ದಾರಿಯಲ್ಲಿ ನೀರಿಗೆ ಹೋಗುವ ನಾರಿಯರ ಕೊಡಕ್ಕೆ ಕಲ್ಲಿನಿಂದ ಹೊಡೆದು ಕೊಡ ಒಡೆದಾಗ ಆ ನಾರಿಯರು ಅಕ್ಕತಂಗಿಯರಿಲ್ಲದವ ಎಷ್ಟೊಂದು ಮೆರೆಯುತ್ತಾನೆ ಎಂದು ಬಯ್ಯುತ್ತಿದ್ದರು. ಇದರಿಂದ ನೊಂದ ಸುಲಿಯಲ್ಲ ತನಗೆ ಅಕ್ಕ ಇರುವುದು ತಾಯಿಯಿಂದ ತಿಳಿಯುತ್ತಾನೆ. ಅಕ್ಕನನ್ನು ನೋಡಬೇಕೆಂಬ ಆಸೆಯಿಂದ ತಾಳಿಕೋಟೆಗೆ ಹೋಗಲು ನಿರ್ಧರಿಸುತ್ತಾನೆ.


ತಾಳಿಕೋಟೆಗೆ ಬರುವಾಗ ಕೆಲವು ಅಪಶಕುನಗಳು ಕಂಡುಬಂದರೂ ಅಕ್ಕನನ್ನು ನೋಡಬೇಕೆಂಬ ಆತುರದಿಂದ ತಾಳಿಕೋಟೆಗೆ ಬರುತ್ತಾನೆ. ಬರುವಾಗ ಸೀರೆ, ಹೂವು, ಅರಿಸಿಣ, ಬಳೆ ಎಲ್ಲವನ್ನು ತೆಗೆದುಕೊಂಡು ಊರು ಹುಡುಕುತ್ತಾ ಬರು
ತ್ತಾನೆ.


ತಾಳಿಕೋಟೆಗೆ ಬಂದು ಸೇದಿಬಾವಿಯ ಮೇಲೆ ಕುಳಿತು ನೀರಿಗೆ ಬರುವ ಹೆಣ್ಣುಮಕ್ಕಳಿಗೆ ತಾನು ದ್ಯಾಮವ್ವನ ತಮ್ಮ ಅವಳಿಗೆ ನಾನು ಬಂದ ವಿಷಯ ತಿಳಿಸಿರಿ, ನನ್ನನ್ನು ಕರೆಯಲು ಬರಲು ಹೇಳಿರಿ- ಎಂದು ಹೇಳುತ್ತಿದ್ದ.


ಅವರು ದ್ಯಾಮವ್ವನಿಗೆ ಈ ವಿಷಯ ತಿಳಿಸಿದಾಗ ತುಂಬಾ ಸಂತಸದಿಂದ ತಮ್ಮ
ನನ್ನು ಕರೆಯಲು ತೆರುಳುತ್ತಾಳೆ. ತಮ್ಮನನ್ನು ಕಂಡು ಸಂತೋಷಗೊಂಡು ಆತ
ನನ್ನು ಮನೆಗೆ ಕರೆದುಕೊಂಡು ಬರುತ್ತಾಳೆ.


ಈ ಸಂದರ್ಭದಲ್ಲಿ ತಾಳಿಕೋಟೆಯ ಕೋಟೆಯನ್ನು ಕಟ್ಟುತ್ತಿರುತ್ತಾರೆ. ಆದರೆ ಆ ಕೋಟೆಗ್ವಾಡಿ ನಿಲ್ಲುತ್ತಿರಲಿಲ್ಲ. ಅದಕ್ಕೆ ಕಾರಣ ತಿಳಿದಾಗ ಪೂರ್ವ ದಿಕ್ಕಿನಿಂದ ಅಮ
ವಾಸ್ಯೆ ದಿನದಂದು ಬಂದ ವ್ಯಕ್ತಿಯನ್ನು ಬಲಿಕೊಡಬೇಕು ಎಂದು ಡಂಗೂರ ಸಾರ
ಲಾಯಿತು.


ದ್ಯಾಮವ್ವನ ನಾದನಿ ಅಮವಾಸ್ಯೆ ದಿನ ಪೂರ್ವದಿಕ್ಕಿನಿಂದ ಬಂದ ಸುಲಿಯಲ್ಲನ ವಿಚಾರವನ್ನು ಹಣದಾಸೆಯಿಂದ ಊರ ಜನರಿಗೆ ಹೇಳುತ್ತಾಳೆ.


ಸುಲಿಯಲ್ಲನನ್ನು ಕೋಟೆಯಲ್ಲಿ ಹಾಕಿ ಕೋಟೆಕಟ್ಟಲು ನಿರ್ಧರಿಸಿದಾಗ ದ್ಯಾಮವ್ವ ತಮ್ಮನನ್ನು ಕಳೆದುಕೊಳ್ಳಲು ಇಷ್ಟಪಡದೆ ಮೊದಲು ತಾನು ಕೋಟೆಯೊಳಗೆ ಹೋಗುವದಾಗಿ ನಿರ್ಧರಿಸಿದಳು. ಮುಂದೆ ದ್ಯಾಮವ್ವ ಹಿಂದೆ ಸುಲಿಯಲ್ಲ ಹೋದರು ಮೂರು ವರ್ಷಕ್ಕೆ ಬೇಕಾದ ಕಾಳು ಕಡಿಯನ್ನು ಮತ್ತು ಬೀಸುಕಲ್ಲನ್ನು ಕೋಟೆ
ಯೊಳಗಡೆ ಇಟ್ಟು ಕೋಟೆಯನ್ನು ಕಟ್ಟಲಾಯಿತು ಎಂಬ ದಂತ ಕಥೆಗಳು ಇವೆ.
         ದ್ಯಾಮವ್ವ ಅಲ್ಲಿಯೇ ನಸುಕಿನಲ್ಲಿ ಎದ್ದು ಬೀಸುಕಲ್ಲನ್ನು ಬಿಸುತ್ತಿದ್ದಳು. ಇದನ್ನು ಕೇಳಿದ ಊರಿನ ಅತ್ತಿಯರು ತಮ್ಮ ತಮ್ಮ ಸೊಸೆಯರಿಗೆ ಬೈದು ಎಬ್ಬಿಸುತ್ತಿದ್ದರು. ಇದರಿಂದ ಬೆಸರಗೊಂಡ ಸೊಸೆಯಂದಿರು ದ್ಯಾಮವ್ವನಿಗೆ ‘ಏನ್ ಕಾಟ ಕೊಡ್ತಾ
ಳೀಕಿ’ ಎಂದು ಬೈಯುತ್ತಿದ್ದರಂತೆ. ಅಂದಿನಿಂದ ದ್ಯಾಮವ್ವ ಬೀಸುವದನ್ನು ಬಿಟ್ಟ
ಳಂತೆ. 
     ಬಡವರು  ಯಾರಾದರು  ಬಂದು ತಮಗೆ ಆಭರಣ ಬೇಕಾಗಿವೆ ಎಂದು ದ್ಯಾಮವ್ವನಿಗೆ ಕೇಳಿಕೊಂಡಾಗ ಆ ಕೋಟೆ ಗೋಡೆಯಿಂದ ಆಭರಣಗಳನ್ನು ಹೊರಗಿಡುತ್ತಿದ್ದಂತೆ. ಆಭರಣ ಒಯ್ದವರು ಮರಳಿ ತಂದು ಕೋಡುತ್ತಿದ್ದರಂತೆ. ಒಮ್ಮೆ ಒಬ್ಬ ಮಹಿಳೆ ಒಯ್ದು ಆಭರಣ ಕೊಡದಿದ್ದ ಕಾರಣ ಅವರ ಮನೆತನ ಸರ್ವನಾಶವಾಯಿತಂತೆ. 
        ತಾಳಿಕೋಟೆ ಅಗಸಿಯಲ್ಲಿ ದ್ಯಾಮವ್ವನ ಹಾಗೂ ಸುಲಿಯಲ್ಲನ ಗುರುತಿನ ಕಲ್ಲು ಕಾಣಿಸುತ್ತದೆ. ದ್ಯಾಮವ್ವ ಬೀಸುವಕಲ್ಲು ೪ ಪೂಟು ಅಗಲ ೧೬ ಇಂಚು ಎತ್ತರವನ್ನು ಹೊಂದಿದೆ. ಈ ಬೀಸುವಕಲ್ಲು ಈಗಲೂ ಕಾಣಬಹುದಾಗಿದೆ. 

ಅನಿತಾ ಬಿರಾದಾರ ಬಿ.ಎ. ೨

ಕೊಡೇಕಲ್ಲ ಬಸವಣ್ಣ

ಉತ್ತರದಲ್ಲಿ ವಡಬಾಳ ನಾಗನಾಥ, ದಕ್ಷಿಣದಲ್ಲಿ ಮಂಟೇಸ್ವಾಮಿಯಂತಹ ವಿಖ್ಯಾತ ಸಿದ್ಧರ ಗುರುವಾಗಿದ್ದ ಕೊಡೇಕಲ್ಲ ಬಸವಣ್ಣನದು ಘನಕ್ಕೆ ಘನವೆನ್ನಬಹುದಾದ ವ್ಯಕ್ತಿತ್ವ.

ಕೊಡೇಕಲ್ಲ ಬಸವಣ್ಣ ಹುಟ್ಟಿದ್ದು ಹಂಪಿಯಲ್ಲಿ.ಮಲ್ಲಿಶೆಟ್ಟಿ ಲಿಂಗಾಜೆಮ್ಮ ಇವರ ತಂದೆ ತಾಯಿ. ಇವರ ಮರಿಮೊಮ್ಮಗ ವೀರಸಂಗಯ್ಯ. ವೀರಸಂಗಯ್ಯನನ್ನು ಕುರಿತು ರಚಿಸಿದ ಕಾವ್ಯ ನಂದಿಯಾಗಮ ಲೀಲೆ. ಈ ಕೃತಿ ರಚನೆಯ ಕಾಲ ಕ್ರಿ.ಶ. ೧೫೮೯. ಈ ಆಧಾರ ಹಿಡಿದು ಕವಿಗೆ ನಾಲ್ಕು ತಲೆಮಾರು ಹಿಂದೆ ಜೀವಿಸಿದ್ದ ಕೊಡೇಕಲ್ಲ ಬಸವಣ್ಣನ ಕಾಲ  ಕ್ರಿ.ಶ. ೧೪೮೯.ಕೃಷ್ಣಾತೀರದ ಬೆಟ್ಟ ಪ್ರದೇಶಗಳಿಗೆ ಹೊಂದಿಕೊಂಡಿರುವ ಕೊಡೇಕಲ್ಲ ಯಾದಗೀರ ಜಿಲ್ಲೆಯ ಸುರಪುರ ತಾಲೂಕಿನಲ್ಲಿದೆ. ಕೃಷ್ಣಾ ತೀರದ ಈ ದಂಡೆಗೆ ಕೊಡೇಕಲ್ಲ ಇದ್ದರೆ ಆ ದಂಡೆಗೆ ಬಸವಣ್ಣನ ನೆಲೆ ಅಮರಕಲ್ಯಾಣದ ಜಲದುರ್ಗವಿದೆ. 


ಕಲ್ಯಾಣ ತೊರೆದ ಬಸವಣ್ಣ ಸಂಗಮಕ್ಕೆ ಬರುವಾಗ ದಾರಿಯಲ್ಲಿ ಕೊಡೇಕಲ್ಲಿನಲ್ಲಿ ತಂಗಿದ್ದನೆಂಬ ಐತಿಹ್ಯವಿದೆ. ಇದಕ್ಕೆ ಕೊಡೇಕಲ್ಲ ಸಾಹಿತ್ಯದಲ್ಲಿಯೂ ಸಮರ್ಥನೆ ದೊರಕುತ್ತದೆ. ತುರುಗಾಹಿ ರಾಮಣ್ಣನ ವಚನದಲ್ಲಿ ಬರುವ - ಬಂದಿತ್ತು ದಿನ ಬಸವಣ್ಣ ‘ಕಲ್ಲಿಗೆ.’ಕಲ್ಲಿಗೆ ಎಂಬುದಕ್ಕೆ ಕೊಡೇಕಲ್ಲಿಗೆ ಎಂದು ಅರ್ಥ ಹೇಳಲು ಸಾಧ್ಯವಿದೆ. ಹೀಗೆ ಕಡೆಯದಾಗಿ ಮೆಟ್ಟಿದ ಗ್ರಾಮವಾಗಿ ಕೊಡೇಕಲ್ಲು ಕಡೆಯ ಕಲ್ಯಾಣವೆನಿಸಿದೆ. ಆ ಕಾರಣಕ್ಕಾಗಿ

ಹಂಪೆಯಲ್ಲಿ ಬಸವಣ್ಣ ಕೊಡೇಕಲ್ಲನ್ನು ತನ್ನ ನೆಲೆಯನ್ನಾಗಿ ಮಾಡಿಕೊಂಡನೆಂದು ಕೊಡೇಕಲ್ಲ ಸಾಹಿತ್ಯ ತಿಳಿಸುತ್ತದೆ. 


ಮನೆತನದ ವೃತ್ತಿಯಾಗಿ ವ್ಯಾಪಾರದಲ್ಲಿ ಮುಂದುವರೆ
ಯುತ್ತಿದ್ದಾಗ ಎಲ್ಲಿಂದಲೋ ಬಂದ ಅದ್ವೈತ ಸಂಗಮೇಶ್ವರ ಎಂಬಾತ ಇವನನ್ನು ತನ್ನ ಅದ್ವೈತ ಮಾರ್ಗಕ್ಕೆ ಸೆಳೆಯುತ್ತಾನೆ.

ಇಷ್ಟಲಿಂಗ ಬಿಡಿಸಿ ಚರ್ಮಾಂಬರ ಉಡಿಸಿ ಕೈಯಲ್ಲಿ ಕೋಲು ,ಕಾಲಲ್ಲಿ ಕಂಸ, ‘ಹಂಡಿ’ ಎಂಬ ಮಣ್ಣಿನ  ಭಿಕ್ಷಾ
ಪಾತ್ರೆಯನ್ನು ನೀಡಿ ಅದ್ವೈತದ ನುಡಿ ಸಾರಲು ಬೀಳ್ಕೊ
ಡುತ್ತಾನೆ. ಇದು ಮಹಮ್ಮದೀಯ ಆವತಾರ ಎಂದು ಕೊಡೇಕಲ್ಲ ಸಾಹಿತ್ಯ ಹೇಳುತ್ತದೆ. ಇಷ್ಟೊತ್ತಿಗಾಗಲೆ ಹೆಂಡತಿ ಕಾಶಮ್ಮ



 ನನ್ನು ಕಳೆದುಕೊಂಡಿದ್ದ ಬಸವಣ್ಣ ಬಳ್ಳಿಗಾವೆಯ ಪಂಪವೆಣ್ಣಿಗೆ ಮಠದ ಸಿದ್ಧಯ್ಯ -ಚೆನ್ನಮ್ಮರ ಮಗಳು ನೀಲಮ್ಮ ( ಮಹಾದೇವಮ್ಮ ) ನನ್ನು ಮದುವೆಯಾಗಿ ಆಧ್ಯಾತ್ಮ ಬಾಳುತ್ತ, ಅದ್ವೈತ ನುಡಿ ಸಾರುತ್ತ, ಕಾಲಜ್ಞಾನ ಹೇಳು ತ್ತ , ಮಕ್ಕಳು ರಾಚಪ್ಪಯ್ಯ-ಸಂಗಪ್ಪಯ್ಯ ಗುಹೇಶ್ವರ ಸಹಿತ
ವಾಗಿ  ‘ಕಡೆಯ ಕಲ್ಯಾಣ’ವೆಂಬ ಕೊಡೇಕಲ್ಲಿಗೆ ಬರುತ್ತಾರೆ. ಆ ಹೊತ್ತಿಗೆ ಶಿಷ್ಯ-ಪ್ರಶಿಷ್ಯ ಸಮೂಹ-ಅನುಯಾಯಿ ವರ್ಗ ಬೆಳೆದು ಬಂದಿತು. ಅರಸು ಹನುಮನಾಯಕನ ಬೆಂಬಲವೂ ಇವರಿಗೆ ದೊರೆಯಿತು. 

ನುಡಿ ಸಾರುವದರೊಂದಿಗೆ ನುಡಿ ರಚನೆಯನ್ನು ಸಹ ಮಾಡಿ
ದ್ದಾರೆ.ಇವರ ಸಾಹಿತ್ಯವೆಲ್ಲ ‘ಅಮರಗನ್ನಡ’ ಎಂಬ ಸಾಂಕೇತಿಕ ಲಿಪಿಯಲ್ಲಿದೆ. ಲೋಕಪರ್ಯಟನ ಮಾಡಿದ ಬಸವನನ್ನು ವಿಜಾಪುರ ದೊರೆ ಯೂಸುಫ್ ಅಲಿ ಆದಿಲ್ ಶಹಾನ ಜನ ಬಂಧಿಸಿದ ಸಂಗತಿಗಳೊ ಉಲ್ಲೇಖವಾಗಿವೆ.
ಬಿ.ಬಿ.ಬಾಗೇವಾಡಿ. ಬಿ.ಎ.೨
          ವಂಗಿ          ಬಿ.ಎ.೨

*****
...

Friday, July 23, 2010

ತಾಳಿಕೋಟಿಯಲ್ಲಿ ಶಿವಸಂಚಾರ ನಾಟಕಗಳು

ಶಿವಸಂಚಾರ - ೦೯
ಸಾಣೇಹಳ್ಳಿಯ ಶಿವಸಂಚಾರಕ್ಕೆ ತನ್ನದೇ ಆದ ಇತಿಹಾಸವಿದೆ.ಕರ್ನಾಟಕದಲ್ಲಿ ಮಠದ ಸ್ವಾಮೀಜಿಯೊಬ್ಬರು ನಾಟಕ ರೆಪರ್ಟರಿ ನಡೆಸುತ್ತಿರುವುದು ಅಪೂರ್ವ ಸಂಗತಿ.ಪ್ರತಿವರ್ಷ   ಮೂರು ನಾಟಕಗಳನ್ನು   ನಾಡಿನುದ್ದಕ್ಕೂ ಸಂಚರಿಸಿ ಪ್ರದರ್ಶಿಸುವುದು ಸಣ್ಣ ಮಾತಲ್ಲ.


 ತಾಳಿಕೋಟಿಯ ನಾಡು ನುಡಿ ಬಳಗದವರು ಶಿವಸಂಚಾರದ ನಾಟಕಗಳ ಪ್ರದರ್ಶನವನ್ನು ೦೯-೧೦-೨೦೧೦ ರಂದು ಏರ್ಪಡಿಸಿದ್ದರು.
೧. ಯಹೂದಿ ಹುಡುಗಿ
೨. ಹೇಮರಡ್ಡಿ ಮಲ್ಲಮ್ಮ
೩. ಕೊಡಲ್ಲ ಕೊಡಕ್ಕಿರಲ್ಲ




ಯಹೂದಿ ಹುಡುಗಿ :


ಇಂದಿನ ಸಂದರ್ಭದಲ್ಲಿ ಜಾತಿ ಜಾತಿಗಳ ಮಧ್ಯ ಗೋಡೆ ಗೋಡೆಗಳೆದ್ದಿವೆ. ಆ ಗೋಡೆಗಳನ್ನು ಒಡೆದು ಮನುಷ್ಯ ಮನುಷ್ಯರಲ್ಲಿ ಬಂಧುತ್ವವನ್ನು ಉದ್ದೀಪಿಸುವುದು- ಈ ನಾಟಕ.
ನಾಟಕ ರಚನೆ : ಆಗಾ ಹಸ್ರ ಕಸ್ಮೀರಿ, ಕನ್ನಡ ಅನುವಾದ ಇಟಗಿ ಈರಣ್ಣ. 
ರೋಮನ್ ಹಾಗೂ ಯಹೂದಿಗಳ ಧರ್ಮ ಸಂಘರ್ಷ ಅತಿರೇಕದ್ದು. ರೋಮನ್ ಯುವರಾಜ ಮಾರ್ಕಸ್ ಮತ್ತು ಯಹೂದಿ ಹುಡುಗಿ ರಾಹೀಲ್ ಳ ನಡುವೆ ಹುಟ್ಟಿದ ಪ್ರೀತಿ ಜಗತ್ತಿಗೆ ಹೊಸ ಸಂದೇಶ ಸಾರುತ್ತದೆ.




ಒಂದು ಕಡೆ ಧರ್ಮ ಇನ್ನೊಂದು ಕಡೆ ಪ್ರೀತಿ ಮುಖಾಮುಖಿಯಾದಾಗ  ಪ್ರೀತಿಗೆ ಜಯ ದೊರೆಯುತ್ತದೆ. ಆದರೆ ಈ ಸಂಗತಿಯನ್ನು ಕಲಾತ್ಮಕವಾಗಿ ಹೆಣೆದ ರೀತಿ ಅದ್ಭುತವಾಗಿದೆ. ಶ್ವೇತ ಎಚ್. ಕೆ, ರಾಹೀಲ್ ಪಾತ್ರಕ್ಕೆ ಜೀವ ತುಂಬಿದರು. ಅದೇ ರೀತಿ ಅಜರಾ ಪಾತ್ರದಲ್ಲಿ ಅರುಣ್ ಚಿಕ್ಕಾನಂಗಲ್ ಗಮನಸೆಳೆದರು..


ಶರಣ ಮುತ್ಯಾನ ಗುಡಿ ಬಯಲಿನಲ್ಲಿ ಮೊದಲ ದಿನ ನಡೆದ ಈ ನಾಟಕ ಗಾಢ ಪರಿಣಾಮ ಬೀರಿತು. ಶಿವಸಂಚಾರ ಅನಂತರದ ನಾಟಕಗಳಿಗೆ ಹೆಚ್ಚಿನ ಜನರನ್ನು ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿತು.


ಹೇಮರಡ್ಡಿ ಮಲ್ಲಮ್ಮ:


ನಲವಡಿ ಶ್ರೀಕಂಠ ಶಾಸ್ತ್ರಿಗಳು ರಚಿಸಿದ ಈ ಪೌರಾಣಿಕ ನಾಟಕ ಅತ್ಯಂತ ಜನಪ್ರಿಯವಾದದ್ದು. ಹೇಮರಡ್ದಿ ಮಲ್ಲಮ್ಮ ತನ್ನ ಪೆದ್ದ ಗಂಡನನ್ನು ಚೆನ್ನಮಲ್ಲಿಕಾರ್ಜುನನೆಂದೇ ಭಾವಿಸಿ ಆದರ್ಶ ಗೃಹಿಣಿ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟಿದ್ದಾಳೆ.ಅಲ್ಲದೆ ಅವಿಭಕ್ತ ಕುಟುಂಬಗಳು ಒಡೆದು ಛಿದ್ರವಾಗುತ್ತಿರುವ ಇಂದಿನ ಸಂದರ್ಭಕ್ಕೆ ಸೂಕ್ತ ಸಂದೇಶ ನೀಡುತ್ತದೆ.ಜೀವದಾಯಕ ಔಷಧವಾಗಿದೆ.ಜನಸಾಮಾನ್ಯ  ಮತ್ತು ಪ್ರಬುದ್ಧ ಪ್ರೇಕ್ಷಕರನ್ನು ಏಕಕಾಲಕ್ಕೆ ರಂಜಿಸುತ್ತದೆ.
ಮಲ್ಲಮ್ಮನ ಮೈದುನ ವೇಮನ ವಿಷಯಾಸಕ್ತ ಸ್ಥಿತಿಯಿಂದ ಆಧ್ಯಾತ್ಮದ ಹಂತಕ್ಕೇರುವ ಸನ್ನಿವೇಶವಂತೂ ನಾಟಕದ ಶಿಖರವಾಗಿದೆ.




ತರಬೇತಿ ಪಡೆದುಕೊಂಡ ಕಲಾವಿದರು ಉತ್ತಮವಾಗಿ  ಅಭಿನಯಿಸಿ  ಪ್ರೇಕ್ಷಕರಲ್ಲಿ ನಾಟಕ ಅಭಿರುಚಿಯನ್ನು  ಹೆಚ್ಚಿಸಿದರು.
ಲಕ್ಷ್ಮೀ ವಿ. ಮಲ್ಲಮ್ಮನಾಗಿ ಗಿರೀಶ ಈಚನಾಳ ಭರಮರಡ್ಡಿಯಾಗಿ ಗಮನಸೆಳೆದರು.ಜೀವನ್ ನೀನಾಸಂ ವೇಮಣ್ಣನಾಗಿ ಅದ್ಭುತ ಅಭಿನಯ ನೀಡಿದರು.


ಕೊಡಲ್ಲ ಕೊಡಕ್ಕಿರಲ್ಲ



ಇಟಲಿಯ ನಾಟಕಕಾರ ನೋಬೆಲ್ ಪ್ರಶಸ್ತಿ ಪುರಸ್ಕೃತ ದಾರಿಯೋ ಪೋ ಅವರ Wont pay,Cant pay- ಕನ್ನಡ ರೂಪಾಂತರವೇ ಕೊಡಲ್ಲ ಕೊಡಕ್ಕಿರಲ್ಲ.


ಹಸಿದ ಹೊಟ್ಟೆಗೆ ಯಾವ ಆದರ್ಶವೂ ಹಿಡಿಸುವುದಿಲ್ಲ.ಬದುಕು ಮುಖ್ಯ ಎನ್ನುವ ವಾಸ್ತವವನ್ನು ಬಿಂಬಿಸುತ್ತದೆ. ಜಾಗತೀಕರಣದ ಆಗಮನದಿಂದಾಗಿ ರೈತರು ದಿಕ್ಕೆಟ್ಟಿದ್ದಾರೆ. ಕಾರ್ಮಿಕರು ಬಸವಳಿದಿದ್ದಾರೆ. ಜನರ ಬದುಕು ಚಿಂತಾಜನಕವಾಗಿದೆ. ಯಂತ್ರದ ಆಗಮನದಿಂದ ಸಣ್ಣಪುಟ್ಟ ವೃತ್ತಿಗಳು ನಾಶವಾಗುತ್ತಲಿವೆ.


ಪ್ರಸ್ತುತ ಸಂದರ್ಭದಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಹೊಟ್ಟೆ. ನಾಟಕದ ಪಾತ್ರಧಾರಿಗಳು ಕಾನೂನು ಮುರಿದು ಹೊಟ್ಟೆಗಾಗಿ ಹೋರಾಟ ನಡೆಸುತ್ತಾರೆ. ಮೇಲ್ನೋಟಕ್ಕೆ ಇದೊಂದು ಪ್ರಹಸನವಾಗಿ ಕಂಡರೂ ನಮ್ಮ ರೈತರ,ಕಾರ್ಮಿಕರ ದಯನೀಯ ಸ್ಥಿತಿಯನ್ನು ಬಿಂಬಿಸುತ್ತದೆ.


ಬಹುಮಾಧ್ಯಮದ ಹಾವಳಿಯಲ್ಲಿ ಸಿಕ್ಕು ನಲುಗುತ್ತಿರುವ ಮಧ್ಯಮ ವರ್ಗದ ಜನರ ಮನಸ್ಸನ್ನು ತಿದ್ದಿ ತೀಡಿ, ಅವರಲ್ಲಿಯ ಕಲಾಭಿರುಚಿಯನ್ನು ಹೆಚ್ಚಿಸುವಲ್ಲಿ ಈ ನಾಟಕಗಳು ಯಶಸ್ವಿಯಾದವು.
 ಸೋಮಶೇಖರ ಕೋಟಿಖಾನಿ ಬಿ.ಎ.೨ 

Wednesday, July 21, 2010

ಎಲ್ಲಮ್ಮನ ಆಟ (ಜನಪದ ಬಯಲಾಟ)

ಜಾನಪದ ನಮ್ಮ ಸಂಪತ್ತು. ನಮ್ಮ ಪರಂಪರೆಯ ಅತ್ಯಂತ ಪಳೆಯುಳಿಕೆ. ಹೆಸರಿಲ್ಲದೆ ಉಸಿರಾಗಿ ಹರಿದು ಬಂದ ವಾಚಿಕ ಪರಂಪರೆ. ಇಂತಹ ಜಾನಪದದಲ್ಲಿ ಸಾಹಿತ್ಯವೂ ಒಂದು.ಸಾಹಿತ್ಯದಲ್ಲಿ ಅತ್ಯಂತ ಆಕರ್ಷಕವಾದುದು ಬಯಲಾಟ.


ವೈವಿಧ್ಯಮಯವಾದ ಬಯಲಾಟವನ್ನು ಅಭ್ಯಾಸದ ಅನುಕೂಲಕ್ಕೆ ನಾಲ್ಕು ರೀತಿಯಲ್ಲಿ ವಿಭಾಗಿಸಲಾಗುತ್ತದೆ.


ದೊಡ್ಡಾಟ, ಯಕ್ಷಗಾನ,ಸಣ್ಣಾಟ ಮತ್ತು ಕೃಷ್ಣ ಪಾರಿಜಾತ.



ಎಲ್ಲಮ್ಮನ ಆಟ ಸಣ್ಣಾಟ ಪ್ರಕಾರಕ್ಕೆ ಸೇರುತ್ತದೆ.ಪೌರಾಣಿಕ ಆಶಯಗಳನ್ನು ಹೊಂದಿದ್ದರೂ ಇದು ಜನಪದ ಪ್ರಜ್ಞೆಯನ್ನು ಬಿಂಬಿಸುವ ಸುಂದರ ಆಟವಾಗಿದೆ. ಎಲ್ಲಮ್ಮ ಭಕ್ತಿಯನ್ನು ಬಿಚ್ಚಿಡುವ ಈ ಆಟದಲ್ಲಿ ಗತಕಾಲದ ಅನೇಕ ಪಳೆಯುಳಿಕೆಗಳಿವೆ.


ಉತ್ತರ ಕರ್ನಾಟಕದ ವಿಜಾಪುರ , ಕಲಬುರ್ಗಿ,ಬೆಳಗಾವಿ ಮತ್ತು ಮಹಾರಾಷ್ಟ್ರದ ಅಕ್ಕಲಕೋಟ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಆಟವನ್ನು ರಚಿಸಿದವನು – ವಿಜಾಪುರ ಜಿಲ್ಲೆಯ ಬಸವರಾಜ ಸಾಗಾವಿ. ಎಲ್ಲಮ್ಮನ ಭಕ್ತನೂ ಗಂಡುಜೋಗಪ್ಪನೂ ಆದ ಬಸವರಾಜ ಒಬ್ಬ ಶ್ರೇಷ್ಥ ನಾಟಕಕಾರ, ಅಭಿನಯಿಸುವ ಕಲಾವಿದ.


ತಾಳಿಕೋಟಿ ಶರಣ ಮುತ್ತ್ಯಾ (ಸಾಂಬ ಪ್ರಭು )ನ ಜಾತ್ರೆಯಲ್ಲಿ ನಾನು ನೋಡಿದ ಬಯಲಾಟವನ್ನು ಆಡಿದವರು ವಿಜಾಪುರ ಜಿಲ್ಲೆ ಗುಣಕಿ ಬೊಮ್ಮನಳ್ಳಿಯ ಮೇಳದವರು.



ಹೂಣಾವತಿ ಪಟ್ಟಣದ ರೇಣುಕರಾಜನ ಮಗಳಾಗಿ ಹುಟ್ಟಿದ ಎಲ್ಲಮ್ಮ ಜಮದಗ್ನಿ
ಯನ್ನು ಮದುವೆಯಾಗುವಳು. ಪತಿ ಪೂಜೆಗೆ ಸೀತಾಳ ನೀರು ಪತ್ರಿ ಹೂ ತರಲು ಹೋದಾಗ ಜೋಡಿ ಮೀನುಗಳ ಆಟ ನೋಡಿ ಮೈಮರೆಯುತ್ತಾಳೆ, ಚಿತ್ತ ಚಾಂಚ
ಲ್ಯಕ್ಕೆ ಒಳಗಾಗುತ್ತಾಳೆ.. ಪತಿಜಮದಗ್ನಿಯ ಶಾಪಕ್ಕೆ ತುತ್ತಾಗುತ್ತಾಳೆ. ಕುಷ್ಥರೋಗ ಪೀಡಿತಳಾಗುತ್ತಾಳೆ.
ಎಲ್ಲಮ್ಮ ಎಕ್ಕಯ್ಯ- ಜೋಗಯ್ಯ ಅವರ ಸೇವೆ ಮಾಡಿ ರೋಗ ವಾಸಿಮಾಡಿಕೊಂಡು ಬದುಕುತ್ತಿರುವಾಗ ಜನರಿಂದ ಗೊಡ್ಡಿ ಬಂಜೆ ಎಂಬ ನಿಂದೆಗೆ ಒಳಗಾಗುತ್ತಾಳೆ. ಶಿವ
ನಲ್ಲಿಗೆ ಹೋಗಿ ಕಾಡಿಬೇಡಿ ವರ ಪಡೆದು ಮಗನನ್ನು ಪಡೆಯುತ್ತಾಳೆ.



ಚಂಡಾಟವಾಡುವಾಗ ನಾರಿಯರ ಕೊಡ ಒಡೆದ ಪರಶುರಾಮ “ ತಂದೆಯಿಲ್ಲದ ಮೂಳ ”ಎಂಬ ನಿಂದೆಗೆ ಒಳಗಾಗುತ್ತಾನೆ. ತಾಯಿ ಹತ್ತಿರ ಬಂದು ನನ್ನ ತಂದೆಯನ್ನು ತೋರಿಸು ಎಂದು ಹಂಗಾಗಿ ಕಾಡುತ್ತಾನೆ. ತನ್ನ ತಂದೆಯನ್ನು ಕೊಂದವ ಕಾರ್ತವೀರಾರ್ಜುನ ಎಂಬ ಸಂಗತಿಯನ್ನು ತಿಳಿದು ಅವನನ್ನು ಸಂಹರಿಸಿ ತಂದೆಯನ್ನು ಬದುಕಿಸುತ್ತಾನೆ.
ನಿನ್ನ ತಾಯಿ ಚಾರಿತ್ರ್ಯಹೀನಳು, ಅವಳನ್ನು ಕೊಲ್ಲು- ಎಂದು ಜಮದಗ್ನಿ ಆಜ್ಞಾಪಿಸಿದಾಗ ತಂದೆಯ ಮಾತನ್ನು ಪಾಲಿಸುವದಕ್ಕಾಗಿ ಮಾತಂಗಿ ಮನೆಯಲ್ಲಿ ಅಡಗಿ ಕುಳಿತ ಹಡೆದ ತಾಯಿಯನ್ನೇ ಕೊಲ್ಲುತ್ತಾನೆ. ಮರಳಿ ವರ ಪಡೆದು ತಾಯಿಯನ್ನು ಬದುಕಿಸಿಕೊಳ್ಳುತ್ತಾನೆ,
ಮುಗ್ದ ಜನಪದರು ಎಲ್ಲಮ್ಮನನ್ನು ಆರಾಧಿಸುತ್ತಾರೆ. ಪೂಜಿಸುತ್ತಾರೆ. ಎಲ್ಲಮ್ಮ ನಿನ್ನ ಹಾಲಕ ಉಧೋ ಉಧೋ ಎಂದು ಉದ್ಘೋಷಿಸುತ್ತಾರೆ.ವರ್ಷಪೂರ್ತಿ ಅವಳ ಜಾತ್ರೆ ಮಾಡುತ್ತಾರೆ.
ಮೂವತ್ತು ವರ್ಷದ ಹಿಂದೆ ಹುಟ್ಟಿದ ಈ ಆಟ ಇಂದಿಗೂ ಜನಪ್ರಿಯತೆ ಪಡೆದು ಜಾತ್ರೆಗಳಲ್ಲಿ ಪ್ರದರ್ಶನಗೊಳ್ಳುತ್ತಲಿದೆ.ಇಂತಹ ಸುಂದರ ಬಯಲಾಟವನ್ನು ಪ್ರೊ. ಚಂದ್ರಗೌಡ ಕುಲಕರ್ಣಿ ಅವರು ೧೯೯೨ ರಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ.


ಶಿವು ಮಾಗಣಗೇರಿ ಬಿ.ಎ.೨