Sunday, August 1, 2010

ನಮ್ಮೂರ ಪುರಾಣ ಕವಿ ವೀರಸಂಗಪ್ಪ ಹಗರಟಗಿ

ಕವಿಯ ಪರಿಚಯ :


ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹಗರಟಗಿ  ಗ್ರಾಮದಲ್ಲಿ ಭೀಮಪ್ಪ ಮತ್ತು ಬಸಮ್ಮ ಎಂಬ ದಂಪತಿಗಳ ಉದರದಲ್ಲಿ ದಿನಾಂಕ: ೨೫-೦೬-೧೯೩೨ ರಂದು ಜನಿಸಿದರು.


‘ಭಾವ ತರಂಗಿಣಿ’ ಹಾಗೂ ‘ಶ್ರೀ ಪವಾಡ ಬಸವೇಶ್ವರ ಸುಪ್ರಭಾತ ’ಈ ಎರಡು ಭಾವ ಕುಸುಮಗಳ ಸಮ್ಯಕ್ಯ್ ಸಂಕಲನದಿಂದ ಶ್ರೀ ವೀರಸಂಗಪ್ಪ ಹಗರಟಗಿಯವರು ಸಾಹಿತ್ಯ ಪ್ರಪಂಚಕ್ಕೆ ಪರಿಚಿತರು. ವೃತ್ತಿಯಿಂದ ಶಿಕ್ಷಕರು, ಪ್ರವೃತ್ತಿಯಿಂದ ಕವಿಗಳು ಸ್ವಭಾವತ: ಸಾತ್ವಿಕರು ದುಡಿಮೆಯೇ ದೈವ ಎಂದು ನಂಬಿದವರು. ಆದರೆ ವೀರಸಂಗಪ್ಪ ಹಗರಟಗಿಯವರು ಯಾರಿಗೂ ಕಾಣದ ಲೋಕಕ್ಕೆ ತೆರಳಿದ್ದಾರೆ.



ವಿದ್ಯಾಭ್ಯಾಸ


ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಾದ ಹಗರಟಗಿಯಲ್ಲಿಯೇ ಮುಗಿಸಿ ನಂತರ ಮಾಧ್ಯಮಿಕ ಶಿಕ್ಷಣವನ್ನು ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಎಂಬ ಮಾಧ್ಯಮಿಕ ಶಾಲೆಯಲ್ಲಿ ಮುಗಿಸಿದರು. ಹೆಚ್ಚಿನ ವ್ಯಾಸಂಗಕ್ಕಾಗಿ ‘ಕವಿಗಳ ಬೀಡು’ ಎಂದೇ ಖ್ಯಾತಿ ಪಡೆದಿರುವ ಧಾರವಾಡ ವಿಶ್ವವಿಧ್ಯಾನಿಲಯದಲ್ಲಿ ತಮ್ಮ ಪದವಿ ಶಿಕ್ಷಣವನ್ನು ಮುಗಿಸಿದರು.


ಸೇವೆ :


ವೀರಸಂಗಪ್ಪ ಹಗರಟಗಿಯವರು ಹಗರಟಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ (೧೯೫೪), ವಜ್ಜಲದಲ್ಲಿ ಪ್ರೌಢ ಶಾಲಾ ಶಿಕ್ಷಕರಾಗಿ (೧೯೮೦), ಹಾಗೂ ಕೆಂಭಾವಿಯಲ್ಲಿ ಪದವಿ ಪೂರ್ವ ಕಾಲೇಜು ಶಿಕ್ಷಕರಾಗಿ ಸೇವೆ ಸಲ್ಲಿಸಿದರು.


ಹಗರಟಗಿಯವರ ಸಾಹಿತ್ಯ ಚಿಂತನ-ಸನ್ಮಾನ:
೧. ೧೯೯೭ ರಲ್ಲಿ ಪ್ರಜ್ಞಾ ಪ್ರಕಾಶನ ಹುಣಸಗಿ,




೨. ಕನ್ನಡ ಸಾಹಿತ್ಯ ಪರಿಷತ್, ಮುದ್ದೇಬಿಹಾಳ,


೩. ಸ್ವಾಮಿ ವಿವೇಕಾನಂದ ತರುಣ ಸಂಘ, ಬಿಳೇಭಾವಿ


೪. ಶ್ರೀ ಪವಾಡ ಬಸವೇಶ್ವರ ಸಮಿತಿ ಸಾ.ಬಸರಕೋಡ


೫. ಗಡಿ ಸೋಮನಾಳ ಬಸವ ಸಮಿತಿ


೬. ಕೊಡೇಕಲ್ಲ್ ಶ್ರೀ ದುರದುಂಡೇಶ್ವರ ಮಠಾಧೀಶರಿಂದ


೭. ಸುರಪುರ ತಾಲೂಕಾ ಕನ್ನಡ ಸಾಹಿತ್ಯ ಸಂಘ, ರಂಗನಪೇಟ


೮. ಕನ್ನಡ ಸಾಹಿತ್ಯ ಪರಿಷತ್ , ಸುರಪುರ (ಕೆಂಭಾವಿಯಲ್ಲಿ)


೯. ಬಬಲಾದಿ ಶ್ರೀ ಚನ್ನವಿರೇಶ ಮಠಾಧೀಶರು ಜಿಲ್ಲಾ.ಗುಲ್ಬರ್ಗಾ


೧೦. ಕೋರಿಸಿದ್ದೇಶ್ವರ ಮಹಾ ಸಂಸ್ಥಾನ, ನಾಲವಾರ ಜಿಲ್ಲಾ. ಗುಲ್ಬಾರ್ಗಾ


೧೧. ಗುಂಡಕನಾಳ ತಾ. ಮುದ್ದೇಬಿಹಾಳ ಮಠದ ಸದ್ಭಕ್ತರಿಂದ


೧೨. ಕೊಡೇಕಲ್ಲ್ ಸಮಾಜ ಸೇವಾ ಬಳಗ (ಬಿಳೇಭಾವಿಯಲ್ಲಿ)


೧೩. ೧೦ನೇ ವಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ


೧೪. ಕಲ್ಯಾಣ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ


೧೫. ೧೦ ಸ್ಥಳಿಯ ರೋಟರಿ ಕ್ಲಬ್‌ರವರಿಂದ ಸನ್ಮಾನ




ಕೃತಿಗಳು :


ಭಾಮಿನಿ ಷಟ್ಪದಿಯಲ್ಲಿ ಜನಪದ ಸಂಸ್ಕೃತಿಯ ಹರಿಕಾರರಾದ ಸಾಧು-ಸಂತರ ಶರಣರ ಕುರಿತು ಪುರಾಣ ರಚಿಸಿದ್ದಾರೆ, ಸುಪ್ರಭಾತ ರಚಿಸಿದ್ದಾರೆ. ಒಟ್ಟು ಮಹತ್ವದ ೨೫ ಕೃತಿಗಳಿವೆ. ಅವುಗಳಲ್ಲಿ ಕೆಲವು ಮಾತ್ರ ಪ್ರಕಟವಾಗಿವೆ. ಉಳಿದ ಕೆಲವು ಕೃತಿ ಪ್ರಕಟಮಾಡಲು ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸುವ ಅಗತ್ಯವಿದೆ.


೧. ಭಾವತರಂಗಿಣಿ - ಕವನ ಸಂಕಲನ


೨. ಬಸವ ಸುಪ್ರಭಾತ - ಭಕ್ತಿಗೀತೆ


೩. ಪವಾಡ ಬಸವೇಶ್ವರ ಭಜನಾಮೃತ - ಭಾವಗೀತೆ


೪. ವಚನ ಭ್ರಹ್ಮದೇವ ದಾಸಿಮಯ್ಯ - ಸುಪ್ರಭಾತ


೫. ಚಂದ್ರಶೇಖರ ಶಿವಯೋಗಿಗಳು - ಜನಪದ ಶೈಲಿ


೬. ಕೆಂಭಾವಿ ಭೋಗೇಶ ಭಾವಗೀತೆ - ಭಾವಗೀತೆ


೭. ಬಬಲಾದಿ ಚನ್ನವಿರೇಶ ಸುಪ್ರಭಾತ - ನೂರೆಂಟು ನಾಮಾವಳಿ


೮. ಮಹಾಮಾತೆ ಮಾಣಿಕೇಶ್ವರಿ ಸುಪ್ರಭಾತ - ನೂರೆಂಟು ನಾಮಾವಳಿ


೯. ಕೊಡೇಕಲ್ಲ್ ಬಸವ ಸುಪ್ರಭಾತ


೧೦. ಕಡಕೋಳ ಮಡಿವಾಳೇಶ್ವರ ಸುಪ್ರಭಾತ


೧೧. ಸದ್ಗುರು ರಾಮಲಿಂಗೇಶ್ವರ ನೂರೆಂಟು ನಾಮಾವಳಿ - ಭಕ್ತಿಗೀತೆ


೧೨. ಶ್ರೀ ಪವಾಡ ಬಸವೇಶ್ವರ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೧೩. ಶ್ರೀ ಸದ್ಗುರು ರಾಮಲಿಂಗೇಶ್ವರ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೧೪. ಬಸವ ಲಿಂಗಪ್ಪನವರ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೧೫. ಬಬಲಾದಿ ಚನ್ನವಿರೇಶ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೧೬. ಮಹಾಮಾತೆ ಮಾಣಿಕೇಶ್ವರಿ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೧೭. ಸುವರ್ಣಲಿಂಗ ಶಿವಾಚಾರ್ಯರ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೧೮. ಕೋರಿ ಸಿದ್ದೇಶ್ವರ ಮಹಾಕಾವ್ಯ - ಭಾಮಿನಿ ಷಟ್ಪದಿ ಕಾವ್ಯ


೧೯. ಭೀಮಾಶಂಕರ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೨೦. ದುಧನಿಯ ಶ್ರೀ ಗುರು ಶಾಂತಲಿಂಗರ ಚರಿತ್ರೆ - ಜೀವನ ಚರಿತ್ರೆ


ಅಪ್ರಕಟಿತ ಕೃತಿಗಳು


೧. ದಿವ್ಯದರ್ಶನ - ಜೀವನ ಚರಿತ್ರೆ


೨. ಗಂಗೆಯ ಮಂಗಳದಂಗಳ


೩. ಮಾತೆ ಮಾಣಿಕೇಶ್ವರಿ ಮಹಿಮೆ - ಜನಪದ


೪. ಶರಣ ಚರಿತಾಮೃತ - ಜೀವನ ಚರಿತ್ರೆ




ಭಾಮಿನಿ ಷಟ್ಪದಿಯಲ್ಲಿ ರಚನೆಯಾದ ಹಲವಾರು ಪುರಾಣಗಳಲ್ಲಿ “ಶ್ರೀ ಪವಾಡ ಬಸವೇಶ್ವರ ಪುರಾಣ” ವು ಸಹ ಒಂದಾಗಿದೆ. ಈ ಪುರಾಣವು ೨೧೮ ಪುಟಗಳನ್ನು ಹಾಗೂ ೨೮ ಸಂಧಿಗಳನ್ನು ಒಳಗೊಂಡಿದೆ.


ಶ್ರೀ ಪವಾಡ ಬಸವೇಸ್ವರ ಪುರಾಣ :


ಈ ಪುರಾಣದ ಎರಡು ಮುಖ್ಯ ಸಾಲುಗಳ ಈ ರೀತಿಯಾಗಿದೆ.


‘ವಂದಿಸುವೆ ಬಸವೇಶನಂಘ್ರಿಗೆ


ಯಿಂದುಧರ ಲೀಲೆಗಳ ನೆನೆಯುತ


ತಂದೆ ನೀ ಜಗದೊಡೆಯ ಲಿಲಾಪುರುಷ ಬಸವೇಶ


ಅಂದವಾದೀ ದೈವಕಥೆಯನ್ನು


ಮುಂದುವರಿಸುವ ವೀರಸಂಗನು


ಸಂಧಿಯರಡನು ಮುಗಿಸಲೆಳಸುವ ದೇವನನುತಿಸಿ’


‘ಜಲದಿ ಕಮಲವು ಹುಟ್ಟಿಬೆಳೆದರೆ


ಜಲಕೆ ಸೋಂಕದೆ ತೇಲುವಂದದಿ


ನೆಲದಿ ನಮ್ಮೊಳು ದೇವಪುರುಷರು ಬೆರೆತು ಬೇರಿಹರು


ಮಲಿನಗೊಂಡಿಹ ಮನುಜ ಲೋಕದಿ


ಬೆಲೆಯನರಿಯದೆ ನೈಜಸಿರಿಯನು


ಕುಲವನೆಣಿಸುತ ಕೀಳುಭಾವದ ಮನುಜರಿಲ್ಲಿಹರು’


ಶ್ರೀ ಬಸಲಿಂಗಪ್ಪನವರ ಪುರಾಣಂ :


ಈ ಪುರಾಣವು ಸಹ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿದೆ. ಈ ಪುರಾಣವು ೩೩೬ ಪುಟಗಳನ್ನು ಹಾಗೂ ೨೫ ಸಂಧಿಗಳನ್ನು ಒಳಗೊಂಡಿದೆ. ಈ ಪುರಾಣವು ಪ್ರಸ್ತುತ ಊರಾದ ಶರಣ ಸೋಮನಾಳದ ಶ್ರೀ ಬಸಲಿಂಗಪ್ಪನವರ ಕುರಿತಾದ ವಿವರಣೆಯಿದೆ. ಪ್ರಸ್ತುತ ಪುರಾಣದಲ್ಲಿ ೮ ಸಂಧಿಗಳನ್ನು ಮಾತ್ರ ರಚಿಸಿದ್ದಾರೆ.


ಈ ಪುರಾಣದ ಎರಡು ಮುಖ್ಯ ಸಾಲುಗಳು ಈ ಕೆಳಗಿನಂತಿವೆ.


‘ಎಷ್ಟು ದಿನ ಬದುಕಿದರು ಕೊನೆಯಲ್ಲಿ


ನಷ್ಟವಾಗುವ ದೇಹವಿದು ಮನ


ದಿಷ್ಟದಂದದಿ ಗಂಗೆಯಲಿ ಕೊನೆಯಾಗಲೆಂದಿಹರು


ಕಷ್ಟವಾಯಿತು ಕೇಳಿದಿವರಗೆ


ದೃಷ್ಟಿಬೀರುತಲೆಲ್ಲ ರಾಜನ


ಸೃಷ್ಟಿಗೊಂಡಿಹ ಶರಣನಿಶ್ಚಯ ತಿಳಿಯದಾಗಿಹರು’


ಶ್ರೀ ಪವಾಡ ಬಸವೇಶ್ವರ-“ಭಜನಾಮೃತ” :


ವೀರಸಂಗಪ್ಪ ಹಗರಟಗಿ ಕವಿಗಳು ಬಸರಕೊಡದ ಬಸವೇಶ್ವರರನ್ನು ಕುರಿತು ‘ಭಜನಾಮೃತ’ ಕವನ ಸಂಕಲನವನ್ನು ರಚಿಸಿದ್ದಾರೆ. ಈ ಸಂಕಲನವು ೪೪ ಪುಟಗಳನ್ನು ಒಳಗೊಂಡಿದೆ.


‘ಪುರ ಬಸರಕೋಡಕ್ಕೆ ಸಾಗೋಣ’


ರಾಗ-ಯಮನ   : ತಾಳ-ಕೇರವ


‘ಸ್ವಾಮಿ ಪವಾಡನ


ನಾಮದ ನೆನೆಯುತ


ಪ್ರೇಮದಿ ಜಗದೊಳು ಬಾಳೋಣ


ಕಾಮಿತ ಫಲಗಳ


ನೇಮದಿ ನೀಡುವ


ಸೀಮಾತೀತನ ಸ್ಮರಿಸೋಣ’


ವ್ಯಕ್ತಿತ್ವ  :


ವೀರಸಂಗಪ್ಪ ಹಗರಟಗಿಯವರ ಜೀವನ, ಸಾಹಸ, ಶೌರ್ಯ, ಕಾರ್ಯ, ಸಾಧನೆ ಮಹತ್ತಾದುದು. ಹಗರಟಗಿಯವರು ಕೇವಲ ಒಬ್ಬ ಕವಿಯಾಗಿರದೆ ಒಬ್ಬ ಉತ್ತಮ ಅಸಾಧಾರಣ, ಪ್ರಭಾವಿಶಾಲಿ ವ್ಯಕ್ತಿಯಾಗಿದ್ದರು.


ವೀರಸಂಗಪ್ಪ ಹಗರಟಯವರು ಗಿಡ್ಡನೆಯ ದೇಹ, ಬಾಗಿದ ಬೆನ್ನು ಹೊಂದಿದ್ದರು. ಎಲ್ಲರೊಂದಿಗೆ ಬೆರತು ಸಂತೋಷದಿಂದ ಆಡಿ-ನಲಿದಾಡುತ್ತಿದ್ದರು. ಹಗರಟಗಿಯವರು ಯಾವಾಗಲು ಹಣ್ಣು-ಹಂಫಲಗಳನ್ನೆ ಹೆಚ್ಚಾಗಿ ಸೇವಿಸುತ್ತಿದ್ದರು.
ಇಂಥ  ಮಹನೀಯರು ನಮ್ಮೂರಲ್ಲಿದ್ದರೆಂಬುದೇ ನಮ್ಮ ಭಾಗ್ಯ !

ಬಿ.ಎನ್.ಬಾವೂರ  ಬಿ.ಎ. ೧

No comments:

Post a Comment