Thursday, August 5, 2010

ಚಬನೂರಿನ ಅಮೋಘ ಸಿದ್ಧ - ಹಿನ್ನೆಲೆ ಮತ್ತು ಆಚರಣೆ





ವಿಜಾಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಚಬನೂರಿನಲ್ಲಿ ನೆಲೆಸಿರುವ ಆರಾಧ್ಯದೈವ ಅಮೋಘಸಿದ್ಧೇಶ್ವರ ಪರಮೇಶ್ವರನ ಮಗ, ಪಾರ್ವತಿಯ ಬೆವರಿನಿಂದ ಮಣ್ಣಲ್ಲಿ ಜನಿಸಿದ ಮಣ್ಣಿನ ಮಗ.


ಪಾರ್ವತಿ ಜಳಕ ಮಾಡುವಾಗ ಬಾಗಿಲ ಕಾಯುತ್ತಿದ್ದ ಬಾಲಕ ಪರಮೇಶ್ವರನಿಗೆ ಒಳಗೆ ಬಿಡಲಿಲ್ಲ . ಸಿಟ್ಟಿಗೆದ್ದ ಶಿವ ರುಂಡ ಕತ್ತರಿಸಿದ. ರುಂಡ ಹಾರಿ ಮರದ ಕಂಟಿಯ ಕೆಳಗೆ ಬೀಳುತ್ತದೆ. ಆ ಕಂಟಿಗೆ ಒಡೆಯರ ಕಂಟಿ ಎಂದು ಪ್ರತೀತಿ ಇದೆ. ಪಾರ್ವತಿಯ ಬೇಡಿಕೆ ಯಂತೆ ಆ ರುಂಡಕ್ಕೆ ಜೀವ ತುಂಬುತ್ತಾನೆ. ಇಬ್ಬರೂ ಕೂಡಿ ಸಿದ್ಧ ಎಂದು ನಾಮಕರಣ ಮಾಡುತ್ತಾರೆ.


ಆ ಸಿದ್ಧನೆ ಇಲ್ಲಿ ನೆಲೆಸಿ ‘ಆಮೊಗ ಸಿದ್ಧ’ ನಾಗುತ್ತಾನೆ; ಆನೆಮೊಗ ಸಿದ್ಧ ‘ಅಮೋಘ ಸಿದ್ಧ’ನಾಗಿ ರಲೂಬಹುದು.


ಚಬನೂರಿನಲ್ಲಿ ಈ ದೇವರನ್ನು ಪ್ರತಿಷ್ಠಾಪಿಸಿ ಊರಿನ ಗೌಡರು ಅದನ್ನು ಪೂಜಿಸುತ್ತಾ ಬಂದರಂತೆ. ಆದರೆ ಯಾವುದೋ ಒಂದು ಸಂದರ್ಭದಲ್ಲಿ ಅಪಶಕುನಗಳಾಗಿ ಗೌಡರು ನಡೆಸುವ ಪೂಜೆ ನಿಲ್ಲುತ್ತದೆ. ಹಿಜೇರಿ ನಿಂಗ ಎಂಬವ್ಯಕ್ತಿ (ಹಿರಕಾರ ) ಈ ದೇವರನ್ನು ಒಡೆಯರು ಪೂಜಿಸಬೇಕು ಎಂದಾಗ ಮುಧೋಳ ತಾಲೂಕಿನ ಬಿದರಿಯಿಂದ ಒಡೆಯರನ್ನು ಕರೆತರುತ್ತಾರೆ.ಅಂದಿನಿಂದ‘ಹೇಳಿಕೆ ‘ಪ್ರಾರಂಭವಾಗಿದೆ. ಮೊದಲ ಸಲ ಡವಳರ ಮುತ್ಯಾನಿಗೆ ಮುಖವಾಡ ಕಟ್ಟಿ ಹೇಳಿಕೆ ಹೇಳಿಸಿದರಂತೆ. ಅಂದಿನಿಂದಲೇ ‘ಕಟಾಂಬಲಿ’ ಪದ್ಧತಿ ರೂಢಿಗೆ ಬಂದಿದೆ. ಮೊದಲು ಈ ಕಟಾಂಬಲಿ ನುಚ್ಚನ್ನು ಕೇವಲ ೭ ಗಡಿಗೆ ಮಾಡುತ್ತಿದ್ದರು. ಈಗ ೨೫-೩೦ ಕ್ಕೇರಿದೆ.


ಹೀಗೆ ಪೂಜೆಗೆಂದು ಬಂದವನೇ ಮಲಿಕಾರಪ್ಪ. ಇವನ ನಂತರ ಪೂಜೆಯನ್ನು ಇವನ ಮಕ್ಕಳು ಮುಂದುವರೆಸುತ್ತಾರೆ. ಮಲ್ಲಪ್ಪ , ಸಿದ್ರಾಮಪ್ಪ ಇವರ ತಲೆಮಾರಿನ ಅನಂತರ ಸಿದ್ದಪ್ಪ ಮುತ್ಯ ಶಿವುಮುತ್ಯಾ ಮತ್ತು ಪ್ರಕಾಶ ಮುತ್ಯಾ ಮುಂದುವರೆಸುತ್ತಾರೆ.


ಹೂ ತರುವ ಆಚರಣೆ :


ವಿಜಾಪುರಕ್ಕೆ ಹೋಗಿ ಅಲ್ಲಿಂದ ಹೂ ತರಬೇಕು. ಹೋಗುವಾಗ ಮಡಿ ಹುಡಿಯಿಂದ ಹೋಗಬೇಕು. ದಾರಿಯಲ್ಲಿ ಸಿಕ್ಕ ವಸ್ತುಗಳು ಹೇಳಿಕೆಯ ಮುನ್ಸೂಚನೆ ನೀಡುತ್ತವೆಯಂತೆ. ಸಾಮಾನ್ಯವಾಗಿ ಶೇಂಗಾ, ಬುತ್ತಿ,ಈರುಳ್ಳಿ, ಹಣ ಸಿಕ್ಕಿರುತ್ತವೆ. ಮೊದಲಸಾರೆ ವಿಜಾಪುರದಿಂದ ಹೂ ತಂದವರೆಂದರೆ ಕೊಂಡಗುಳಿ ನಿಂಗಪ್ಪ. ಅನಂತರ ಬಸಪ್ಪ ಮುಂದುವರಿಸಿದ್ದನು. ಹೂವಿಗೆ ಹೋಗುವಾಗ ಜಾತ್ರೆನಡೆಯುವಾಗ, ಹೇಳಿಕೆ ಹೇಳುವಾಗ ಡೊಳ್ಳಿನ ಮಜಲು ನಡೆಯಲೇಬೇಕು. ಹೂವಿಗೆ ಹೋಗುವಾಗಿನ ಚಾಜನ್ನು ಸ್ವಂತಕ್ಕೆ ಬಳಸಿಕೊಂಡ ಬಸಪ್ಪನಿಗೆ ಸ್‌ವು ಸಂಭ


ವಿಸುತ್ತದೆ. ಅದೇ ವರ್ಷ ಹೇಳಿಕೆ ಈ ರೀತಿಯಾಗುತ್ತದೆ. ‘ಕುರುಬ ಇಸಾಬ ಮುರದನಲೇ! ’ ಈಗ ಬಾಳಪ್ಪ, ಮಲ್ಲಪ್ಪ, ತಿಪ್ಪಣ್ಣ ಮುಂದುವರೆಸಿಕೊಂಡು ನಡೆದಿದ್ದಾರೆ.










ಕಟಾಂಬಲಿ :


ಈ ಜಾತ್ರೆಯಲ್ಲಿ ಕಟಾಂಬಲಿ ಮಾಡುವ ವಿಧಾನ ವಿಶಿಷ್ಟವಾದುದಾಗಿದೆ. ಸುಂಕಸಹಿತವಾದ ಜೋಳವನ್ನು ಕುಟ್ಟಿ ಜೋಳದ ಅಕ್ಕಿ ತಯಾರಿಸುತ್ತಾರೆ. ಹೊಸ ಗಡಿಗೆಗಳಲ್ಲಿ ಮಾತ್ರ ಈ ಕಟಾಂಬಲಿ ತಯಾರಿಸುತ್ತಾರೆ. ಕಾಕುಳ್ಳು ತಂದು ಅದರ ಬೆಂಕಿಯಲ್ಲಿ ನಿಧಾನವಾಗಿ ಬೇಯಿಸು ತ್ತಾರೆ. ಇಲ್ಲವಾದರೆ ಗಡಿಗೆ ಬಿಚ್ಚಿ ಕಟಾಂಬಲಿ ಚೆಲ್ಲಿಹೋಗುತ್ತದೆ.


ಹೇಳಿಕೆಯಾಗುವದಕ್ಕಿಂತ ಮುಂಚೆ ಈ ಕಟಾಂಬಲಿಯನ್ನು ಎಲ್ಲರಿಗೂ ಪ್ರಸಾದರೂಪದಲ್ಲಿ ಹಂಚುತ್ತಾರೆ. ಅಂಬಲಿಗೆ ಹದವಾದ ರೀಯಲ್ಲಿ ಕುಸುಬೆ ಎಣ್ಣೆ ಸೇರಿಸಿ ಉಂಡಿಯಂತೆ ಮಾಡಿ ಕೈಯಲ್ಲಿಯೇ ಪ್ರಸಾದವನ್ನು ನೀಡುತ್ತಾರೆ. ಪ್ರಸಾದದ ಜೊತೆಗೆ ಉಳ್ಳಾಗಡ್ಡಿ (ಈರುಳ್ಳಿ)


ಇರಲೇಬೇಕು.


ಹೇಳಿಕೆ :


ಈಗ ಹೇಳಿಕೆ ಹೇಳುತ್ತಿರುವವರು ಮುದುಕಪ್ಪ ಮುತ್ಯಾ. ಹೇಳಿಕೆ ನಡೆಯುವ ಸಮಯ ಬೆಳಗಿನ ೪.೦೦ ಗಂಟೆಗೆ. ಡೊಳ್ಳಿನ ಮಜಲಿನ ಆರ್ಭಟದಲ್ಲಿ ಅವರೊಂದಿಗೆ ಕುಣಿಯುತ್ತ ಕುಣಿಯುತ್ತ ಬೆತ್ತದಿಂದ ಏಟು ಹಾಕುತ್ತ ಅವರ ಡೊಳ್ಳಿನ ಮೇಲೆ ಹತ್ತಿ ಕೂಗಿ ಹೇಳಿಕೆಯನ್ನು ಹೇಳಲಾಗುತ್ತದೆ. ಹೇಳಿಕೆಯ ವೇಳೆ ಎಂತಹ ಗದ್ದಲವಿದ್ದರೂ ತಕ್ಷಣ ನಿಶ್ಶಬ್ದವಾಗುತ್ತಾರೆ. ಹೇಳಿಕೆ ಹೇಳುವಾಗ ಇಬ್ಬರು ಮುಖವಾಡ ಧರಿಸಿರುತ್ತಾರೆ. ಹಿರಿಮುಖ ಧರಿಸಿದವರು ಹೇಳಿಕೆ ನೀಡುತ್ತಾರೆ.


ಈ ಹೇಳಿಕೆಯನ್ನು ಮೈಲಾರ ದೇವರ ಕಾರ್ಣಿಕದಂತೆ ನಂಬಲಾಗುತ್ತದೆ. ಇಲ್ಲಿ ಮೂರು ವಿಷಯಗಳಿಗೆ ಸಂಬಂಧಿಸಿದ ಮುನ್ಸೂಚನೆ ಇರುತ್ತದೆ.


ರಾಜಕೀಯ,ಮುಂಗಾರು ಮತ್ತು ಹಿಂಗಾರು.ಒಂದೇ ನಿಮಿಷದಲ್ಲಿ ಹೇಳಿಕೆ ಮುಗಿದು ಬಿಡುತ್ತದೆ. ಇಲ್ಲಿ ೧೯೮೪ ರಿಂದ ನೀಡಿದ ಹೇಳಿಕೆಗಳನ್ನು ಸಂಗ್ರಹಿಸಿಲಾಗಿದೆ.


೨೮-೦೫-೧೯೮೪ ಎಲೆ ಎಚ್ಚರ ಬಲು ಎಚ್ಚರ


ಮುಂಗಾರಿ ಮರಿಯಲೆ


ಹಿಂಗಾರಿ ಶರಿ ಚೆಲ್ಲಾಡಿನಲೆ


೧೭-೦೫-೧೯೮೫ ಹುಶಿ ನುಡಿದವನಿ ಖುಷಿಯಿಂದ ಕೋಂಡಾಡಿನಲೆ ಎಚ್ಚರ


ಮುಂಗಾರಿ ಬಡಿ


ಹಿಂಗಾರಿ ಚೆಲ್ಲಾಡಿನಲೆ


೦೫-೦೬-೧೮೮೬ ಮನಸಿನಾಗ ಮಾಡಿದ್ದು ಕನಸಿನಾಗ ಕಂಡಿನಲೆ


ಮುಂಗಾರಿ ಮಡಿಯಲಿ


ಹಿಂಗಾರಿ ಉಡಿಯಾರ ಸೋಶಿ ಬಿತ್ತಿನಲೆ


೨೨-೦೫ ೧೯೮೮ ನನ್ನ ಮರತವಗ ಮುರದ ಮುಟಗಿ ಮಾಡಿನಲೆ


ಮುಂಗಾರಿ ಬಂಗಾರ


ಹಿಂಗಾರಿ ಹುದುಗಿನಾಗ


೦೧-೦೬-೧೯೮೯ ಕುರುಬನ ಕುರುಹು ಹುಡುಕಬ್ಯಾಡಲೆ


ಮುಂಗಾರಿ ಕತ್ತಲಾಗಿ ಹೋತಲೆ


ಹಿಂಗಾರಿ ನಕ್ಷತ್ರ ಹೊಳದಂಗ ಹೊಳಿತೈತಲೆ


೨೨-೦೫ ೧೯೯೦ ಆಡು ಕಂದನ್ನ ಕಡ್ಯಾಕ ಮಾಡಿನಲೆ ನೀವು ಬಲು ಎಚ್ಚರಲೆ


ಮುಂಗಾರಿ ಮುತ್ತಾಗಿ ಹೋಯಿತದೆ.


ತುತ್ತ ಸಂದಿ ಹುಡುಕ್ಯಾರಲೆ


೧೦-೦೬-೧೯೯೧ ಮುಂದಿನವರು ಬಹು ಎಚ್ಚರಲೆ


ಮುಂಗಾರಿ ಮುತ್ತು


ಹಿಂಗಾರಿ ಖುಷಿ ಬಂದಂಗ ಬೆಳದಿರಲೆ






೨೬-೦೫-೧೯೯೩ ಹಿಂದೆ ಮುಂದೆ ಮಾತಾಡಿದವಗ ಎಚ್ಚರಲೆ


ಮುಂಗಾರಿ ಮುಂದಾತು


ಹಿಂಗಾರಿ ಹಿಂದಿನಿಂದ ಬೆಳದಿರಲೆ


೦೭-೦೬-೧೯೯೪ ಹಾಲಿನಂತಹ ಮನುಷ್ಯನಿಗೆ ಬೆಳ್ಳಿ ಬಂಗಾರ ಕೊಟ್ಟಿನಲೆ


ಮುಂಗಾರಿ ಸಾಕಷ್ಟು ಕೊಟ್ಟನಲೆ


ಹಿಂಗಾರಿ ತೊಟ್ಟಿಲನಾಗ ಇಟ್ಟು ತೂಗಿನಲೆ


೩೧-೦೫೧೯೯೫ ನನ್ನ ಮ್ಯಾಲ ವಿಶ್ವಾಸ ಇಟ್ಟು ನಡಿರಲೆ


ಮುಂಗಾರಿ ನಿಮ್ಮ ಇಷ್ಟದಂತೆ


ಹಿಂಗಾರಿ ಬೇಕಾದಷ್ಟು ಕೊಟ್ಟಿನಲೆ


೧೯-=೦೫-೧೯೯೬ ಹುಸಿ ನುಡಿದವನಿಗೆ ಖುಷಿಯಿಂದ ಕೊಂಡಾಡನಲೆ


ಮುಂಗಾರಿ ಚೀಲತುಂಬ ಚೆಲ್ಲಾಡನಲೆ


ಹಿಂಗಾರಿ ತೊಂಬತ್ತು ಪೈಸೆ ಕೊಟ್ಟಿನಲೆ


೦೩-೦೬-೧೯೯೭ ನನ್ನ ಮ್ಯಾಲ ನಂಬಿಗಿ ಇಟ್ಟವಗ ಬಂಗಾರ ಕೊಟ್ಟಿನಲೆ


ಮುಂಗಾರಿ ಎಪ್ಪತ್ತೈದು ಪೈಸೆ


ಹಿಂಗಾರಿ ಬಂಗಾರ ಕೊಟ್ಟಿನಲೆ


೨೩-೦೫-೧೯೯೮ ನನಗ ನಡಕೊಂಡವನಿಗೆಬೇಕಾದ್ದ ಕೊಟ್ಟಿನಲೆ


ಮುಂಗಾರಿ ಉಡಿತುಂಬ ಚೆಲ್ಲಾಡಿನಲೆ


ಹಿಂಗಾರಿ ಬೇಕಾದಷ್ಟ ಬಿತ್ತಿ ಬೇಕಾದ ಷ್ಟ ಬೆಳಕೊಳ್ಳರಲೆ






೧೩-೦೫-೧೯೯೯ ಕತ್ತಿಯಂಗ ಮಾಡಿದವರ ಲತ್ತಿ ಪೆಟ್ಟ ತಿಂತಿರಲೆ


ಮುಂಗಾರಿ ನಿಟ್ಟಿನಮ್ಯಾಲೆ ನಿಟ್ಟು ಕಟ್ಟಿನಲೆ


ಹಿಂಗಾರಿ ಸಾಕಷ್ಟ ಕೊಟ್ಟಿನಲೆ


೩೦-೦೫-೨೦೦೦ ನನ್ನ ನಂಬಿದವರಿಗೆ ಬಂಗಾರ ಹಾಸಿನಲೆ


ಮುಂಗಾರಿ ಅರ್ಧಲೆ


ಹಿಂಗಾರಿ ತೊಂಬತ್ತ ಪೈಸಾ ಕೊಟ್ಟಿನಲೆ


೨೦-೦೫-೨೦೦೧ ಕತ್ತಿ ಹಂಗ ಮಾಡಿದವರು ಲತ್ತಿ ಪೆಟ್ಟ ತಿಂತಿರಲೆ


ಮುಂಗಾರಿ ಮೂವತ್ತೈದು ಪೈಸಾ


ಹಿಂಗಾರಿ ಸಾಕಷ್ಟು ಕೊಟ್ಟಿನಲೆ


೧೦-೦೬-೨೦೦೨ ನನ್ನ ನಂಬಿದವನ ಬೆನ್ನ ಹಿಂದ ಅದಿನಲೆ


ಮುಂಗಾರಿ ಅರವತ್ತು ಪೈಸೆ


ಹಿಂಗಾರಿ ಚೀಲತುಂಬ ಚೆಲ್ಲಾಡಿನಲೆ


೩೧-೦೫-೨೦೦೩ ನೆರೆ ಹಾಲಿನಂಗ ಇದ್ದವಗ ಬೆಳ್ಳಿ ಬಂಗಾರಲೆ


ಮುಂಗಾರಿ ಹಿಂದಿನಿಂದ ಬೆಳದಿರಲೆ


ಹಿಂಗಾರಿ ಚೀಲ ತುಂಬಿ ಓಣಿ ಓಣಿ ಚೆಲ್ಲಾಡಿರಲೆ


೧೯-೦೫-೨೦೦೪ ಕತ್ತಿ ಹಂಗ ಮಾಡಿದವನಿಗೆ ಲತ್ತಿ ಪೆಟ್ಟ ತಿಂತಿರಲೆ


ಮನಸ ಮಾಡಿ ಮಾಡಿ ಬೇಕಾದ ಬೀಜ ಬಿತ್ತಿ ಬೆಳಿರಲೆ


ಹಿಂಗಾರಿ ಸಾಕಷ್ಟು ಕೊಟ್ಟಿನಲೆ






೦೪-೦೬-೨೦೦೫ ನನ್ನ ಮರಾವಗ ಇಂಗಳ ಗೂಟಲೆ


ಮುಂಗಾರಿ ಹಿಂದಲಿಂದ ಬೆಳದಿರಲೆ


ಹಿಂಗಾರಿ ಬೇಕಾದಷ್ಟ ಕೊಟ್ಟಿನಲೆ


೨೭-೦೫-೨೦೦೬ ನೊರೆ ಹಾಲಿನಂತ ಮನಸ ಇದ್ದವಗ ಬೆಳ್ಳಿ ತೊಟ್ಟಿಲದಾಗ ತೂಗಿನಲೆ


ಮುಂಗಾರಿ ಮುತ್ತಾಗಿ ಹೋಯಿತಲೆ


ಹಿಂಗಾರಿ ಎಂಬತ್ತೊಂಬತ್ತು ಪೈಸಾ ಕೊಟ್ಟಿನಲೆ


೧೭-೦೫-೨೦೦೭ ನಾ ಅಂದವಗ ನರಕಕ್ಕ ಕಳಿಸಿನಲೆ


ಮುಂಗಾರಿ ಅರ್ಧ ಕೊಟ್ಟಿನಲೆ


ಹಿಂಗಾರಿ ಹರಿ ಹರಿ ಚೆಲ್ಲಾಡನಲೆ


೧೬-೦೫-೨೦೦೯ ನನ್ನ ನಂಬಿ ನಡದವಗ ಬೆನ್ನ ಹಿಂದ ಅದಿನಲೆ


ಮುಂಗಾರಿ ಉಡಿತುಂಬ ಚೆಲ್ಲಾಡಿನಲೆ


ಹಿಂಗಾರಿ ಜೋಳ ಓಣಿ ಓಣಿ ಚೆಲ್ಲಾಡಿನಲೆ


*****


ಮಲ್ಲಿಕಾರ್ಜುನ ಹಿಪ್ಪರಗಿ ಬಿ.ಎ.೧

No comments:

Post a Comment