Wednesday, July 28, 2010

ತಾಳೀಕೋಟಿ ಇತಿಹಾಸ ಪರಂಪರೆ

ತಾಳಿಕೋಟಿ ಪಟ್ಟಣವು ವಿಜಯನಗರ ಸಾಮ್ರಾಜ್ಯ ಪತನದಿಂದಾಗಿನಿಂದಲೂ ಐತಿಹಾಸಿಕ ಪ್ರಸಿದ್ಧಿ ಪಡೆದು ತನ್ನದೆ ಆದ ವಿಶಿಷ್ಟ  ಸಾಧನೆ ಅಲ್ಲದೆ ಅನೇಕ ಕುರುಹುಗಳನ್ನು ಹೊಂದಿದೆ.



ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಪ್ರಮುಖ ಪಟ್ಟಣ ತಾಳಿಕೋಟಿ  ಇದಾಗಿದ್ದು ಈಗ ಪ್ರಮುಖ ವ್ಯಾಪಾರಿ ಸ್ಥಳವಾಗಿದುದ್ದಲ್ಲದೆ ವಿವಿಧ ಕ್ಷೇತ್ರಗಳಲ್ಲಿ ತನ್ನದೆ ಆದ ಘನತೆ ಗೌರವದೊಂದಿಗೆ ಮುನ್ನಡೆದಿದೆ.


ತಾಳಿಕೋಟಿ ತಾಲೂಕ ಕೇಂದ್ರಕ್ಕೆ ಅರ್ಹತೆ ಪಡೆದ ಈ ತಾಳಿಕೋಟಿ ಪಟ್ಟಣದ ತಾಲೂಕಾ ವ್ಯಾಪ್ತಿಯಲ್ಲಿ ಮುಂಗಾರು ಕ್ಷೇತ್ರವಾಗಿ ೮೨.೮೬೮ ಹೆಕ್ಟರ ಪ್ರದೇಶ ಹಿಂಗಾರು ಪ್ರದೇಶ ಹಾಗೂ ೯೨೩೮ ಹೆಕ್ಟರ ಪ್ರದೇಶ, ಸಾಗುವಳಿ ಇಲ್ಲದ ಪ್ರದೇಶವಾಗಿದೆ. ಇದರಲ್ಲಿ ೧೦೧೬ ಹೆಕ್ಟರ ಗೋಮಾಳ ಪ್ರದೇಶವಿದೆ.
 ದ್ರೋಣಾ ನದಿ ದಡದಲ್ಲಿರುವ ಸಿದ್ಧಲಿಂಗೇಶ್ವರ ದೇವಾಲಯ


ತಾಲೂಕಿನ ರೇಖಾಂಶ ೭೫.೮೦ ಅಕ್ಷಾಂಶ ಇದ್ದು, ೧೫೨೦ ಮಧ್ಯದಲ್ಲಿ ವಿಸ್ತರಿಸಿದೆ. ಸಮುದ್ರ ಮಟ್ಟದಿಂದ ೧೬೫೦ ರಿಂದ ೧೮೦೦ ಅಡಿ ಎತ್ತರದಲಿದ್ದು ಈ ಪ್ರದೇಶದಲ್ಲಿ ಸಾಮಾನ್ಯ ಮಳೆ ೫೭೬.೫ ಇರುತ್ತದೆ.


ತಾಳಿಕೋಟಿಯ ಇತಿಹಾಸ


ಐತಿಹಾಸಿಕ ಹಿನ್ನಲೆ ಹೊಂದಿದ ತಾಳಿಕೋಟಿ ಪಟ್ಟಣ ಇದರ ಇತಿಹಾಸವು ಅಷ್ಟೆ ಆಸಕ್ತಿದಾಯಕವಾಗಿರುತ್ತದೆ. ನಂದ,ಮೌರ್ಯ, ಶಾತವಾಹನರ ಆಡಳಿತಕ್ಕೆ ಈ ಪ್ರದೇಶ ಒಳಪಟ್ಟಿತ್ತಾದರೂ ಯೂವುದೇ ಕುರುಹುಗಳು ಈ ಭಾಗದಲ್ಲಿ ಉಳಿದಿಲ್ಲ.
ಬಾದಾಮಿ ಚಾಲುಕ್ಯರು ರಾಷ್ಟ್ರಕೂಟರು ಹಾಗೂ ಕಲ್ಯಾಣ ಚಾಲುಕ್ಯರು ಇಲ್ಲಿ ಆಳಿ ಹೋದವರಾಗಿದ್ದು ಈ ತಾಳಿಕೋಟಿ ಪಟ್ಟಣ ಬ.ಬಾಗೇವಾಡಿಯ ಮಧ್ಯದಲ್ಲಿ ಸ್ಥಳವಾಗಿದ್ದರಿಂದ ಬಸವಾದಿ ಶರಣರ ಪ್ರಭಾವ ಈ ಭಾಗದ ಜನ ಜೀವನದ ಮೇಲೆ ಅಚ್ಚೊತ್ತಿದಂತಾಗಿದೆ.
ಸಿದ್ಧಲಿಂಗೇಶ್ವರ ದೇವಾಲಯದ ಬಾಗಿಲದಲ್ಲಿರುವ ಶಿಲ್ಪ ವಿನ್ಯಾಸ

ರಾಮಲಿಂಗೇಶ್ವರ ದೇವಾಲಯದ ಕಂಬದಲ್ಲಿರುವ ಶಾಸನ





೧೬೮೬ರಲ್ಲಿ ಈ ರಾಜ್ಯ ಮೊಗಲರ ಕೈಕೆಳಗಿನ ನಿಜಾಮರ ರಾಜ್ಯದ ಒಂದು ಭಾಗವಾಯಿತು ನಂತರ ೧೭೬೦ ರಲ್ಲಿ ನಿಜಾಮನು ವಿಜಾಪುರ ರಾಜ್ಯವನ್ನು ಬಾಲಾಜಿ ಪೇಶ್ವೆಗೆ ಬಿಟ್ಟುಕೊಟ್ಟನು. ೧೮೧೮ ರಲ್ಲಿ ಪೇಶ್ವೇಯವರ ಪತನವಾಯಿತು. ನಂತರ ವಿಜಾಪೂರ ಇದು ಬ್ರಿಟಿಷರ ಆಧೀನಕ್ಕೆ ಒಳಪಟ್ಟಿತು. ೧೮೨೦ ರಲ್ಲಿ ತಾಳಿಕೋಟಿ ಪಟ್ಟಣ್ಣಕ್ಕೆ ಸಂಬಂಧಿಸಿದಂತೆ ಮುದ್ದೇಬಿಹಾಳ ತಾಲೂಕ ಹಾಗೂ ಇಂಡಿ ಈ ತಾಲೂಕುಗಳ ೩೪೫ ಗ್ರಾಮಗಳನ್ನು ಬಾಗಲಕೋಟೆ ಸಬ್ ಕಲೆಕ್ಟೋರೆಟಗೆ ಒಳಪಡಿಸಿ ಧಾರವಾಡ ಜಿಲ್ಲೆಗೆ ಒಳಪಡಿಸಲಾಯಿತು.


೧೮೨೫ ರಲ್ಲಿ ಈ ಪ್ರದೇಶವನ್ನು ಪುಣೆ ಜಿಲ್ಲೆಗೆ ನಂತರ ಸೋಲ್ಲಾಪುರ ಜಿಲ್ಲೆಗೆ ವರ್ಗಾಯಿಸಲಾಯಿತು. ೧೮೬೪ ರಲ್ಲಿ ಕಲಾದಿಗಿ ಜಿಲ್ಲೆಗೆ ಸೇರಿಸಲಾಯಿತು.
ಮಹಾದೇವ ದೇವಸ್ಥಾನದಲ್ಲಿರುವ ಭೈರವನ ಶಿಲ್ಪ






ನಂತರ ೧೮೮೪ ರಲ್ಲಿ ನಮ್ಮ ತಾಳಿಕೋಟೆ ಪಟ್ಟಣ್ಣಕ್ಕೆ ಸಂಬಂಧಿಸಿದ ಮುದ್ದೇಬಿಹಾಳ ಪಟ್ಟಣ ವಿಜಾಪೂರ ಜಿಲ್ಲೆಯ ಕೇಂದ್ರ ಸ್ಥಳವಾಗಿ ತಾಲೂಕಾಗಿ ಮಾರ್ಪಟ್ಟಿತು.


ಇಂತಹ ತಾಲೂಕಿನ ಹೃದಯ ಭಾಗದಂತಿರುವ ತಾಳಿಕೋಟೆ ಪಟ್ಟಣ ರಕ್ಕಸಗಿ ತಂಗಡಗಿ ಕದನದ ಇತಿಹಾಸದಿಂದ ಅಜರಾಮರವಾಗಿ ಉಳಿದಿದೆ. ಇತಿಹಾಸವನ್ನು ಅವಲೋಕಿಸಿದಾಗ ಹಿಂದಿನ ರಾಜಮಹಾರಾಜರ ಕೋಟೆ ಕೊತ್ತಲಗಳು ತಾಳಿಕೋಟೆ ಪಟ್ಟಣ ಒಳಗೊಂಡು ಮುದ್ದೇಬಿಹಾಳ ತಾಲೂಕಿನ ಇನ್ನಿತರ ಗ್ರಾಮಗಳಲ್ಲಿ ಎದ್ದು ಕಾಣುತ್ತಿದೆ.


ತಾಳಿಕೋಟೆಯ ಪ್ರಮುಖ ಸ್ಥಳಗಳ ಪರಿಚಯ :


ಐತಿಹಾಸಿಕ ಹಿನ್ನಲೆ ಪಡೆದ ಈ ತಾಳಿಕೋಟೆ ಪಟ್ಟಣದಲ್ಲಿ ರಾಜವಾಡೆ, ಸಿದ್ಧಲಿಂಗೇಶ್ವರ ದೇವಸ್ಥಾನ, ಶ್ರೀರಾಮಮಂದಿರ, ಶ್ರೀಮಹಾದೇವ ಮಂದಿರ, ಶ್ರೀಖಾಸ್ಗತೇಶ್ವರ ಮಠ, ಶ್ರೀವಿಠ್ಠಲಮಂದಿರ, ಭೀಮನಭಾವಿ, ಪಂಚೇಸಾದರ್ಗಾ, ಶ್ರೀಗ್ರಾಮದೇವತೆ ದೇವಸ್ಥಾನ, ಗ್ರಾಮದೇವತೆಯ ಬೀಸುವಕಲ್ಲು, ಇನ್ನಿತರ ಇಂತಹ ಪ್ರಮುಖ ಐತಿಹಾಸಿಕ ದೇವಾಲಯಗಳನ್ನು ಹೊಂದಿದ್ದಲ್ಲದೆ ಇಡೀ ತಾಳಿಕೋಟಿ ಪಟ್ಟಣ ಸುತ್ತ ಸುತ್ತುವರೆದ ಕೋಟೆ ಗೋಡೆ ನೋಡುವರಿಗೆ ಇನ್ನೂ ತಾಳಿಕೋಟೆ ಪಟ್ಟಣವನ್ನು ರಕ್ಷಣೆ ಮಾಡುತ್ತದೆ ಎಂದೆನಿಸದೆ ಇರಲಾರದು.


ಇಂತಹ ತಪೋಭೂಮಿಯಾದ ತಾಳಿಕೋಟಿ ಪಟ್ಟಣದಲ್ಲಿಯ ಶ್ರೀ ಖಾಸ್ಗತೇಶ್ವರ ಮಠವು ಜನತೆಗೆ ಆಧ್ಯಾತ್ಮಕ ಜ್ಞಾನವನ್ನು ನೀಡುತ್ತಾ ಸಾಗಿದೆ.


ಅದರಂತೆ ತಾಳಿಕೋಟಿ ಸಮೀಪದ ಮೂಕಿಹಾಳದರ್ಗಾದ ಲಾಡ್ಲೆಮಶ್ಯಾಕದರ್ಗಾ  ಹಿಂದು ಮುಸ್ಲಿಂರ ಸಾಮರಸ್ಯದೊಂದಿಗೆ ಕೋಮು ಸೌಹಾರ್ದತೆಯೊಂದಿಗೆ ಜನತೆ ಉರುಸು ಜಾತ್ರೆ ಉತ್ಸವನ್ನು ಆಚರಿಸುತ್ತಾ ಸಾಗಿರುವದು ಅತೀವ ಮಹತ್ವ
ದ್ದಾಗಿದೆ.


ತಾಳಿಕೋಟೆ ಪಟ್ಟಣದಲ್ಲಿ ಸರ್ಕಾರಿ, ಪ್ರಾಥಮಿಕ, ಶಾಲೆಗಳು ಅನುದಾನ ಪಡೆದ ಪ್ರಾಥಮಿಕ, ಸರ್ಕಾರಿ ಪ್ರೌಢಶಾಲೆಗಳು, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ಕೈಗಾರಿಕಾ ಕಾಲೇಜು ಇವುಗಳಲ್ಲದೆ ವೃತ್ತಿಪರ ತರಬೇತಿ ಕೇಂದ್ರ, ಕಂಪ್ಯೂಟರ ತರಬೇತಿ ಕೇಂದ್ರಗಳು ಸಹ ಕಾರ್ಯ ನಿರ್ವಹಿಸುತ್ತಾ ಶಿಕ್ಷಣ ಕ್ಷೇತ್ರದಲ್ಲಿ ಮುನ್ನಡೆದಿದೆ.


ಪಂಚಷಾಯಿ ದರ್ಗಾ

ಇದು ಅಲ್ಲದೇ ತಾಳಿಕೋಟೆ ಪಟ್ಟಣದ ಮಗ್ಗಲು ಹರಿಯುತ್ತಿರುವ ದೋಣಿನದಿ ಮೈದುಂಬಿ ಹರಿದರೆ ಪಸಲು ಬೆಳೆಗಳೆಲ್ಲಾ ತುಂಬಿ ತುಳುಕುತ್ತವೆ ಎಂದು ಹಿರಿಯರು ಹೇಳಿದಂತೆ “ದೋಣಿ ಬೆಳೆದರೆ ಓಣೆಲ್ಲಾ ಜೋಳ” ಎಂಬಂತೆ ಈ ಭಾಗದಲ್ಲಿ ಮುಂಗಾರು ಬೆಳೆಯಾಗಿ ಜೋಳ, ಸಜ್ಜೆ, ಹೆಸರು, ಸೂರ್ಯಕಾಂತಿ ಬೆಳೆಯನ್ನು ಅದರಂತೆ ಹಿಂಗಾರು ಬೆಳೆಯಾಗಿ ಬಿಳಿಜೋಳ, ಹತ್ತಿ, ಕುಸುಬಿ, ಗೋದಿ ಬೆಳೆಯನ್ನು ಬೆಳೆಯಲಾಗುತ್ತದೆ.



ತಾಳಿಕೋಟೆಯ ಸರಪಳಿ ಕೊಂಡಿಯಂತಿರುವ ಮಿಣಜಗಿ ಗ್ರಾಮ ಹಾಗೂ ತಾಳಿಕೋಟಿ ಪಟ್ಟಣ ಕಲ್ಲುಗಳಿಂದ ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಪರಸಿ ಕಲ್ಲುಗಳಿಗೆ ನೆರೆರಾಜ್ಯಗಳಿಗೆ ಬೇಡಿಕೆ ಇದೆ. ಈ ಗಣಿಗಳಲ್ಲಿ ಉದ್ಯೋಗ ಸಾವಿರಾರು ಕಾರ್ಮಿಕರಿಗೆ ದೊರೆತ್ತಿದ್ದು ಈ ಭಾಗದಲ್ಲಿಯ ೨೫% ರಷ್ಟು ಜನತೆಯ ನಿರುದ್ಯೋಗ ಸಮಸ್ಯೆ ಇದರಿಂದ ನೀಗಿದಂತಾಗಿದೆ.


ಈ ರೀತಿ ತಾಳಿಕೋಟಿ ಪಟ್ಟಣ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿ ಎಲ್ಲ ಮತಬಾಂಧವರನ್ನು ತನ್ನ ಮಡಿಲಲ್ಲಿ ಶಾಂತಿ ಸಮಾಧಾನದಿಂದ ಸಲಹುತ್ತ ನಡೆದಿದೆ.


ತಾಳಿಕೋಟಿಯ ಅಗಸಿ ಬಾಗಿಲಲ್ಲಿ ಇರುವ ವೀರಗಲ್ಲು,ಸತಿ ಕಲ್ಲು, ಸಪ್ತಮಾತೃಕೆಯರ ಶಿಲ್ಪಗಳು ಸುಂದರವಾಗಿವೆ. ಆದರೆ ರಕ್ಷಣೆಯಿಲ್ಲದೆ ಹಾಳಾಗುತ್ತಲಿವೆ. ಭೀಮನ ಭಾವಿ, ಕೈಲಾಸ ಪೇಟೆ ದಾರಿಯಲ್ಲಿಯ ಕಟ್ಟೆ ಮೇಲೆ, ಮಲ್ಲಯ್ಯನ ಗುಡಿಯಲ್ಲಿಯ ಭೈರವನ ಶಿಲ್ಪಗಳು ಕಲಾ ಕೌಶಲ್ಯದ ಪ್ರತೀಕವಾಗಿವೆ.


ರಾಸ್ತೆ ವಾಡೆಯ ಅಗಸಿ ಪಕ್ಕದಲ್ಲಿರುವ ವೀರನ ಗುಡಿಯಲ್ಲಿ ಎರಡು ವೀರಗಲ್ಲುಗಳಿವೆ. ಇಲ್ಲಿಯೇ ದ್ಯಾಮವ್ವನ ಕಲ್ಲು ಇದೆ.


ಅವಸಾನದ ಅಂಚಿನಲ್ಲಿರುವ ಕೋಟೆ
ಶಾಸನಗಳು : ೧೯೨೯ ರಲ್ಲಿ ಒಟ್ತು ನಾಲ್ಕು ಶಾಸನಗಳು ಇರುವ ಬಗ್ಗೆ ತಿಳಿದು ಬಂದಿದೆ. ಎರಡು ಶಾಸನಗಳು ಡೋಣಿಯ ದಡದಲ್ಲಿರುವ ರಾಮಲಿಂಗನ ಗುಡಿಯ ಕಂಬದಲ್ಲಿವೆ. ಇನ್ನೊಂದು ಅಂಬಾಭವಾನಿಯ ಎದುರಿನಲ್ಲಿರುವ ಕಂಬದಲ್ಲಿದೆ. ಅದೆ ರಿ ರೀತಿಯಾಗಿ ಮತ್ತೊಂದು ಶಾಸನ ರಾಸ್ತೆ ವಾಡೆಯ ಮಸೀದಿಯ ಎದುರಿಗಿರುವ        ಕಟ್ಟಡವೊಂದರಲ್ಲಿ ಅರಾಬಿಕ್  ಭಾಷೆಯಲ್ಲಿದೆ.


ರಾಸ್ತೆವಾಡೆ:


ಕ್ರಿ.ಶ ೧೬೫೦ ರಲ್ಲಿ ಬಾಳಾಜಿ ಬಾಜಿರಾವ ಪ್ವೇಶೆಯು ತಾಳಿಕೋಟಿಯನ್ನು ತನ್ನ ಬೀಗನಾದ ಆನಂದರಾವ ರಾಸ್ತೆ ಎಂಬುವವನಿಗೆ ಸರಂಜಾಮಿಯಾಗಿ ಕೊಟ್ಟನು.  ಇಲ್ಲಿ ಆನಂದರಾವ ಪೇಟೆ, ಕೈಲಾಸ ಪೇಟೆ, ಮತ್ತು ರಾಸ್ತೆವಾಡೆ ಎಂಬ ವಾಡೆಯನ್ನು ಕಟ್ಟಿದನು.


೧೯೮೧ ರಲ್ಲಿ ಮಾಜಿ ಉಪರಾಷ್ಟ್ರಪತಿಗಳಾದ ಶ್ರೀ ಬಿ.ಡಿ.ಜತ್ತಿ ಯವರ ಘನ ಅಧ್ಯಕ್ಷತೆಯಲ್ಲಿ ಈ ಅರಮನೆಯಲ್ಲಿ ಅಂಬರ ಚರಕ ಖಾದಿ ಕೇಂದ್ರವನ್ನು ಸ್ಥಾಪಿಸಿದ್ದು ಈ ಭಾಗದಲ್ಲಿ ಹತ್ತಿ ಬೆಳೆಯುದರಿಂದ ಇಲ್ಲಿ ಪ್ರಾರಂಭಗೊಂಡಿತ್ತು. ಹತ್ತಿ ಬೆಳೆಯುವದು ಕಡಿಮೆಯಾದ ಪ್ರಯುಕ್ತ ಈಗ ಅದು ಸಹ ನಿಂತು ಹೋಗಿದೆ.


ಅರಮನೆಯ ಮುಂದಿನ ಭವಾನಿ ಮಂದಿರ ವರಾಂಡದಲ್ಲಿ ಇತ್ತೀಚಿಗಷ್ಟೆ ಕೆಂಪು ಮರಳುಗಲ್ಲಿನಲ್ಲಿ ತಯಾರಿಸಿದ ದೊಡ್ಡದಾದೊಂದು ಬೀಸುವಕಲ್ಲು ದೊರೆತಿದ್ದು ಇದನ್ನು ದ್ಯಾವವ್ವನ ಬೀಸುಕಲ್ಲು ಎಂದು ಕರೆಯಲಾಗುತ್ತದೆ.


ರಾಸ್ತೆವಾಡೆಯಲ್ಲಿ ಅನೇಕ ದೇವಾಲಯಗಳು ಇವೆ. ಈ ದೇಗುಲಗಳ ಗೋಡೆಗಳು ಕಮಾನಿನಾಕಾರದ್ದಲ್ಲಿವೆ. ದೇಗುಲದ ಕಂಬಗಳು ಪೂರ್ವ ಚಾಲುಕ್ಯರ ಕರಿಕಲ್ಲಿನ ವಿಶಿಷ್ಟ ಮಾದರಿಯಿಂದ ಕೂಡಿದ್ದರೆ, ಕಮಾನಿನಾಕಾರದಲ್ಲಿರುವ ದೇಗುಲದ ಭಾಗವು ಇತ್ತಿಚೀನ ಸೇದಿ ಕಲ್ಲಿನಿಂದ ನಿರ್ಮಾಣವಾಗಿರುವುದು ಇದರ ವೈಶಿಷ್ಟ್ಯವಾಗಿದೆ. ವಾಸ್ತುಶಿಲ್ಪ ಲಕ್ಷಣಗಳಿಂದ ಇನ್ನೊಂದು ಕಲ್ಯಾಣ ಚಾಲುಕ್ಯರ ಸುಂದರವಾದ ದೇಗುಲವಾಗಿದೆ.


ತಾಳಿಕೋಟೆಯ ಕೋಟೆ :    


೩ ಮೈಲುಗಳಷ್ಟು ವಿಸ್ತಾರವಾದ ವೃತ್ತಾಕಾರದ ಪ್ರದೇಶವನ್ನು ಈ ಕೋಟೆ ಹೊಂದಿದೆ. ಇದರಲ್ಲಿ ಅನೇಕ ಬೃಹತ್ತಾಕಾರದ ಕಾವಲು ಬುರುಜು ಗುಪ್ತಮಾರ್ಗ ಅನೇಕ ಸಿಹಿನೀರಿನ ಬಾವಿಗಳನ್ನು ಒಳಗೊಂಡಿದೆ.


ವಿಜಯನಗರದ ಅರಸರು ಹಾಗೂ ಷಾಹಿ ದೊರೆಗಳ ಮಧ್ಯ ನಡೆದ ೧೫೬೫ರ ಯುದ್ಧದಲ್ಲಿ ಈ ಕೋಟೆಯು ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ.


ಶ್ರೀ ಖಾಸ್ಗತೇಶ್ವರ ಮಠ :


ಪ್ರತಿ ವರ್ಷವು ಕಡ್ಲಿಗಾರ ಹುಣ್ಣಿಮೆಯ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಜಾತ್ರೆ ನಡೆಯುತ್ತದೆ. ಸುತ್ತಮುತ್ತಲಿನ ಹಳ್ಳಿಗಳಿಂದ ಬಂದ ಜನರು ತೇರನ್ನು ಎಳೆದು ಶ್ರೀ ಖಾಸ್ಗತೇಶ್ವರ ಕೃಪೆಗೆ ಪಾತ್ರರಾಗುತ್ತಾರೆ.


ಈ ದೇವಾಲಯದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ನಿಲಯ ನಡೆಯುತ್ತದೆ. ಮತ್ತು ಮಠದಲ್ಲಿ ಒಂದು ಸಂಗೀತ ಶಾಲೆಯಿದೆ. ಈ ಮಠವು ಅನ್ನದಾಸೋಹದೊಂದಿಗೆ ಜ್ಞಾನದಾಸೋಹಕ್ಕು ಹೆಸರುವಾಸಿಯಾಗಿದೆ.


ತಾಳಿಕೋಟೆ ದ್ಯಾಮವ್ವ :


ಆರಾರಾಯರು ಬಡವರಾದರು ಹೃದಯದಿಂದ ಶ್ರೀಮಂತರಾಗಿದ್ದರು. ಇವರಿಗೆ ದ್ಯಾಮವ್ವ ಎಂಬ ಮಗಳಿದ್ದಳು ಅವಳನ್ನು ಚಿಕ್ಕವಯಸ್ಸಿನಲ್ಲಿಯೇ ತಾಳಿಕೋಟೆ ಗ್ರಾಮಕ್ಕೆ ಮದುವೆಮಾಡಿ ಕೊಡಲಾಯಿತು.


ದ್ಯಾಮವ್ವ ಗಂಡನ ಮನೆಗೆ ಹೋದ ಹನ್ನೆರಡು ವರ್ಷಗಳ ನಂತರ ಆರಾ
ರಾಮನೆಗೆ ಮತ್ತೊಬ್ಬ ಮಗ ಹುಟ್ಟಿದ ಆತನ ಹೆಸರು ಸುಲಿಯಲ್ಲ.ಸುಲಿಯಲ್ಲ ಹಟವಾದಿ ಮತ್ತು ಕಿಡಿಗೇಡಿಯಾಗಿದ್ದ. ಸುಲಿಯಲ್ಲ ದಾರಿಯಲ್ಲಿ ನೀರಿಗೆ ಹೋಗುವ ನಾರಿಯರ ಕೊಡಕ್ಕೆ ಕಲ್ಲಿನಿಂದ ಹೊಡೆದು ಕೊಡ ಒಡೆದಾಗ ಆ ನಾರಿಯರು ಅಕ್ಕತಂಗಿಯರಿಲ್ಲದವ ಎಷ್ಟೊಂದು ಮೆರೆಯುತ್ತಾನೆ ಎಂದು ಬಯ್ಯುತ್ತಿದ್ದರು. ಇದರಿಂದ ನೊಂದ ಸುಲಿಯಲ್ಲ ತನಗೆ ಅಕ್ಕ ಇರುವುದು ತಾಯಿಯಿಂದ ತಿಳಿಯುತ್ತಾನೆ. ಅಕ್ಕನನ್ನು ನೋಡಬೇಕೆಂಬ ಆಸೆಯಿಂದ ತಾಳಿಕೋಟೆಗೆ ಹೋಗಲು ನಿರ್ಧರಿಸುತ್ತಾನೆ.


ತಾಳಿಕೋಟೆಗೆ ಬರುವಾಗ ಕೆಲವು ಅಪಶಕುನಗಳು ಕಂಡುಬಂದರೂ ಅಕ್ಕನನ್ನು ನೋಡಬೇಕೆಂಬ ಆತುರದಿಂದ ತಾಳಿಕೋಟೆಗೆ ಬರುತ್ತಾನೆ. ಬರುವಾಗ ಸೀರೆ, ಹೂವು, ಅರಿಸಿಣ, ಬಳೆ ಎಲ್ಲವನ್ನು ತೆಗೆದುಕೊಂಡು ಊರು ಹುಡುಕುತ್ತಾ ಬರು
ತ್ತಾನೆ.


ತಾಳಿಕೋಟೆಗೆ ಬಂದು ಸೇದಿಬಾವಿಯ ಮೇಲೆ ಕುಳಿತು ನೀರಿಗೆ ಬರುವ ಹೆಣ್ಣುಮಕ್ಕಳಿಗೆ ತಾನು ದ್ಯಾಮವ್ವನ ತಮ್ಮ ಅವಳಿಗೆ ನಾನು ಬಂದ ವಿಷಯ ತಿಳಿಸಿರಿ, ನನ್ನನ್ನು ಕರೆಯಲು ಬರಲು ಹೇಳಿರಿ- ಎಂದು ಹೇಳುತ್ತಿದ್ದ.


ಅವರು ದ್ಯಾಮವ್ವನಿಗೆ ಈ ವಿಷಯ ತಿಳಿಸಿದಾಗ ತುಂಬಾ ಸಂತಸದಿಂದ ತಮ್ಮ
ನನ್ನು ಕರೆಯಲು ತೆರುಳುತ್ತಾಳೆ. ತಮ್ಮನನ್ನು ಕಂಡು ಸಂತೋಷಗೊಂಡು ಆತ
ನನ್ನು ಮನೆಗೆ ಕರೆದುಕೊಂಡು ಬರುತ್ತಾಳೆ.


ಈ ಸಂದರ್ಭದಲ್ಲಿ ತಾಳಿಕೋಟೆಯ ಕೋಟೆಯನ್ನು ಕಟ್ಟುತ್ತಿರುತ್ತಾರೆ. ಆದರೆ ಆ ಕೋಟೆಗ್ವಾಡಿ ನಿಲ್ಲುತ್ತಿರಲಿಲ್ಲ. ಅದಕ್ಕೆ ಕಾರಣ ತಿಳಿದಾಗ ಪೂರ್ವ ದಿಕ್ಕಿನಿಂದ ಅಮ
ವಾಸ್ಯೆ ದಿನದಂದು ಬಂದ ವ್ಯಕ್ತಿಯನ್ನು ಬಲಿಕೊಡಬೇಕು ಎಂದು ಡಂಗೂರ ಸಾರ
ಲಾಯಿತು.


ದ್ಯಾಮವ್ವನ ನಾದನಿ ಅಮವಾಸ್ಯೆ ದಿನ ಪೂರ್ವದಿಕ್ಕಿನಿಂದ ಬಂದ ಸುಲಿಯಲ್ಲನ ವಿಚಾರವನ್ನು ಹಣದಾಸೆಯಿಂದ ಊರ ಜನರಿಗೆ ಹೇಳುತ್ತಾಳೆ.


ಸುಲಿಯಲ್ಲನನ್ನು ಕೋಟೆಯಲ್ಲಿ ಹಾಕಿ ಕೋಟೆಕಟ್ಟಲು ನಿರ್ಧರಿಸಿದಾಗ ದ್ಯಾಮವ್ವ ತಮ್ಮನನ್ನು ಕಳೆದುಕೊಳ್ಳಲು ಇಷ್ಟಪಡದೆ ಮೊದಲು ತಾನು ಕೋಟೆಯೊಳಗೆ ಹೋಗುವದಾಗಿ ನಿರ್ಧರಿಸಿದಳು. ಮುಂದೆ ದ್ಯಾಮವ್ವ ಹಿಂದೆ ಸುಲಿಯಲ್ಲ ಹೋದರು ಮೂರು ವರ್ಷಕ್ಕೆ ಬೇಕಾದ ಕಾಳು ಕಡಿಯನ್ನು ಮತ್ತು ಬೀಸುಕಲ್ಲನ್ನು ಕೋಟೆ
ಯೊಳಗಡೆ ಇಟ್ಟು ಕೋಟೆಯನ್ನು ಕಟ್ಟಲಾಯಿತು ಎಂಬ ದಂತ ಕಥೆಗಳು ಇವೆ.
         ದ್ಯಾಮವ್ವ ಅಲ್ಲಿಯೇ ನಸುಕಿನಲ್ಲಿ ಎದ್ದು ಬೀಸುಕಲ್ಲನ್ನು ಬಿಸುತ್ತಿದ್ದಳು. ಇದನ್ನು ಕೇಳಿದ ಊರಿನ ಅತ್ತಿಯರು ತಮ್ಮ ತಮ್ಮ ಸೊಸೆಯರಿಗೆ ಬೈದು ಎಬ್ಬಿಸುತ್ತಿದ್ದರು. ಇದರಿಂದ ಬೆಸರಗೊಂಡ ಸೊಸೆಯಂದಿರು ದ್ಯಾಮವ್ವನಿಗೆ ‘ಏನ್ ಕಾಟ ಕೊಡ್ತಾ
ಳೀಕಿ’ ಎಂದು ಬೈಯುತ್ತಿದ್ದರಂತೆ. ಅಂದಿನಿಂದ ದ್ಯಾಮವ್ವ ಬೀಸುವದನ್ನು ಬಿಟ್ಟ
ಳಂತೆ. 
     ಬಡವರು  ಯಾರಾದರು  ಬಂದು ತಮಗೆ ಆಭರಣ ಬೇಕಾಗಿವೆ ಎಂದು ದ್ಯಾಮವ್ವನಿಗೆ ಕೇಳಿಕೊಂಡಾಗ ಆ ಕೋಟೆ ಗೋಡೆಯಿಂದ ಆಭರಣಗಳನ್ನು ಹೊರಗಿಡುತ್ತಿದ್ದಂತೆ. ಆಭರಣ ಒಯ್ದವರು ಮರಳಿ ತಂದು ಕೋಡುತ್ತಿದ್ದರಂತೆ. ಒಮ್ಮೆ ಒಬ್ಬ ಮಹಿಳೆ ಒಯ್ದು ಆಭರಣ ಕೊಡದಿದ್ದ ಕಾರಣ ಅವರ ಮನೆತನ ಸರ್ವನಾಶವಾಯಿತಂತೆ. 
        ತಾಳಿಕೋಟೆ ಅಗಸಿಯಲ್ಲಿ ದ್ಯಾಮವ್ವನ ಹಾಗೂ ಸುಲಿಯಲ್ಲನ ಗುರುತಿನ ಕಲ್ಲು ಕಾಣಿಸುತ್ತದೆ. ದ್ಯಾಮವ್ವ ಬೀಸುವಕಲ್ಲು ೪ ಪೂಟು ಅಗಲ ೧೬ ಇಂಚು ಎತ್ತರವನ್ನು ಹೊಂದಿದೆ. ಈ ಬೀಸುವಕಲ್ಲು ಈಗಲೂ ಕಾಣಬಹುದಾಗಿದೆ. 

ಅನಿತಾ ಬಿರಾದಾರ ಬಿ.ಎ. ೨

ಕೊಡೇಕಲ್ಲ ಬಸವಣ್ಣ

ಉತ್ತರದಲ್ಲಿ ವಡಬಾಳ ನಾಗನಾಥ, ದಕ್ಷಿಣದಲ್ಲಿ ಮಂಟೇಸ್ವಾಮಿಯಂತಹ ವಿಖ್ಯಾತ ಸಿದ್ಧರ ಗುರುವಾಗಿದ್ದ ಕೊಡೇಕಲ್ಲ ಬಸವಣ್ಣನದು ಘನಕ್ಕೆ ಘನವೆನ್ನಬಹುದಾದ ವ್ಯಕ್ತಿತ್ವ.

ಕೊಡೇಕಲ್ಲ ಬಸವಣ್ಣ ಹುಟ್ಟಿದ್ದು ಹಂಪಿಯಲ್ಲಿ.ಮಲ್ಲಿಶೆಟ್ಟಿ ಲಿಂಗಾಜೆಮ್ಮ ಇವರ ತಂದೆ ತಾಯಿ. ಇವರ ಮರಿಮೊಮ್ಮಗ ವೀರಸಂಗಯ್ಯ. ವೀರಸಂಗಯ್ಯನನ್ನು ಕುರಿತು ರಚಿಸಿದ ಕಾವ್ಯ ನಂದಿಯಾಗಮ ಲೀಲೆ. ಈ ಕೃತಿ ರಚನೆಯ ಕಾಲ ಕ್ರಿ.ಶ. ೧೫೮೯. ಈ ಆಧಾರ ಹಿಡಿದು ಕವಿಗೆ ನಾಲ್ಕು ತಲೆಮಾರು ಹಿಂದೆ ಜೀವಿಸಿದ್ದ ಕೊಡೇಕಲ್ಲ ಬಸವಣ್ಣನ ಕಾಲ  ಕ್ರಿ.ಶ. ೧೪೮೯.ಕೃಷ್ಣಾತೀರದ ಬೆಟ್ಟ ಪ್ರದೇಶಗಳಿಗೆ ಹೊಂದಿಕೊಂಡಿರುವ ಕೊಡೇಕಲ್ಲ ಯಾದಗೀರ ಜಿಲ್ಲೆಯ ಸುರಪುರ ತಾಲೂಕಿನಲ್ಲಿದೆ. ಕೃಷ್ಣಾ ತೀರದ ಈ ದಂಡೆಗೆ ಕೊಡೇಕಲ್ಲ ಇದ್ದರೆ ಆ ದಂಡೆಗೆ ಬಸವಣ್ಣನ ನೆಲೆ ಅಮರಕಲ್ಯಾಣದ ಜಲದುರ್ಗವಿದೆ. 


ಕಲ್ಯಾಣ ತೊರೆದ ಬಸವಣ್ಣ ಸಂಗಮಕ್ಕೆ ಬರುವಾಗ ದಾರಿಯಲ್ಲಿ ಕೊಡೇಕಲ್ಲಿನಲ್ಲಿ ತಂಗಿದ್ದನೆಂಬ ಐತಿಹ್ಯವಿದೆ. ಇದಕ್ಕೆ ಕೊಡೇಕಲ್ಲ ಸಾಹಿತ್ಯದಲ್ಲಿಯೂ ಸಮರ್ಥನೆ ದೊರಕುತ್ತದೆ. ತುರುಗಾಹಿ ರಾಮಣ್ಣನ ವಚನದಲ್ಲಿ ಬರುವ - ಬಂದಿತ್ತು ದಿನ ಬಸವಣ್ಣ ‘ಕಲ್ಲಿಗೆ.’ಕಲ್ಲಿಗೆ ಎಂಬುದಕ್ಕೆ ಕೊಡೇಕಲ್ಲಿಗೆ ಎಂದು ಅರ್ಥ ಹೇಳಲು ಸಾಧ್ಯವಿದೆ. ಹೀಗೆ ಕಡೆಯದಾಗಿ ಮೆಟ್ಟಿದ ಗ್ರಾಮವಾಗಿ ಕೊಡೇಕಲ್ಲು ಕಡೆಯ ಕಲ್ಯಾಣವೆನಿಸಿದೆ. ಆ ಕಾರಣಕ್ಕಾಗಿ

ಹಂಪೆಯಲ್ಲಿ ಬಸವಣ್ಣ ಕೊಡೇಕಲ್ಲನ್ನು ತನ್ನ ನೆಲೆಯನ್ನಾಗಿ ಮಾಡಿಕೊಂಡನೆಂದು ಕೊಡೇಕಲ್ಲ ಸಾಹಿತ್ಯ ತಿಳಿಸುತ್ತದೆ. 


ಮನೆತನದ ವೃತ್ತಿಯಾಗಿ ವ್ಯಾಪಾರದಲ್ಲಿ ಮುಂದುವರೆ
ಯುತ್ತಿದ್ದಾಗ ಎಲ್ಲಿಂದಲೋ ಬಂದ ಅದ್ವೈತ ಸಂಗಮೇಶ್ವರ ಎಂಬಾತ ಇವನನ್ನು ತನ್ನ ಅದ್ವೈತ ಮಾರ್ಗಕ್ಕೆ ಸೆಳೆಯುತ್ತಾನೆ.

ಇಷ್ಟಲಿಂಗ ಬಿಡಿಸಿ ಚರ್ಮಾಂಬರ ಉಡಿಸಿ ಕೈಯಲ್ಲಿ ಕೋಲು ,ಕಾಲಲ್ಲಿ ಕಂಸ, ‘ಹಂಡಿ’ ಎಂಬ ಮಣ್ಣಿನ  ಭಿಕ್ಷಾ
ಪಾತ್ರೆಯನ್ನು ನೀಡಿ ಅದ್ವೈತದ ನುಡಿ ಸಾರಲು ಬೀಳ್ಕೊ
ಡುತ್ತಾನೆ. ಇದು ಮಹಮ್ಮದೀಯ ಆವತಾರ ಎಂದು ಕೊಡೇಕಲ್ಲ ಸಾಹಿತ್ಯ ಹೇಳುತ್ತದೆ. ಇಷ್ಟೊತ್ತಿಗಾಗಲೆ ಹೆಂಡತಿ ಕಾಶಮ್ಮ



 ನನ್ನು ಕಳೆದುಕೊಂಡಿದ್ದ ಬಸವಣ್ಣ ಬಳ್ಳಿಗಾವೆಯ ಪಂಪವೆಣ್ಣಿಗೆ ಮಠದ ಸಿದ್ಧಯ್ಯ -ಚೆನ್ನಮ್ಮರ ಮಗಳು ನೀಲಮ್ಮ ( ಮಹಾದೇವಮ್ಮ ) ನನ್ನು ಮದುವೆಯಾಗಿ ಆಧ್ಯಾತ್ಮ ಬಾಳುತ್ತ, ಅದ್ವೈತ ನುಡಿ ಸಾರುತ್ತ, ಕಾಲಜ್ಞಾನ ಹೇಳು ತ್ತ , ಮಕ್ಕಳು ರಾಚಪ್ಪಯ್ಯ-ಸಂಗಪ್ಪಯ್ಯ ಗುಹೇಶ್ವರ ಸಹಿತ
ವಾಗಿ  ‘ಕಡೆಯ ಕಲ್ಯಾಣ’ವೆಂಬ ಕೊಡೇಕಲ್ಲಿಗೆ ಬರುತ್ತಾರೆ. ಆ ಹೊತ್ತಿಗೆ ಶಿಷ್ಯ-ಪ್ರಶಿಷ್ಯ ಸಮೂಹ-ಅನುಯಾಯಿ ವರ್ಗ ಬೆಳೆದು ಬಂದಿತು. ಅರಸು ಹನುಮನಾಯಕನ ಬೆಂಬಲವೂ ಇವರಿಗೆ ದೊರೆಯಿತು. 

ನುಡಿ ಸಾರುವದರೊಂದಿಗೆ ನುಡಿ ರಚನೆಯನ್ನು ಸಹ ಮಾಡಿ
ದ್ದಾರೆ.ಇವರ ಸಾಹಿತ್ಯವೆಲ್ಲ ‘ಅಮರಗನ್ನಡ’ ಎಂಬ ಸಾಂಕೇತಿಕ ಲಿಪಿಯಲ್ಲಿದೆ. ಲೋಕಪರ್ಯಟನ ಮಾಡಿದ ಬಸವನನ್ನು ವಿಜಾಪುರ ದೊರೆ ಯೂಸುಫ್ ಅಲಿ ಆದಿಲ್ ಶಹಾನ ಜನ ಬಂಧಿಸಿದ ಸಂಗತಿಗಳೊ ಉಲ್ಲೇಖವಾಗಿವೆ.
ಬಿ.ಬಿ.ಬಾಗೇವಾಡಿ. ಬಿ.ಎ.೨
          ವಂಗಿ          ಬಿ.ಎ.೨

*****
...

Friday, July 23, 2010

ತಾಳಿಕೋಟಿಯಲ್ಲಿ ಶಿವಸಂಚಾರ ನಾಟಕಗಳು

ಶಿವಸಂಚಾರ - ೦೯
ಸಾಣೇಹಳ್ಳಿಯ ಶಿವಸಂಚಾರಕ್ಕೆ ತನ್ನದೇ ಆದ ಇತಿಹಾಸವಿದೆ.ಕರ್ನಾಟಕದಲ್ಲಿ ಮಠದ ಸ್ವಾಮೀಜಿಯೊಬ್ಬರು ನಾಟಕ ರೆಪರ್ಟರಿ ನಡೆಸುತ್ತಿರುವುದು ಅಪೂರ್ವ ಸಂಗತಿ.ಪ್ರತಿವರ್ಷ   ಮೂರು ನಾಟಕಗಳನ್ನು   ನಾಡಿನುದ್ದಕ್ಕೂ ಸಂಚರಿಸಿ ಪ್ರದರ್ಶಿಸುವುದು ಸಣ್ಣ ಮಾತಲ್ಲ.


 ತಾಳಿಕೋಟಿಯ ನಾಡು ನುಡಿ ಬಳಗದವರು ಶಿವಸಂಚಾರದ ನಾಟಕಗಳ ಪ್ರದರ್ಶನವನ್ನು ೦೯-೧೦-೨೦೧೦ ರಂದು ಏರ್ಪಡಿಸಿದ್ದರು.
೧. ಯಹೂದಿ ಹುಡುಗಿ
೨. ಹೇಮರಡ್ಡಿ ಮಲ್ಲಮ್ಮ
೩. ಕೊಡಲ್ಲ ಕೊಡಕ್ಕಿರಲ್ಲ




ಯಹೂದಿ ಹುಡುಗಿ :


ಇಂದಿನ ಸಂದರ್ಭದಲ್ಲಿ ಜಾತಿ ಜಾತಿಗಳ ಮಧ್ಯ ಗೋಡೆ ಗೋಡೆಗಳೆದ್ದಿವೆ. ಆ ಗೋಡೆಗಳನ್ನು ಒಡೆದು ಮನುಷ್ಯ ಮನುಷ್ಯರಲ್ಲಿ ಬಂಧುತ್ವವನ್ನು ಉದ್ದೀಪಿಸುವುದು- ಈ ನಾಟಕ.
ನಾಟಕ ರಚನೆ : ಆಗಾ ಹಸ್ರ ಕಸ್ಮೀರಿ, ಕನ್ನಡ ಅನುವಾದ ಇಟಗಿ ಈರಣ್ಣ. 
ರೋಮನ್ ಹಾಗೂ ಯಹೂದಿಗಳ ಧರ್ಮ ಸಂಘರ್ಷ ಅತಿರೇಕದ್ದು. ರೋಮನ್ ಯುವರಾಜ ಮಾರ್ಕಸ್ ಮತ್ತು ಯಹೂದಿ ಹುಡುಗಿ ರಾಹೀಲ್ ಳ ನಡುವೆ ಹುಟ್ಟಿದ ಪ್ರೀತಿ ಜಗತ್ತಿಗೆ ಹೊಸ ಸಂದೇಶ ಸಾರುತ್ತದೆ.




ಒಂದು ಕಡೆ ಧರ್ಮ ಇನ್ನೊಂದು ಕಡೆ ಪ್ರೀತಿ ಮುಖಾಮುಖಿಯಾದಾಗ  ಪ್ರೀತಿಗೆ ಜಯ ದೊರೆಯುತ್ತದೆ. ಆದರೆ ಈ ಸಂಗತಿಯನ್ನು ಕಲಾತ್ಮಕವಾಗಿ ಹೆಣೆದ ರೀತಿ ಅದ್ಭುತವಾಗಿದೆ. ಶ್ವೇತ ಎಚ್. ಕೆ, ರಾಹೀಲ್ ಪಾತ್ರಕ್ಕೆ ಜೀವ ತುಂಬಿದರು. ಅದೇ ರೀತಿ ಅಜರಾ ಪಾತ್ರದಲ್ಲಿ ಅರುಣ್ ಚಿಕ್ಕಾನಂಗಲ್ ಗಮನಸೆಳೆದರು..


ಶರಣ ಮುತ್ಯಾನ ಗುಡಿ ಬಯಲಿನಲ್ಲಿ ಮೊದಲ ದಿನ ನಡೆದ ಈ ನಾಟಕ ಗಾಢ ಪರಿಣಾಮ ಬೀರಿತು. ಶಿವಸಂಚಾರ ಅನಂತರದ ನಾಟಕಗಳಿಗೆ ಹೆಚ್ಚಿನ ಜನರನ್ನು ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿತು.


ಹೇಮರಡ್ಡಿ ಮಲ್ಲಮ್ಮ:


ನಲವಡಿ ಶ್ರೀಕಂಠ ಶಾಸ್ತ್ರಿಗಳು ರಚಿಸಿದ ಈ ಪೌರಾಣಿಕ ನಾಟಕ ಅತ್ಯಂತ ಜನಪ್ರಿಯವಾದದ್ದು. ಹೇಮರಡ್ದಿ ಮಲ್ಲಮ್ಮ ತನ್ನ ಪೆದ್ದ ಗಂಡನನ್ನು ಚೆನ್ನಮಲ್ಲಿಕಾರ್ಜುನನೆಂದೇ ಭಾವಿಸಿ ಆದರ್ಶ ಗೃಹಿಣಿ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟಿದ್ದಾಳೆ.ಅಲ್ಲದೆ ಅವಿಭಕ್ತ ಕುಟುಂಬಗಳು ಒಡೆದು ಛಿದ್ರವಾಗುತ್ತಿರುವ ಇಂದಿನ ಸಂದರ್ಭಕ್ಕೆ ಸೂಕ್ತ ಸಂದೇಶ ನೀಡುತ್ತದೆ.ಜೀವದಾಯಕ ಔಷಧವಾಗಿದೆ.ಜನಸಾಮಾನ್ಯ  ಮತ್ತು ಪ್ರಬುದ್ಧ ಪ್ರೇಕ್ಷಕರನ್ನು ಏಕಕಾಲಕ್ಕೆ ರಂಜಿಸುತ್ತದೆ.
ಮಲ್ಲಮ್ಮನ ಮೈದುನ ವೇಮನ ವಿಷಯಾಸಕ್ತ ಸ್ಥಿತಿಯಿಂದ ಆಧ್ಯಾತ್ಮದ ಹಂತಕ್ಕೇರುವ ಸನ್ನಿವೇಶವಂತೂ ನಾಟಕದ ಶಿಖರವಾಗಿದೆ.




ತರಬೇತಿ ಪಡೆದುಕೊಂಡ ಕಲಾವಿದರು ಉತ್ತಮವಾಗಿ  ಅಭಿನಯಿಸಿ  ಪ್ರೇಕ್ಷಕರಲ್ಲಿ ನಾಟಕ ಅಭಿರುಚಿಯನ್ನು  ಹೆಚ್ಚಿಸಿದರು.
ಲಕ್ಷ್ಮೀ ವಿ. ಮಲ್ಲಮ್ಮನಾಗಿ ಗಿರೀಶ ಈಚನಾಳ ಭರಮರಡ್ಡಿಯಾಗಿ ಗಮನಸೆಳೆದರು.ಜೀವನ್ ನೀನಾಸಂ ವೇಮಣ್ಣನಾಗಿ ಅದ್ಭುತ ಅಭಿನಯ ನೀಡಿದರು.


ಕೊಡಲ್ಲ ಕೊಡಕ್ಕಿರಲ್ಲ



ಇಟಲಿಯ ನಾಟಕಕಾರ ನೋಬೆಲ್ ಪ್ರಶಸ್ತಿ ಪುರಸ್ಕೃತ ದಾರಿಯೋ ಪೋ ಅವರ Wont pay,Cant pay- ಕನ್ನಡ ರೂಪಾಂತರವೇ ಕೊಡಲ್ಲ ಕೊಡಕ್ಕಿರಲ್ಲ.


ಹಸಿದ ಹೊಟ್ಟೆಗೆ ಯಾವ ಆದರ್ಶವೂ ಹಿಡಿಸುವುದಿಲ್ಲ.ಬದುಕು ಮುಖ್ಯ ಎನ್ನುವ ವಾಸ್ತವವನ್ನು ಬಿಂಬಿಸುತ್ತದೆ. ಜಾಗತೀಕರಣದ ಆಗಮನದಿಂದಾಗಿ ರೈತರು ದಿಕ್ಕೆಟ್ಟಿದ್ದಾರೆ. ಕಾರ್ಮಿಕರು ಬಸವಳಿದಿದ್ದಾರೆ. ಜನರ ಬದುಕು ಚಿಂತಾಜನಕವಾಗಿದೆ. ಯಂತ್ರದ ಆಗಮನದಿಂದ ಸಣ್ಣಪುಟ್ಟ ವೃತ್ತಿಗಳು ನಾಶವಾಗುತ್ತಲಿವೆ.


ಪ್ರಸ್ತುತ ಸಂದರ್ಭದಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಹೊಟ್ಟೆ. ನಾಟಕದ ಪಾತ್ರಧಾರಿಗಳು ಕಾನೂನು ಮುರಿದು ಹೊಟ್ಟೆಗಾಗಿ ಹೋರಾಟ ನಡೆಸುತ್ತಾರೆ. ಮೇಲ್ನೋಟಕ್ಕೆ ಇದೊಂದು ಪ್ರಹಸನವಾಗಿ ಕಂಡರೂ ನಮ್ಮ ರೈತರ,ಕಾರ್ಮಿಕರ ದಯನೀಯ ಸ್ಥಿತಿಯನ್ನು ಬಿಂಬಿಸುತ್ತದೆ.


ಬಹುಮಾಧ್ಯಮದ ಹಾವಳಿಯಲ್ಲಿ ಸಿಕ್ಕು ನಲುಗುತ್ತಿರುವ ಮಧ್ಯಮ ವರ್ಗದ ಜನರ ಮನಸ್ಸನ್ನು ತಿದ್ದಿ ತೀಡಿ, ಅವರಲ್ಲಿಯ ಕಲಾಭಿರುಚಿಯನ್ನು ಹೆಚ್ಚಿಸುವಲ್ಲಿ ಈ ನಾಟಕಗಳು ಯಶಸ್ವಿಯಾದವು.
 ಸೋಮಶೇಖರ ಕೋಟಿಖಾನಿ ಬಿ.ಎ.೨ 

Wednesday, July 21, 2010

ಎಲ್ಲಮ್ಮನ ಆಟ (ಜನಪದ ಬಯಲಾಟ)

ಜಾನಪದ ನಮ್ಮ ಸಂಪತ್ತು. ನಮ್ಮ ಪರಂಪರೆಯ ಅತ್ಯಂತ ಪಳೆಯುಳಿಕೆ. ಹೆಸರಿಲ್ಲದೆ ಉಸಿರಾಗಿ ಹರಿದು ಬಂದ ವಾಚಿಕ ಪರಂಪರೆ. ಇಂತಹ ಜಾನಪದದಲ್ಲಿ ಸಾಹಿತ್ಯವೂ ಒಂದು.ಸಾಹಿತ್ಯದಲ್ಲಿ ಅತ್ಯಂತ ಆಕರ್ಷಕವಾದುದು ಬಯಲಾಟ.


ವೈವಿಧ್ಯಮಯವಾದ ಬಯಲಾಟವನ್ನು ಅಭ್ಯಾಸದ ಅನುಕೂಲಕ್ಕೆ ನಾಲ್ಕು ರೀತಿಯಲ್ಲಿ ವಿಭಾಗಿಸಲಾಗುತ್ತದೆ.


ದೊಡ್ಡಾಟ, ಯಕ್ಷಗಾನ,ಸಣ್ಣಾಟ ಮತ್ತು ಕೃಷ್ಣ ಪಾರಿಜಾತ.



ಎಲ್ಲಮ್ಮನ ಆಟ ಸಣ್ಣಾಟ ಪ್ರಕಾರಕ್ಕೆ ಸೇರುತ್ತದೆ.ಪೌರಾಣಿಕ ಆಶಯಗಳನ್ನು ಹೊಂದಿದ್ದರೂ ಇದು ಜನಪದ ಪ್ರಜ್ಞೆಯನ್ನು ಬಿಂಬಿಸುವ ಸುಂದರ ಆಟವಾಗಿದೆ. ಎಲ್ಲಮ್ಮ ಭಕ್ತಿಯನ್ನು ಬಿಚ್ಚಿಡುವ ಈ ಆಟದಲ್ಲಿ ಗತಕಾಲದ ಅನೇಕ ಪಳೆಯುಳಿಕೆಗಳಿವೆ.


ಉತ್ತರ ಕರ್ನಾಟಕದ ವಿಜಾಪುರ , ಕಲಬುರ್ಗಿ,ಬೆಳಗಾವಿ ಮತ್ತು ಮಹಾರಾಷ್ಟ್ರದ ಅಕ್ಕಲಕೋಟ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಆಟವನ್ನು ರಚಿಸಿದವನು – ವಿಜಾಪುರ ಜಿಲ್ಲೆಯ ಬಸವರಾಜ ಸಾಗಾವಿ. ಎಲ್ಲಮ್ಮನ ಭಕ್ತನೂ ಗಂಡುಜೋಗಪ್ಪನೂ ಆದ ಬಸವರಾಜ ಒಬ್ಬ ಶ್ರೇಷ್ಥ ನಾಟಕಕಾರ, ಅಭಿನಯಿಸುವ ಕಲಾವಿದ.


ತಾಳಿಕೋಟಿ ಶರಣ ಮುತ್ತ್ಯಾ (ಸಾಂಬ ಪ್ರಭು )ನ ಜಾತ್ರೆಯಲ್ಲಿ ನಾನು ನೋಡಿದ ಬಯಲಾಟವನ್ನು ಆಡಿದವರು ವಿಜಾಪುರ ಜಿಲ್ಲೆ ಗುಣಕಿ ಬೊಮ್ಮನಳ್ಳಿಯ ಮೇಳದವರು.



ಹೂಣಾವತಿ ಪಟ್ಟಣದ ರೇಣುಕರಾಜನ ಮಗಳಾಗಿ ಹುಟ್ಟಿದ ಎಲ್ಲಮ್ಮ ಜಮದಗ್ನಿ
ಯನ್ನು ಮದುವೆಯಾಗುವಳು. ಪತಿ ಪೂಜೆಗೆ ಸೀತಾಳ ನೀರು ಪತ್ರಿ ಹೂ ತರಲು ಹೋದಾಗ ಜೋಡಿ ಮೀನುಗಳ ಆಟ ನೋಡಿ ಮೈಮರೆಯುತ್ತಾಳೆ, ಚಿತ್ತ ಚಾಂಚ
ಲ್ಯಕ್ಕೆ ಒಳಗಾಗುತ್ತಾಳೆ.. ಪತಿಜಮದಗ್ನಿಯ ಶಾಪಕ್ಕೆ ತುತ್ತಾಗುತ್ತಾಳೆ. ಕುಷ್ಥರೋಗ ಪೀಡಿತಳಾಗುತ್ತಾಳೆ.
ಎಲ್ಲಮ್ಮ ಎಕ್ಕಯ್ಯ- ಜೋಗಯ್ಯ ಅವರ ಸೇವೆ ಮಾಡಿ ರೋಗ ವಾಸಿಮಾಡಿಕೊಂಡು ಬದುಕುತ್ತಿರುವಾಗ ಜನರಿಂದ ಗೊಡ್ಡಿ ಬಂಜೆ ಎಂಬ ನಿಂದೆಗೆ ಒಳಗಾಗುತ್ತಾಳೆ. ಶಿವ
ನಲ್ಲಿಗೆ ಹೋಗಿ ಕಾಡಿಬೇಡಿ ವರ ಪಡೆದು ಮಗನನ್ನು ಪಡೆಯುತ್ತಾಳೆ.



ಚಂಡಾಟವಾಡುವಾಗ ನಾರಿಯರ ಕೊಡ ಒಡೆದ ಪರಶುರಾಮ “ ತಂದೆಯಿಲ್ಲದ ಮೂಳ ”ಎಂಬ ನಿಂದೆಗೆ ಒಳಗಾಗುತ್ತಾನೆ. ತಾಯಿ ಹತ್ತಿರ ಬಂದು ನನ್ನ ತಂದೆಯನ್ನು ತೋರಿಸು ಎಂದು ಹಂಗಾಗಿ ಕಾಡುತ್ತಾನೆ. ತನ್ನ ತಂದೆಯನ್ನು ಕೊಂದವ ಕಾರ್ತವೀರಾರ್ಜುನ ಎಂಬ ಸಂಗತಿಯನ್ನು ತಿಳಿದು ಅವನನ್ನು ಸಂಹರಿಸಿ ತಂದೆಯನ್ನು ಬದುಕಿಸುತ್ತಾನೆ.
ನಿನ್ನ ತಾಯಿ ಚಾರಿತ್ರ್ಯಹೀನಳು, ಅವಳನ್ನು ಕೊಲ್ಲು- ಎಂದು ಜಮದಗ್ನಿ ಆಜ್ಞಾಪಿಸಿದಾಗ ತಂದೆಯ ಮಾತನ್ನು ಪಾಲಿಸುವದಕ್ಕಾಗಿ ಮಾತಂಗಿ ಮನೆಯಲ್ಲಿ ಅಡಗಿ ಕುಳಿತ ಹಡೆದ ತಾಯಿಯನ್ನೇ ಕೊಲ್ಲುತ್ತಾನೆ. ಮರಳಿ ವರ ಪಡೆದು ತಾಯಿಯನ್ನು ಬದುಕಿಸಿಕೊಳ್ಳುತ್ತಾನೆ,
ಮುಗ್ದ ಜನಪದರು ಎಲ್ಲಮ್ಮನನ್ನು ಆರಾಧಿಸುತ್ತಾರೆ. ಪೂಜಿಸುತ್ತಾರೆ. ಎಲ್ಲಮ್ಮ ನಿನ್ನ ಹಾಲಕ ಉಧೋ ಉಧೋ ಎಂದು ಉದ್ಘೋಷಿಸುತ್ತಾರೆ.ವರ್ಷಪೂರ್ತಿ ಅವಳ ಜಾತ್ರೆ ಮಾಡುತ್ತಾರೆ.
ಮೂವತ್ತು ವರ್ಷದ ಹಿಂದೆ ಹುಟ್ಟಿದ ಈ ಆಟ ಇಂದಿಗೂ ಜನಪ್ರಿಯತೆ ಪಡೆದು ಜಾತ್ರೆಗಳಲ್ಲಿ ಪ್ರದರ್ಶನಗೊಳ್ಳುತ್ತಲಿದೆ.ಇಂತಹ ಸುಂದರ ಬಯಲಾಟವನ್ನು ಪ್ರೊ. ಚಂದ್ರಗೌಡ ಕುಲಕರ್ಣಿ ಅವರು ೧೯೯೨ ರಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ.


ಶಿವು ಮಾಗಣಗೇರಿ ಬಿ.ಎ.೨

Saturday, May 1, 2010

ಪುಸ್ತಕಪ್ರೀತಿ

ನಾನು ಮೆಚ್ಚಿದ ಪುಸ್ತಕ :
ಮಾಯೆಯ ಮುಖಗಳು - ಕೆ.ಪಿ.ಪೂರ್ಣಚಂದ್ರ ತೇಜಸ್ವಿ


ಮೂಡಿಗೆರೆಯ ಮೋಡಿಗಾರ ತೇಜಸ್ವಿ ಬರಹದ ರುಚಿಯೇ ಬೇರೆ ! ಕನ್ನಡದ ಅತ್ಯುತ್ತಮ ಬರಹಗಾರರಲ್ಲಿ ಒಬ್ಬರಾದ ಇವರು ಓದುಗರ ವ್ಯಕ್ತಿತ್ವದ ಒಳಹೊಕ್ಕು ವಿಶೇಷ ಅನುಭೂತಿ ನೀಡುತ್ತಾರೆ ; ತಾವು ಕಂಡ ವಿಸ್ಮಯದಲ್ಲಿ ಓದುಗರನ್ನೂ ತನ್ಮಯಗೊಳಿಸುತ್ತಾರೆ. 
ಮರಿಗೆ ಮಮತೆಯ  ಗುಟುಕು ನೀಡುತ್ತಿರುವ ಪಿಕಳಾರ 

 ತೇಜಸ್ವಿಯವರ ‘ಮಾಯೆಯ ಮುಖಗಳು ’ಈ ಸಚಿತ್ರ ಲೇಖನಗಳ  ಕೃತಿ ಒಂದು ಸುಂದರ ಪರಿಸರ ಕಾವ್ಯವಾಗಿದೆ. “ಮಾನವ ಪರಿಸರದ ಕೂಸು”. ಮಾನವನಿಗೆ ಸ್ನೇಹಿತರಾಗಿರುವ ಹಕ್ಕಿ, ಕೀಟ,ಜೇನ್ನೊಣ ಮುಂತಾದವುಗಳ ಕುರಿತು  ಹೊಸ ಲೋಕವನ್ನೆ ತೆರೆದಿಟ್ಟಿದ್ದಾರೆ. ಅದರಲ್ಲೂ ಸಹ್ಯಾದ್ರಿಯ ಮಡಿಲಲ್ಲ್ಲಿ ಝೇಂಕರಿಸುವ ಝರಿಗಳು, ಹಾವು ,ಹೂವು, ಹುಳುಹುಪ್ಪಟಿ ಮತ್ತು ಮನುಷ್ಯರೂ ಸೇರಿದಂತೆ ಎಲ್ಲವನ್ನೂ ಬಗೆಗಣ್ಣಿನಿಂದ ಅವಲೋಕಿಸಿದ್ದಾರೆ.


ಮುಖ ಪುಟದಲ್ಲಿ ಸ್ಥಾನ ಪಡೆದ ಪಿಕಳಾರ ಜೋಡಿ ಹಕ್ಕಿಗಳು
೧೪೪ ಪುಟಗಳ ವಿಶಿಷ್ಟ ಆಕಾರದ ಈ ಕೃತಿಯಲ್ಲಿ ೧೫೦ ಕ್ಕಿಂತಲೂ ಹೆಚ್ಚು ಚಿತ್ರಗಳಿವೆ.  ಆದ್ದರಿಂದಲೇ ಈ ಕೃತಿಗೆ ಪ್ರಕಾಶಕರು “ ತೇಜಸ್ವಿಯವರ ದೃಶ್ಯಕಾವ್ಯ” ಎಂದು ಕರೆದಿದ್ದಾರೆ. ‘ಎದೆಯ ಹಕ್ಕಿ ಪೊದೆಯ ಹಕ್ಕಿ’ ಯಿಂದ ಹಿಡಿದು ‘ಆಮೃತ ಶಿಲೆಯ ಶಿಲ್ಪ- ಫ್ಯಾಲೇಸ್ ’ ವರೆಗೆ ೩೨ ಚಿತ್ರ ಲೇಖನಗಳಿವೆ. ಬಹುಶಃ ಇಂತಹ ಪುಸ್ತಕ ಮತ್ತಾವ ಭಾಷೆಯಲ್ಲಿಯೂ ಇರಲಿಕ್ಕಿಲ್ಲ ! ಚಿತ್ರಗಳಿಗೆ ಕೊಟ್ಟ ವಿವರಗಳಂತೂ ಕಾವ್ಯಕಳೆಯಿಂದ ಕಂಗೊಳಿಸುತ್ತವೆ; ಓದುಗರಿಗೆ ಕುತೂಹಲ ಹುಟ್ಟಿಸುತ್ತವೆ; ಚಿತ್ರ- ಬರಹಗಳಲ್ಲಿ ಮೈಮರೆಸುತ್ತವೆ.

ಟುವ್ವಿ ಹಕ್ಕಿ ಮರಿಗೆ ಗುಟುಕು ಕೊಡುವ ಅಮೃತ ಕ್ಷಣ
ಚಳಿಗಾಲದಲ್ಲಿ ಚಿಟ್ಟಹಕ್ಕಿ ಸೈಬಿರಿಯಾ ಮಂಚೂರಿಯಾಗಳಿಂದ ಸಹ್ಯಾದ್ರಿ ತವರಿಗೆ ಬಂದು ನೆಲೆಯೂರಿ ಮತ್ತೆ ವಸಂತ ಕಾಲವನ್ನು ತಮ್ಮ ರಾಷ್ಟ್ರಗಳಲ್ಲಿಯೆ ಕಳೆಯುತ್ತವೆ. ಮಿಂಚುಳ್ಳಿ ಸುರಂಗ ಕೊರೆದು ಮನೆಮಾಡಿ ಮರಿಗಳನ್ನು ಸಾಕುವ ವಿಸ್ಮಯ ಇಲ್ಲಿದೆ.

ಜೇಡನ ಬಲೆಗುಂಟ ಹಿಮಮಣಿ ಮಾಲೆ

ಗರುಗಿ ಹಳು ಹೂ ಜೇನು ಉತ್ಪಾದನೆಗೆ ಹೇಳಿಮಾಡಿಸಿದ ಕಾಡಿನ ಸಸ್ಯ. ಏಳು ವರ್ಷಕ್ಕೊಮ್ಮೆ ಹೂಬಿಡುವ ಈ ಸಸ್ಯ ಜೀವಲೋಕದ ವಿಸ್ಮಯ. ಆದರೆ ಇಂದು ಜೇನ್ನೊಣಗಳ ಓಂಕಾರ ನಾದವಿಲ್ಲದೆ ಕಣಿವೆಗಳು ಮೌನವಾಗಿವೆ.
ಆಕಾಶದ ಭಿತ್ತಿಯಲ್ಲಿ ಮಂಗಟ್ಟೆಯ ಗರಿ-ಸಿರಿ

ಈ ಕೃತಿಯಲ್ಲಿಯ ತಲೆಬರಹಗಳು, ಚಿತ್ರಕ್ಕೆ ನೀಡಿದ ವಿವರಣೆಗಳು ತೇಜಸ್ವಿ
ಕಾವ್ಯತ್ಮಕ ಬರವಣಿಗೆಗೆ ಸಾಕ್ಷಿ ನುಡಿಯುತ್ತವೆ.“ಚಲಿಸುವ ಮಿಸ್ಟರ್ ಮುಳ್ಳು”
, “ಹಕ್ಕಿ ಹಾರುತಿದೆ ನೋಡಿದಿರಾ”, “ಝೇಂಕರಿಸುವ ರೆಕ್ಕೆಗಳು”,“ ಅಪರಂಜಿ ಹೂವಿನ ಹಕ್ಕಿ”,“ಹಣ್ಣು ಕಳ್ಲರು” ,“ ಎಲೆಲೆ ಎಲೆ ಕೀಟ”, ಹಿಮಮಣಿಗಳ ಅತೀಂ
ದ್ರಿಯ ಪ್ರಪಂಚ” ಇವು ಮಾಂತ್ರಿಕ ಶಕ್ತಿಯಿಂದ ಓದುಗರನ್ನು ಸೆರೆಹಿಡಿಯುತ್ತವೆ.




ಜೌಗಿನಲ್ಲಿ ಆಹಾರ ಹುಡುಕುತ್ತಿರುವ ಹುಂಡುಕೋಳಿ
ಪರಿಸರದಲ್ಲಿ ತಾನೂ ಒಂದಾಗಿ ಬದುಕಿದ ಅಪರೂಪದ ಸಾಹಿತಿ,ಚಿಂತಕ. ಮಾನವ ತನ್ನೊಂದಿಗೆ ಜೀವಜಗತ್ತಿದೆ ಎಂಬುದನ್ನು ಅರಿತು ಬಾಳಬೇಕು.ಸಹಜೀವಿಯ ಹಕ್ಕಿಗೆ ಧಕ್ಕೆ ತರದಂತಿರಬೇಕು ! ಇದು ತೇಜಸ್ವಿಯ ಆಶಯ !


ಮಳೆಯಲ್ಲಿ ವ್ಯಕ್ತಿಗಳೆಲ್ಲ ತಮ್ಮ ಹೆಸರು ಕುಲಗೋತ್ರ ಕಳೆದುಕೊಂಡು ಕೊಡೆಗಳಾಗಿಹೋಗಿರುವರು.

ಪ್ರತಿಯೊಂದನ್ನೂ ಕುತೂಹಲದಿಂದ ಕಾಣುವ ತೇಜಸ್ವಿ ನಮಗೆಲ್ಲ ಮಾದರಿಯಾಗಿದ್ದಾರೆ !ಈ ಕೃತಿಮೂಲಕ ಹೊಸ ದೃಷ್ಟಿ ನೀಡಿದ್ದಾರೆ !


ಸಾಧನಾ ಎಲ್.ಚಕ್ರಸಾಲಿ ಬಿ.ಎ. ೨

Wednesday, April 21, 2010

ತಾಳಿಕೋಟಿ ದ್ಯಾಮವ್ವ !

ತಾಳಿಕೋಟಿ ಎಂದಾಕ್ಷಣ ನೆನೆಪಿಗೆ ಬರುವುದು ರಕ್ಕಸ ತಂಗಡಗಿಯ ಯುದ್ಧ ! ಆದರೆ ನಾನು ಹೇಳುತ್ತಿರುವುದು ಅದರ ಬಗ್ಗೆ ಅಲ್ಲ . ತಾಳಿಕೋಟಿಯ ಕೋಟೆಗೂ ದ್ಯಾಮವ್ವನಿಗೂ ಸಂಬಂಧಿಸಿದಂತೆ ಒಂದು ಐತಿಹ್ಯವಿದೆ. ಆ ಐತಿಹ್ಯದಂತೆ ತಾಳಿ
ಕೋಟಿಗೆ ಈ ಹೆಸರು ಬರಲು ದ್ಯಾಮವ್ವ ತನ್ನ ತಾಳಿಯನ್ನು ಬಡವರಿಗೆ ಆಪ
ತ್ಕಾಲದಲ್ಲಿ ಕೊಡುತ್ತಿದ್ದಳಂತೆ !ಆದ್ದರಿಂದಲೆ ಈ ಹೆಸರು ಬಂದಿದೆಯಂತೆ. ಇಲ್ಲಿಯ ಕೋಟೆ ತಾಳಿಯ ಆಕಾರದಲ್ಲಿರುವುದರಿಂದ ಈ ಹೆಸರು ಬಂದಿದೆ ಎಂತಲೂ ಹೇಳುತ್ತಾರೆ.


ಅವಸಾನದ ಅಂಚಿನಲ್ಲಿರುವ ತಾಳಿಕೋಟೆಯ ಕೋಟೆ

ಈಗ ಇಲ್ಲಿ ಅನೇಕ ಐತಿಹಾಸಿಕ ಅವಶೇಷಗಳಿವೆ. ಕೋಟೆ, ಬತೇರಿ, ವೀರ ಗಲ್ಲು,ಭೈರವನ ಶಿಲ್ಪ, ಶಾಸನ,ಭಾವಿ, ಸ್ಥಂಭಗಳು ಒಂದೇ ಎರಡೇ ಲೆಕ್ಕವಿಲ್ಲ ! ಆದರೆ ಅವೆಲ್ಲವೂ ಇಂದು  ಹಾಳಾಗುತ್ತಲಿವೆ. ಕಲ್ಯಾಣ ಚಲುಕ್ಯರ ಕಾಲದ ಸಿದ್ಧ
ಲಿಂಗೇಶ್ವರ ಮತ್ತು ರಾಮಲಿಂಗೇಶ್ವರ ದೇವಾಲಯಗಳು ಹಾಳಾಗುತ್ತಲಿವೆ.
 
 
ತಾಳಿಕೋಟಿಯ ಕೋಟೆಯು ಗಟ್ಟಿಯಾಗಿ ನಿಲ್ಲದಿದ್ದಾಗ ಬಲಿ ಕೊಡಲು ನಿರ್ಧರಿಸಿ
ದರು. ಅಮವಾಸ್ಯೆಯ ದಿನ ಮೂಡಲ ದಿಕ್ಕಿನಿಂದ ಬಂದವರನ್ನು ಬಲಿಕೊಟ್ಟರೆ ಕೋಟೆ ನಿಲ್ಲುವದೆಂದು ಜ್ಯೋತಿಷಿಗಳು ಹೇಳಿದರು. ದ್ಯಾಮವ್ವನ ತಮ್ಮ ಸುಲಿಯಲ್ಲ ಅಮವಾಸ್ಯೆಯ ದಿನವೇ ಮೂಡಲ ದಿಕ್ಕಿನ ತನ್ನ ಊರಿನಿಂದ ಅಕ್ಕನನ್ನು ನೋಡಲು ಬಂದನು. ಇದನ್ನು ತಿಳಿದ ರಾಜಸೇವಕರು ಸುಲಿಯಲ್ಲನನ್ನು ಬಲಿಕೊಡಲು ಕರೆ
ದೊಯ್ದರು. ಅಕ್ಕ ದ್ಯಾಮವ್ವ ತನ್ನ ತಮ್ಮನೊಂದಿಗೆ ತಾನೂ ಬಲಿಯಾದಳು. ಆದರೆ ತಮ್ಮ ನ ಸಲುವಾಗಿ ಕೋಟೆಗೆ ಬಲಿಯಾದ ದ್ಯಾಮವ್ವ ಜನಪದರ ಬಾಯಲ್ಲಿ ಅಮರಳಾಗಿದ್ದಾಳೆ.
   ಕೋಟೆಯ ಹತ್ತಿರವಿರುವ ದ್ಯಾಮವ್ವನ ಗುಡಿ

 
ದಿನನಿತ್ಯ ದ್ಯಾಮವ್ವ ನಸುಕಿನಲ್ಲಿಯೇ ಎದ್ದು ಬೀಸುತ್ತಾಳಂತೆ. ಬೀಸುವ ಸದ್ದು ಕೇಳಿದ ಕೂಡಲೆ ಅತ್ತೆಯರು ಸೊಸೆಯಂದಿರಿಗೆ “ ಏ ಏಳ್ರೆ , ದ್ಯಾಮವ್ವ ಆಗಲೆ ಎದ್ದು ಬೀಸಾಕ ಹತ್ಯಾಳ ” ಎಂದು ಸೊಸೆಯಂದಿರನ್ನು ಎಬ್ಬಿಸುತಿದ್ದರಂತೆ. ಸೊಸೆ
ಯಂದಿರು “ ಈ ದ್ಯಾಮವ್ವ ನಮಗ ಪೀಡಾ ಆಗ್ಯಾಳ ” ಎಂದು ಬಯ್ಯುತ್ತಿದ್ದರಂತೆ. ಹೀಗೆ ದ್ಯಾಮವ್ವ ಜನಜನಿತವಾಗಿದ್ದಾಳೆ.

ದ್ಯಾಮವ್ವ ಬೀಸುತ್ತಿದ್ದಳೆಂದು  ಹೇಳಲಾಗುವ ಬೀಸುವ ಕಲ್ಲು
 
ಈಗಲೂ ದ್ಯಾಮವ್ವ ಬೀಸುವ ದೊಡ್ಡ ಬೀಸುವಕಲ್ಲು ಶಿವಭವಾನಿ ದೇವಸ್ಥಾನದ ಹತ್ತಿರವಿದೆ. ದ್ವಾರ ಬಾಗಿಲದ ಹತ್ತಿರವಿರುವ ಕಿಂಡಿಗೆ ದ್ಯಾಮವ್ವ್ನ ಕಿಂಡಿ ಎಂದು ಹೇಳುತ್ತಾರೆ. ಅಲ್ಲಿಯೆ ಗೋಡೆಯಲ್ಲಿರುವ ಶಿಲ್ಪದ ಎರಡು ಮೂರ್ತಿಗಳಿಗೆ ದ್ಯಾಮವ್ವ ಮತ್ತು ಸುಲಿಯಲ್ಲ ಎಂದು ಕರೆಯುತ್ತಾರೆ. ಕಿಂಡಿಯಲ್ಲಿರುವ ಶಿಲ್ಪಕ್ಕೆ ದೀಪ ಹಚ್ಚಿ ಪೂಜೆಮಾದುವುದನ್ನು ಈಗಲೂ ಕಾಣಬಹುದಾಗಿದೆ. ದ್ವಾರ ಬಾಗಿಲದ ಹತ್ತಿರವೇ ಇರುವ ಚಿಕ್ಕಗುಡಿಯಲ್ಲಿ ಒಂದು ವೀರಗಲ್ಲು ಇದೆ. ಅದರಲ್ಲಿಯ ಶಿಲ್ಪ್ಗಗಳಿಗೆ ದ್ಯಾಮ
ವ್ವನ ಶಿಲ್ಪವೆಂದು ಹೇಳುತ್ತಾರೆ.
  ದ್ಯಾಮವ್ವನ ಕಿಂಡಿ ಇಲ್ಲಿಯೆ ಕೆಳಗೆ ಸಪ್ತ ಮಾತೃಕೆ ಶಿಲ್ಪವಿದೆ.

 ದ್ಯಾಮವ್ವ ತನ್ನ ಗಂಡನ ಮನೆಯವರ ಹೆಣ್ಣುಸಂತಾನಕ್ಕೆ ನನ್ನಂತೆ ಕಷ್ಟ ಬರಲಿ ಎಂದು ಶಾಪ ಕೊಟ್ತಿರುವಳಂತೆ.ಅಲ್ಲದೆ ತನ್ನ ತಮ್ಮ ಬಂದದ್ದನ್ನು ರಾಜದೂತರಿಗೆ ಚಾಡಿಹೇಳಿದ ಮಗ್ಗುಅಲ ಮನೆಯವರಿಗೂ ಶಾಪ ಕೊಟ್ತಿರುವಳಂತೆ. ಈಗಲೂ ಅವರಿಗೆ ಕಷ್ಟ ತಪ್ಪಿಲ್ಲವಂತೆ.
 
 
ಹೀಗೆ ಅನೇಕ ಕತೆಗಳು ದ್ಯಾಮವ್ವನ ಐತಿಹ್ಯದ ವ್ಯಕ್ತಿತ್ವವನ್ನು ಬಿಚ್ಚಿಡುತ್ತವೆ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದರೆ ಬೀಸುವಕಲ್ಲು ಮದ್ದು ಆರೆಯುವ ಕಲ್ಲಾಗಿರಬಹು
ದೆಂದು ಗೊತ್ತಾಗುತ್ತದೆ. ಅದೇ ರೀತಿ ಸಪ್ತ ಮಾತೃಕೆಯ ಶಿಲ್ಪವನ್ನು ಅಕ್ಕ ತಮ್ಮರ ಶಿಲ್ಪವೆಂದು ಕರೆಯುವುದು ಗೊತ್ತಾಗುತ್ತದೆ. ಒಟ್ಟು ದ್ಯಾಮವ್ವನ ಬಲಿದಾನವನ್ನು ಜನಪದರು ಅತಿ ಶೃದ್ಧೆಯಿಂದ, ಗೌರವದಿಂದ ಕಂಡಿದ್ದಾರೆಂಬುದು ಗೊತ್ತಾಗುತ್ತದೆ.




 ಕಾವ್ಯ ಕಾರಜೋಳ ಬಿ. ಎ.  ೧

Tuesday, April 20, 2010

೭೬ನೆಯ ಕನ್ನಡ ಸಾಹಿತ್ಯ ಸಮ್ಮೇಳನ - ಗದಗ







೭೬ ನೆಯ ಸಮ್ಮೇಳನದ ಅಧ್ಯಕ್ಷೆ ಗೀತಾ ನಾಗಭೂಷಣ ಒಡಲಾಳದ ಮಾತುಗಳು



ತರಗತಿಯಲ್ಲಿ ಆಧುನಿಕ ಕವಿಗಳ ಕವಿತೆಗಳನ್ನು ಲೇಖಕರ ಕಾದಂಬರಿ, ಸಣ್ಣಕತೆ,ಪ್ರಬಂಧಗಳನ್ನು ಓದಿ ಪುಳಕಗೊಂಡಿದ್ದೇನೆ . ಅಂತಹ  ಸಾಹಿತಿಗಳನ್ನು ಪ್ರತ್ಯಕ್ಷವಾಗಿ ನೋಡುವ, ಅವರ ಮಾತುಗಳನ್ನು ಕೇಳುವ, ಅವರೊಂದಿಗೆ ಮಾತನಾದುವ ಅವಕಾಶ ಸಿಕ್ಕರೆ ಅದಕ್ಕಿಂತ ಹೆಚ್ಚಿನ ಭಾಗ್ಯವಿನ್ನೇನು ಬೇಕು ! ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳನ್ನು ಆಲಿಸುವ  ಮತ್ತು ಸಾಹಿತಿಗಳನ್ನು ಮಾತನಾಡಿಸುವ ಭಾಗ್ಯ ಸಿಗುತ್ತದೆಂದೆ ಹೋಗಲು ನಿರ್ಧರಿಸಿದೆ. ಪ್ರೊ. ಚಂದ್ರಗೌಡ ಕುಲಕರ್ಣಿಯವರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ದೊರೆತ ಕೂಡಲೇ ಉತ್ಸುಕನಾದೆ.

ನೆರೆ ಬರದ ಕಪ್ಪು ನೆರಳಿನಲ್ಲಿಯೂ ಗದಗ ಸಮ್ಮೇಳನಕ್ಕಾಗಿ ಸಂಭ್ರಮದಿಂದ ಸಿದ್ಧಗೊಂಡಿತ್ತು. ಅಧ್ಯಕ್ಷರ ಮೆರವಣಿಗೆ ಮತ್ತು ಉದ್ಘಾಟನೆ ಸಮಾರಂಭದಷ್ಟೊತ್ತಿಗೆ ಕನ್ನಡಿಗರ ಅಭಿಮಾನ ತಾರಕಕ್ಕೇರಿತ್ತು !

ಮೂರು ದಿನಗಳಲ್ಲಿ ಎಷ್ಟೊಂದು ಗೋಷ್ಠಿಗಳು,ಎಂತೆಂತಹ ಸಾಹಿತಿಗಳು, ಎಂತೆಂತಹ ಆಸಕ್ತ ಓದುಗರು, ಸಾಹಿತ್ಯಾಭಿಮಾನಿಗಳು... ಅಭೂತಪೂರ್ವ ಎನಿಸುವ ಮನರಂಜನೆ ಕಾರ್ಯಕ್ರಮಗಳು,ರಾಜ್ಯದ ಪ್ರಮುಖ ಪುಸ್ತಕ ಮಳಿಗೆಗಳು..  ಸಮೀಪದ ಪ್ರವಾಸಿ ತಾಣಗಳು... ನಮ್ಮೊಂದಿಗೆ ಊಟ ಮಾಡುವ ಸಾಹಿತಿ ದಿಗ್ಗಜರು,  ಪತ್ರಿಕೆ, ಟಿ.ವಿ. ರೇಡಿಯೋ ಮಾಧ್ಯಮದವರ ಅರ್ಥಪೂರ್ಣ ಪ್ರಸಾರಗಳು.... ಎಲ್ಲವನ್ನು ಸವಿಯುವ ಅವಕಾಶ ಸಿಕ್ಕದ್ದು ಈಗಲೂ ಮನಸ್ಸಿನಲ್ಲಿ ಹಚ್ಚಹಸಿರಾಗಿದೆ.

ಅಂತೆಯೇ ಈ ಸಮ್ಮೇಳನ ಕುರಿತು ೯೪ ಪುಟಗಳ  ‘ಅವಲೋಕನ’ ವನ್ನು ರಚಿಸಲು ಸಾಧ್ಯವಾಯಿತು. ಈ ಅವಲೋಕನವನ್ನು ಪ್ರಸಿದ್ಧ ಜಾನಪದ  ತಜ್ಞರಾದ ಶಂಭು ಬಳಿಗಾರ ಅವರು ಸ್ನೇಹ ಸಮ್ಮೇಳನದಲ್ಲಿ ಬಿಡುಗಡೆ ಮಾಡಿ ತುಂಬು ಹೃದಯದಿಂದ ಶುಭ ಹಾರೈಸಿದ್ದನ್ನು ನಾನೆಂದೂ ಮರೆಯುವದಿಲ್ಲ !
ಒಟ್ಟು ಈ ಸಮ್ಮೇಳನ ನನ್ನ ಮೇಲೆ ಅಗಾಧ ಪರಿಣಾಮವನ್ನು ಬೀರಿದೆ. ನನ್ನ ಅನುಭವಗಳನ್ನು ಬರವಣಿಗೆ ರೂಪದಲ್ಲಿ  ಅಭಿವ್ಯಕ್ತ ಮಾಡುವ ಶಕ್ತಿ ನೀಡಿದೆ.

ಶರಣಬಸವ ಚಿಂಚೋಳಿ ಬಿ. ಎ. ೧