ನಮ್ಮೂರ ದೇವಿ ಪುರಾಣ ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗೋಟಖಿಂಡ್ಕಿ ಗ್ರಾಮ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅಂತಹ ವೈಶಿಷ್ಟ್ಯಗಳಲ್ಲಿ ೧೪೮ ವರ್ಷ ಗಳಿಂದ ನಡೆದುಕೊಂಡು ಬರುತ್ತಿರುವ ದೇವಿ ಪುರಾಣವೂ ಒಂದು.
ಪ್ರತಿ ವರ್ಷ ಮಹಾನವಮಿ ಅಮವಾಸ್ಯೆಯಂದು ಪ್ರಾರಂಭವಾಗಿ ದೀಪಾವಳಿ ಅಮವಾಸ್ಯೆಯ ಅನಂತರ ಬರುವ ತ್ರಯೋದಶಿಯಂದು ಮುಕ್ತಾಯವಾಗುತ್ತದೆ. ಸುಮಾರು ಒಂದುವರೆ ತಿಂಗಳ ವರೆಗೆ ನಡೆಯುವ ಈ ಕಾರ್ಯಕ್ರಮ ಜಾತ್ರೆಯೊಂದಿಗೆ ಮುಕ್ತಾಯವಾಗುತ್ತದೆ. ಚಿದಾನಂದ ಅವಧೂತರಿಂದ ರಚಿಸಲ್ಪಟ್ಟ ‘ಶ್ರೀ ಮನ್ ಮಹಾದೇವಿ ಮಹಾತ್ಮೆ ’ಪುರಾಣವನ್ನು ಪಠಿಸಲಾಗುತ್ತದೆ.
ಗ್ರಾಮದ ಕುಲಕರ್ಣಿ ಮನೆತನದ ಚಿಂತಪ್ಪ ಮುತ್ಯಾ ಅವರು ೧೦೦ ವರ್ಷಗಳ ಕಾಲ ತಮ್ಮ ಮನೆಯಲ್ಲಿಯೇ ಈ ಪುರಾಣವನ್ನು ನಡೆಸಿಕೊಂಡು ಬಂದಿದ್ದಾರೆ. ಪಾರಂಭದಿಂದಲೂ ಒಂದೇ ಪುರಾಣ ಪುಸ್ತಕವನ್ನು ಬಳಸುತ್ತ ಬಂದಿದ್ದಾರೆ.
ಈ ಪುರಾಣ ಕೃತಿಯ ಬಗ್ಗೆ ಅನೇಕ ವದಂತಿಗಳಿವೆ. ಈ ಪುರಾಣಕ್ಕಾಗಿ ಸಂಗ್ರಹಿಸಿದ ಹಣ ಬಳಸಿದ ವ್ಯಕ್ತಿ ಆರ್ಥಿಕವಾಗಿ ಸರ್ವ ನಾಶವಾಗಿ ಊರನ್ನೆ ಬಿಡಬೇಕಾದ ಪ್ರಸಂಗ ಬಂತಂತೆ. ಇನ್ನೊಂದು ಊರಿಗೆ ಪ್ಲೇಗ್ ಬಂದಾಗ ಊರಹೊರಗೆ ಗುಡಿಸಲಲ್ಲಿ ಈ ಗ್ರಂಥ ಇಟ್ಟು ಪೂಜಿಸುತ್ತಿದ್ದರಂತೆ. ಆಕಸ್ಮಿಕವಾಗಿ ಬೆಂಕಿ ಬಿದ್ದು ಗುಡಿಸಲು ಸುಟ್ಟರೂ ಈ ಗ್ರಂಥಕ್ಕೇನೂ ಆಗಿರಲಿಲ್ಲವಂತೆ.
ಚಿಂತಪ್ಪ ಮುತ್ಯಾ ಊರು ಬಿಡುವ ಮುಂಚೆ ಈ ಗ್ರಂಥವನ್ನು ಊರ ಹಿರಿಯರಾದ ಶಂಕರಗೌಡ ಗುರುಸಂಗಪ್ಪಗೌಡ ಕೋಣ್ಯಾಳ ಇವರಿಗೆ ಒಪ್ಪಿಸಿ ಪುರಾಣ ಪಠಣ ಮುಂದುವರೆಸುವಂತೆ ತಿಳಿಸಿದರಂತೆ.
ಅದನ್ನು ಪಾಲಿಸಲು ಊರ ಮುಂದಿನ ಹೊಲದಲ್ಲಿ ಸಚ್ಚಿದಾನಂದ ಮಠ ಕಟ್ಟಿಸಿ ಚಂದ್ರಶೇಖರ ಸ್ವಾಮಿಗಳಿಂದ ಪುರಾಣ ಪ್ರವಚನವನ್ನು ಮುಂದುವರೆಸಿದರಂತೆ.
೧೯೬೪ ಇಸ್ವಿಯಿಂದ ಈ ಮಠ ಅಧ್ಯಾತ್ಮದ ಪ್ರಸಾರ ಮಾಡುತ್ತ ಬಂದಿದೆ. ಈಗಲೂ ಪ್ರಸಾರ ಕಾರ್ಯವನ್ನು ಮುಂದುವರೆಸಿದೆ.
ಚಂದ್ರಶೇಖರ ಶಿವಯೋಗಿಗಳ ಮರಣಾನಂತರ ಶಂಕರಗೌಡರೆ ಶರಣರಾಗಿ ಪುರಾಣ ಪ್ರವಚನ ಮಾಡಿದರು. ಈಗ ಊರ ಮುಂದೆ ಶ್ರೀ ಮನ್ ಮಹದೇವಿ ಮಂದಿರ, ಚಿಂತಪ್ಪ ಮುತ್ಯಾ ಮಂದಿರ, ಶ್ರೀ ಚಂದ್ರಶೇಖರ ಶಿವಯೊಗಿ ಮಂದಿರ ಕಟ್ಟಿಸಿ ಸುಂದರ ಪರಿಸರ ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಜಾತ್ರೆಯ ಸಂದರ್ಭದಲ್ಲಿ ತೇರನ್ನು ಎಳೆಯಲಾಗುತ್ತದೆ.ಇದರ ವಿಶೇಷತೆಯಂದರೆ ಊರಿನ ಹೆಣ್ಣುಮಕ್ಕಳು ೨ ಲಕ್ಷಕ್ಕಿಂತಲೂ ಹೆಚ್ಚು ಹಣ ಸೇರಿಸಿ ಈ ತೇರನ್ನು ಮಾಡಿಸಿದ್ದಾರೆ ಅಷ್ಟೆ ಅಲ್ಲ ತೇರನ್ನು ಈ ಹೆಣ್ಣುಮಕ್ಕಳೇ ( ಈ ಊರಲ್ಲಿ ಹುಟ್ಟಿದ, ಪರಊರಿಗೆ ಕೊಟ್ಟ ಹೆಣ್ಣುಮಕ್ಕಳು ) ಎಳೆಯುತ್ತಾರೆ.
ಹೀಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿದ ಈ ಊರು ಸದಾ ಸುಭಿಕ್ಷವಾಗಿದೆ. ಬೇರೆಲ್ಲಿ ಮಳೆಯಾಗಿರದಿದ್ದರೂ ಇಲ್ಲಿ ಮಳೆಯಾಗಿ ಉತ್ತಮ ಫಸಲು ಬರುತ್ತದೆಂಬುದು ಇಲ್ಲಿಯ ಭಕ್ತರ ನಂಬಿಕೆ.
ನೀಲಮ್ಮ ಕೋಣ್ಯಾಳ ಬಿ,ಎ,೨
Thursday, August 5, 2010
Subscribe to:
Post Comments (Atom)
No comments:
Post a Comment